Advertisement

Imprisonment: ಅಲ್‌ಖೈದಾ ಇಬ್ಬರು ಸದಸ್ಯರಿಗೆ 7 ವರ್ಷ ಜೈಲು ಶಿಕ್ಷೆ

01:46 PM Dec 28, 2023 | Team Udayavani |

ಬೆಂಗಳೂರು: ನಿಷೇಧಿತ ಅಲ್‌ಖೈದಾ ಉಗ್ರ ಸಂಘಟನೆ ಜತೆ ಸಂಪರ್ಕದಲ್ಲಿದ್ದ ಆರೋಪದಡಿ ಬಂಧನಕ್ಕೊಳಗಾದ ಇಬ್ಬರು ಶಂಕಿತ ಉಗ್ರರಿಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದ 7 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

Advertisement

ಅಸ್ಸಾಂ ಮೂಲದ ಅಖ್ತರ್‌ ಹುಸೇನ್‌ ಲಷ್ಕರ್‌ (24) ಮತ್ತು ಪಶ್ಚಿಮ ಬಂಗಾಳ ಮೂಲದ ಅಬ್ದುಲ್‌ ಅಲೀಮ್‌ ಮೊಂಡಲ್‌ ಅಲಿಯಾಸ್‌ ಎಂಡಿ ಜುಬಾನ್‌(23) ಶಿಕ್ಷೆಗೊಳಗಾದ ಶಂಕಿತ ಉಗ್ರರು. ಅಖ್ತರ್‌ ಹುಸೇನ್‌ ಲಷ್ಕರ್‌ಗೆ 41 ಸಾವಿರ ರೂ. ಮತ್ತು ಅಬ್ದುಲ್‌ ಅಲೀಮ್‌ ಮೊಂಡಲ್‌ಗೆ 51 ಸಾವಿರ ರೂ. ದಂಡ ವಿಧಿಸಲಾಗಿದೆ.

ಶಂಕಿತ ಉಗ್ರರು ವಿದೇಶದಲ್ಲಿರುವ ಅಲ್‌ಖೈದಾ ಸಂಘಟನೆ ಸದಸ್ಯರ ಜತೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಯನ್‌(ಖಾಸಗಿ ಸಂವಹನ ವ್ಯವಸ್ಥೆ) ಮಾಡಿದ ಸಾಮಾಜಿಕ ಜಾಲತಾಣಗಳ ಮೂಲದ ಸಂಪರ್ಕದಲ್ಲಿದ್ದರು.

ಪ್ರಮುಖವಾಗಿ ಟೆಲಿಗ್ರಾಂ ಆ್ಯಪ್‌ನಲ್ಲಿ ವಿದೇಶಿ ಹ್ಯಾಂಡ್ಲರ್‌ಗಳ ಜತೆ ಸಂವಹನ ನಡೆಸುತ್ತಿದ್ದರು. ಈ ಆ್ಯಪ್‌ ಮೂಲಕ ಪಶ್ಚಿಮ ಬಂಗಾಳ, ಅಸ್ಸಾಂ ಮೂಲದ ಯುವಕರನ್ನು ಸಂಪರ್ಕಿಸಿ, ಉಗ್ರ ಸಂಘಟನೆಗೆ ನೇಮಕ ಮಾಡಲು ಯತ್ನಿಸಿದ್ದು, ಉಗ್ರ ಸಂಘಟನೆ ದೇಶದಲ್ಲಿ ನಡೆಸಲು ಉದ್ದೇಶಿಸಿದ ಅಕ್ರಮ ಚಟುವಟಿಕೆಗಳ ಬಗ್ಗೆ ಚರ್ಚಿಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಎನ್‌ಐಎ ತಿಳಿಸಿದೆ.

ಆಫ್ಘಾನಿಸ್ತಾನಕ್ಕೆ ತೆರಳಲು ಸಿದ್ಧತೆ: ಅಲ್ಲದೆ, ಅಲ್‌ಖೈದಾ ಸಂಘಟನೆ ಹೆಚ್ಚು ಸಕ್ರಿಯವಾಗಿರುವ ಆಫ್ಘಾನಿಸ್ತಾನದ ಖಾರಾಸನ್‌ ಪ್ರಾಂತ್ಯಕ್ಕೆ ಜಮ್ಮು ಮತ್ತು ಕಾಶ್ಮೀರದ ಮೂಲಕ ತೆರಳಲು ಇಬ್ಬರು ಶಂಕಿತರು ಸಿದ್ಧತೆ ನಡೆಸಿದ್ದು, ಅಲ್ಲಿಯೇ ಉಗ್ರ ತರಬೇತಿ ಪಡೆದು ದೇಶಕ್ಕೆ ವಾಪಸ್‌ ಬಂದು ಇಲ್ಲಿ ಸಂಘಟನೆಯನ್ನು ಸಕ್ರಿಯವಾಗಿರಿಸಲು ಯೋಜನೆ ರೂಪಿಸಿದ್ದರು. ಆ ನಂತರ ಕರ್ನಾಟಕ ಸೇರಿ ದೇಶದ ಕೆಲ ರಾಜ್ಯಗಳ ನಿರ್ದಿಷ್ಟ ಸಮುದಾಯದ ಯುವಕರನ್ನು ಸಂಘಟನೆಗೆ ಸೇರಿಸಲು ರೂಪುರೇಷೆ ಸಿದ್ಧಪಡಿಸಿದ್ದರು ಎಂದು ಎನ್‌ಐಎ ತಿಳಿಸಿದೆ. ಶಂಕಿತರ ವಿರುದ್ಧ ಎನ್‌ಐಎ 2022ರ ಆಗಸ್ಟ್‌ನಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿತ್ತು.

