Advertisement

ಯಾನಾಗುಂದಿ ಟ್ರಸ್ಟ್ ನಡಿ ಎರಡೂವರೆ ಕೋಟಿ ಆಸ್ತಿ

09:54 PM Mar 22, 2021 | Team Udayavani |

ಸೇಡಂ: ಶ್ರೀಕ್ಷೇತ್ರ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಟ್ರಸ್ಟ್‌ನಡಿ 2.53 ಕೋಟಿ ರೂ. ನಗದು ಇದೆ ಎಂದು ಟ್ರಸ್ಟ್‌ ಖಜಾಂಚಿ, ನಿವೃತ್ತ ಡಿವೈಎಸ್ಪಿ ಸಿದ್ರಾಮಪ್ಪ ಸಣ್ಣೂರ ತಿಳಿಸಿದ್ದಾರೆ.

Advertisement

ತಾಲೂಕಿನ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಆಶ್ರಮದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಟ್ರಸ್ಟ್‌ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆಸ್ತಿಯ ವಿವರ ಕೇಳುತ್ತಿದ್ದಾರೆ. ಇದರು ಸರಿಯಾದ ಕ್ರಮವಲ್ಲ ಎಂದು ಹೇಳಿದರು. ಟ್ರಸ್ಟ್‌ನಡಿ ಮಾತಾ ಮಾಣಿಕೇಶ್ವರಿ ಅಮ್ಮನವರ ಆಶಯದಂತೆ ಆಸ್ಪತ್ರೆ, ಮೆಡಿಕಲ್‌ ಹಾಗೂ ಇಂಜಿನಿಯರಿಂಗ್‌ ಕಾಲೇಜು ಸ್ಥಾಪನೆ ಸೇರಿದಂತೆ ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಲ್ಪಿಸುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈ ನಿಟ್ಟಿನಲ್ಲಿ ಹಲವಾರು ಬಾರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅನುದಾನ ನೀಡುವಂತೆ ಕೋರಲಾಗಿದೆ.

ಆದರೂ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿ ಸಿಲ್ಲ ಎಂದು ತಿಳಿಸಿದರು. ಟ್ರಸ್ಟಿ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ಪರ್ವತರೆಡ್ಡಿ ಪಾಟೀಲ ನಾಮವಾರ ಮಾತನಾಡಿ, ಟ್ರಸ್ಟ್‌ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿದ್ಧಾರೆ. ಟ್ರಸ್ಟ್‌ನಲ್ಲಿ ಸೇರಿಸಿಕೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಬೆಳವಣಿಗೆಯನ್ನು ಮುಂದಿನ ದಿನಗಳಲ್ಲಿ ಸಭೆ ಸೇರಿ ಎಲ್ಲರೂ ಒಟ್ಟಾಗಿ ಸೇರಿ ಪರಿಹರಿಸಿಕೊಳ್ಳಲಾಗುವುದು ಎಂದರು. ಮಾಜಿ ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಮಾತಾ ಮಾಣಿಕೇಶ್ವರಿ ಆಶ್ರಮಕ್ಕೆ ಭಕ್ತರೇ ದೊಡ್ಡವರು. ಟ್ರಸ್ಟ್ ನವರ ಮನಪರಿವರ್ತನೆ ಆಗಬೇಕು. ಟ್ರಸ್ಟ್‌ ಕಾರ್ಯದರ್ಶಿ ಶಿವಯ್ಯಸ್ವಾಮಿ ಪರಿವರ್ತನೆ ಆಗಬೇಕು.

ಅಮ್ಮನವರ ಮಾರ್ಗದರ್ಶನದಲ್ಲಿ ಟ್ರಸ್ಟ್‌ ಮುನ್ನಡೆಸಿಕೊಂಡು ಹೋಗುತ್ತಿರುವ ಟ್ರಸ್ಟ್‌ ಕಾರ್ಯದರ್ಶಿ ಶಿವಯ್ಯಸ್ವಾಮಿ ಪರಿವರ್ತನೆಯಾಗಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈಗಿರುವ ಟ್ರಸ್ಟ್‌ ರದ್ದುಪಡಿಸಿ, ಹೊಸ ಟ್ರಸ್ಟ್‌ ರಚಿಸಿ ಹೊಸ ಅಭಿವೃದ್ಧಿಪರ ಮುಖಗಳಿಗೆ ಅವಕಾಶ ಕೊಡಬೇಕು ಎಂದು ಹೇಳಿದರು. ಟ್ರಸ್ಟ್‌ ಕಾರ್ಯದರ್ಶಿ ಶಿವಯ್ಯಸ್ವಾಮಿ, ಮೌಲಾಲಿ ಅನಪುರ, ಮಂದಾರ ನಾರಾಯಣಪೇಟ, ಹಣಮಂತ ಮಡ್ಡಿ, ಶಿವರಾಮರೆಡ್ಡಿ, ಜಗಜೀವನರೆಡ್ಡಿ, ಜ್ಞಾನೇಶ್ವರ ಹೈದ್ರಾಬಾದ್‌, ಬಸವರಾಜಪ್ಪ ದರ್ಶನಾಪುರ, ಕಿಷ್ಟಪ್ಪ ಮಾಸ್ತರ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next