ಬೆಂಗಳೂರು: ಅನೈತಿಕ ಸಂಬಂಧ ಹೊಂದಿರುವುದಾಗಿ ಅನಗತ್ಯವಾಗಿ ಅನುಮಾನ ವ್ಯಕ್ತಪಡಿಸಿ ಮದ್ಯದ ಅಮಲಿನಲ್ಲಿ ಹಲ್ಲೆ ನಡೆಸುತ್ತಿದ್ದ ಪತಿಯನ್ನು ಪತ್ನಿಯೊಬ್ಬಳು ತನ್ನ ಸಂಬಂಧಿ ಯುವಕನ ಜತೆ ಸೇರಿ ಕೊಲೆಗೈದು, ಮೂರ್ಛೆ ರೋಗದಿಂದ ಮೃತಪಟ್ಟಿದ್ದಾನೆ ಎಂದು ನಂಬಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಕೋಣನಕುಂಟೆ ಪೊಲೀಸರು ಶಿಲ್ಪಾ ಮತ್ತು ಆಕೆಯ ತಾಯಿ ಕೆಂಪದೇವಮ್ಮ ಎಂಬುವರನ್ನು ಬಂಧಿಸಿದ್ದು, ಮತ್ತೂಬ್ಬ ಆರೋಪಿ ಬಾಲಾಜಿ ಎಂಬಾತನಿಗೆ ಶೋಧ ನಡೆಸುತ್ತಿದ್ದಾರೆ. ಆರೋಪಿಗಳು ಮಹೇಶ್ ಎಂಬಾತನನ್ನು ಸೆ.1ರಂದು ಕೊಲೆಗೈದಿದ್ದರು. ಮಳ್ಳವಳ್ಳಿ ತಾಲೂಕಿನ ಮಹೇಶ್ 8 ವರ್ಷಗಳ ಹಿಂದೆ ಉಪ್ಪಲಗೆರೆಕೊಪ್ಪಲಿನ ಶಿಲ್ಪಾ ಎಂಬಾಕೆಯನ್ನು ಮದುವೆಯಾಗಿದ್ದು, ದಂಪ ತಿಗೆ 6 ವರ್ಷದ ಮಗ ಇದೆ. ಬೆಂಗಳೂರಿನ ಗೌಡನಪಾಳ್ಯದಲ್ಲಿ ವಾಸವಾಗಿದ್ದರು. ಈ ಮಧ್ಯೆ ಮಹೇಶ್ ಮದ್ಯ ಸೇವಿಸಿ ಬಂದು ಪತ್ನಿ ಶಿಲ್ಪಾಗೆ ಹಲ್ಲೆ ನಡೆಸುತ್ತಿದ್ದ. ಹೀಗಾಗಿ ಆಕೆ, ಸಮೀಪದಲ್ಲಿರುವ ತವರು ಮನೆಗೆ ಹೋಗುತ್ತಿದ್ದಳು. ಅದರಿಂದ ಬೇಸತ್ತ ಆಕೆ, ಸಂಬಂಧಿಗಳಿಗೆ ತಿಳಿಸಿ, ಆತನ ಮೇಲೆ ಹಲ್ಲೆ ನಡೆಸುತ್ತಿದ್ದಳು ಎಂದು ಮಹೇಶ್ ಸಹೋದರ ಶಿವಕುಮಾರ್ ದೂರಿನಲ್ಲಿ ತಿಳಿಸಿದ್ದರು ಎಂದು ಪೊಲೀಸರು ಹೇಳಿದರು.
ಕಬ್ಬಿಣದ ರಾಡ್, ದೊಣ್ಣೆಯಿಂದ ಹಲ್ಲೆ, ಕೊಲೆ: ಸೆ.1ರಂದು ಶಿಲ್ಪಾ ಮತ್ತು ಆಕೆಯ ತಾಯಿ ಕೆಂಪದೇವಮ್ಮ ಮತ್ತು ಸಹೋದರಿಯ ಪುತ್ರ ಬಾಲಾಜಿ ಜತೆ ಸೇರಿಕೊಂಡು ಮಹೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಕಬ್ಬಿಣದ ರಾಡ್ ಮತ್ತು ದೊಣ್ಣೆಯಿಂದ ಹೊಡೆದಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತದೇಹ ತವರಿಗೆ ತಂದಾಗ ಕೃತ್ಯ ಬಯಲು : ಘಟನೆ ನಂತರ ಮಹೇಶ್ ಸಹೋದರ ಶಿವಕುಮಾರ್‌ಗೆ ಶಿಲ್ಪಾ ಕರೆ ಮಾಡಿ, ಮೂರ್ಛೆ ರೋಗದಿಂದ ಮಹೇಶ್ ಮೃತ ಪಟ್ಟಿದ್ದಾನೆ ಎಂದು ಹೇಳಿ, ಮೃತದೇಹವ ನ್ನು ಸ್ವಂತ ಊರಿಗೆ ಕರೆದೊಯ್ದಿದ್ದರು. ಆಗ ಅನುಮಾನಗೊಂಡ ಶಿವಕುಮಾರ್, ಮಹೇಶ್ ಮೃತದೇಹವನ್ನು ಪರೀಕ್ಷಿಸಿ ದಾಗ ಹಲ್ಲೆಗೊಳಗಾಗಿ ಮೃತಪಟ್ಟಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಮಳವಳ್ಳಿ ಪೊಲೀಸು ಶಿಲ್ಪಾ ಮತ್ತು ಕೆಂಪದೇವಮ್ಮರನ್ನು ವಶಕ್ಕೆ ಪಡೆದುಕೊಂಡಿದ್ದರು. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.