ಮಂಗಳೂರು: ನಗರದ ದೈವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಅಪಚಾರ ಮಾಡಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಈ ಮಾಹಿತಿ ನೀಡಿದರು. ಮಂಗಳೂರಿನ ಜೋಕಟ್ಟೆ ನಿವಾಸಿಗಳಾದ ಅಬ್ದುಲ್ ರಹೀಂ, ಅಬ್ದುಲ್ ತೌಫೀಕ್ ಬಂಧಿತ ಆರೋಪಿಗಳು.
ಇದನ್ನೂ ಓದಿ:ಸಹೋದರಿಯೊಂದಿಗೆ ಮಾತನಾಡಲು ಬಿಡಿ: ಸಿ.ಡಿ ಯುವತಿಯ ತಮ್ಮನ ಅಳಲು
ಮೂರು ತಿಂಗಳಲ್ಲಿ ಕಾಣಿಕೆ ಹುಂಡಿಗಳಿಗೆ ಕಾಂಡೋಮ್, ಅಶ್ಲೀಲ ಬರಹಗಳ ಚೀಟಿ ಹಾಕಿ ದುಷ್ಕೃತ್ಯ ಎಸಗುತ್ತಿದ್ದ ನಾಲ್ಕೈದು ಪ್ರಕರಣ ಬೆಳಕಿಗೆ ಬಂದಿತ್ತು. ಪಾಂಡೇಶ್ವರ, ಕದ್ರಿ, ಉಳ್ಳಾಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಹಲವು ತನಿಖೆ ನಡೆಸಿದ್ದರೂ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಆದರೆ ಬುಧವಾರ ಎಮ್ಮೆಕೆರೆ ಕೊರಗಜ್ಜ ದೈವಸ್ಥಾನಕ್ಕೆ ಇಬ್ಬರು ಆರೋಪಿಗಳು ಬಂದಿದ್ದರು. ಈ ಸಂಬಂಧ ಮಾಹಿತಿ ಪಡೆದು ಇಬ್ಬರನ್ನು ಬಂಧಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫೀಕ್ ರ ಸ್ನೇಹಿತ ನವಾಝ್ ಎಂಬಾತ ದೈವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದ. ಆತ ಮಂತ್ರವಾದಿ ಎಂಬಂತೆ ತನ್ನನ್ನು ತಾನೂ ಬಿಂಬಿಸಿಕೊಂಡಿದ್ದ. ಅವನೊಂದಿಗೆ ಕೃತ್ಯ ನಡೆಸುತ್ತಿದ್ದೆವು. ಆದರೆ ಕೃತ್ಯವೆಸಗಿದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ ನವಾಝ್, ರಕ್ತವಾಂತಿ ಮಾಡಿ ಸಾವನ್ನಪ್ಪಿದ್ದ.
ಇದನ್ನೂ ಓದಿ: ಗಡಿ ಭದ್ರತಾ ಪಡೆಯಲ್ಲಿ ಅವಕಾಶ ಪಡೆದ ಬೈಂದೂರಿನ ಯುವತಿ
ಆದರೆ ಸಾವಿಗಿಂತ ಮೊದಲು ಕೊರಗಜ್ಜನ ಶಾಪವಿದೆ ಎನ್ನುವಂತೆ ನವಾಝ್ ಅನಿಸಿಕೆ ಹಂಚಿಕೊಂಡಿದ್ದ. ಸ್ನೇಹಿತ ನವಾಝ್ ಸಾವಿನ ಬಳಿಕ ತೌಫೀಕ್ ಗೂ ಅನಾರೋಗ್ಯ ಸಮಸ್ಯೆ ಕಾಡಿತ್ತು. ಇದರಿಂದ ಭೀತಿಗೊಳಗಾಗಿದ್ದ ಆರೋಪಿಗಳು ಎಮ್ಮೆಕೆರೆ ಕೊರಗಜ್ಜ ದೈವಸ್ಥಾನಕ್ಕೆ ತಪ್ಪು ಕಾಣಿಕೆ ಹಾಕಲು ಬಂದಿದ್ದರು. ಈ ವೇಳೆ ಸೆರೆ ಹಿಡಿಯಲಾಗಿದೆ. ತನಿಖೆಯಲ್ಲಿ ಮಾಡಿರುವ ಕೃತ್ಯಗಳ ಬಗ್ಗೆ ಆರೋಪಿಗಳು ಹೇಳಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.