Advertisement

2022ರಲ್ಲಿ ನಗರದಲ್ಲಿ ಶಂಕಿತರಿಬ್ಬರ ಬಂಧನ:

ಅಸ್ಸಾಂನ ಕಚಾರ್‌ ಜಿಲ್ಲೆಯ ತೆಲಿತಿಕಾರ್‌ ಗ್ರಾಮದ ಅಖ್ತರ್‌ 2 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು, ತಿಲಕನಗರದ ಬಿಟಿಬಿ ಲೇಔಟ್‌ನ 3ನೇ ಕ್ರಾಸ್‌ನ ಫ‌ನಿ ಮಸೀದಿ ಸಮೀಪದ ಬಾಡಿಗೆ ಮನೆಯಲ್ಲಿ ಮೂವರು ಸ್ನೇಹಿತರ ಜತೆ ವಾಸವಾಗಿದ್ದ. ಹಗಲು ವೇಳೆ ಹೆಚ್ಚು ಓಡಾಡದೆ, ಸಂಜೆ 4ರ ನಂತರ ಫ‌ುಡ್‌ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ.

ಸ್ಥಳೀಯರೊಂದಿಗೆ ಹೆಚ್ಚು ಮಾತನಾಡದ ಈತ, ಟೀ, ಬೇಕರಿ, ಕೆಲ ಸಾರ್ವಜನಿಕ ಪ್ರದೇಶಗಳಲ್ಲಿ ನಿರ್ದಿಷ್ಟ ಸಮುದಾಯದ ಯುವಕರ ಜತೆ ಹೆಚ್ಚು ಕಾಲ ಕಳೆಯುತ್ತಿದ್ದ. ಅವರೊಂದಿಗೆ “ಜಿಹಾದಿ’ ಬಗ್ಗೆ ಪ್ರತಿಪಾದಿಸುತ್ತಿದ್ದ. ಈ ಮಾಹಿತಿ ಮೇರೆಗೆ ಜುಲೈನಲ್ಲಿ ಸಿಸಿಬಿಯ ಅಂದಿನ ಜಂಟಿ ಪೊಲೀಸ್‌ ಆಯುಕ್ತ ಡಾ.ಶರಣಪ್ಪ ನೇತೃತ್ವದ ತಂಡ ಕೇಂದ್ರ ತನಿಖಾ ಸಂಸ್ಥೆ ಜತೆ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಆ ಬಳಿಕ ಈತನ ಮಾಹಿತಿ ಮೇರೆಗೆ ತಮಿಳುನಾಡನಲ್ಲಿ ತಲೆಮರೆಸಿಕೊಂಡಿದ್ದ ಜುಬಾನ್‌ನನ್ನು ಬಂಧಿಸಲಾಗಿತ್ತು. ಈ ಸಂಬಂಧ ತಿಲಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಳಿಕ ವಿಚಾರಣೆಯಲ್ಲಿ ಅಖ್ತರ್‌, ಟೆಲಿಗ್ರಾಂನಲ್ಲಿ “ದಿ ಈಗಲ್‌ ಆಫ್ ಕೊರಾಸನ್‌ ಆ್ಯಂಡ್‌ ಹಿಂಡರ್‌-ಈಗಲ್‌’ ಎಂಬ ಗ್ರೂಪ್‌ಗಳನ್ನು ರಚಿಸಿಕೊಂಡಿದ್ದ. ಅದರಲ್ಲಿ ಅಸ್ಸಾಂ ಮತ್ತು ನಗರದ ಕೆಲವರನ್ನು ಸೇರಿಸಿಕೊಂಡು ಉಗ್ರ ಪ್ರೇರಿತ ಪೋಸ್ಟ್‌ಗಳನ್ನು ಮಾಡುತ್ತಾ ಯುವಕರನ್ನು “ಮೂಲಭೂತವಾದಿ’ಗಳಾಗಿ ಪರಿವರ್ತಿಸುತ್ತಿದ್ದ. ಈತನ ಪ್ರಚೋದನಕಾರಿ ಪೋಸ್ಟ್‌ಗಳ ಬಗ್ಗೆ ಆಸಕ್ತಿ ಹೊಂದಿದ್ದ ಯುವಕರಿಗೆ ಕಾಶ್ಮೀರ ಮತ್ತು ಅಫ್ಘಾನಿಸ್ತಾನದ ಖುರಾಸನ್‌ ಪ್ರಾಂತ್ಯಕ್ಕೆ ಕಳುಹಿಸಿ, ಭಯೋತ್ಪಾದನಾ ತರಬೇತಿ ನೀಡಲು ಸಂಚು ರೂಪಿಸಿದ್ದ ಎಂಬುದು ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next