ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿದ ಸ್ಫೋಟದಲ್ಲಿ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಮೇಜರ್ ಶ್ರೇಣಿಯ ಅಧಿಕಾರಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಭಯೋತ್ಪಾದಕರು ಸೇನೆಯ ಮೇಲೆ ದಾಳಿ ನಡೆಸಿ ಐವರು ಯೋಧರು ಹುತಾತ್ಮರಾದ ಘಟನೆಗೆ ಕಾರಣರಾದ ಉಗ್ರರನ್ನು ಹೊಡೆದುರುಳಿಸಲು ಸೇನೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ, ಪ್ರತೀಕಾರವಾಗಿ ಸ್ಫೋಟಕ ಸಾಧನವನ್ನು ಎಸೆದರು. ಈ ವೇಳೆ ಸೇನಾ ತಂಡದಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದಾರೆ ಮತ್ತು ಅಧಿಕಾರಿ ಸೇರಿದಂತೆ ಇನ್ನೂ ನಾಲ್ವರು ಸೈನಿಕರು ಗಾಯಗೊಂಡರು ಎಂದು ವಕ್ತಾರರು ಹೇಳಿದರು.
ಗಾಯಗೊಂಡ ಸಿಬ್ಬಂದಿಯನ್ನು ಉಧಂಪುರದ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಸೇನೆ ತಿಳಿಸಿದೆ.
Related Articles
ಇದೀಗ ಕಾರ್ಯಾಚರಣೆಯನ್ನು ಬಲಪಡಿಸಲು ಹೆಚ್ಚುವರಿ ತಂಡಗಳನ್ನು ಎನ್‌ಕೌಂಟರ್ ಸ್ಥಳಕ್ಕೆ ಕಳುಹಿಸಲಾಗಿದೆ.
ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಸೇನೆ ತಿಳಿಸಿದೆ.