ಹೊಸದಿಲ್ಲಿ: ಮೈಕ್ರೋ ಬ್ಲಾಗಿಂಗ್ ಸಂಸ್ಥೆ ಟ್ವಿಟರ್ ಕೊನೆಗೂ ಭಾರತದಲ್ಲಿ ಖಾತೆದಾರರ ಕುಂದು-ಕೊರತೆ ಪರಿಹರಿಸುವ ಅಧಿಕಾರಿಯನ್ನು (ರೆಸಿಡೆಂಟ್ ಗ್ರಿವೆನ್ಸ್ ಆಫೀಸರ್) ನೇಮಿಸಿದೆ. ವಿನಯ ಪ್ರಕಾಶ್ ಎಂಬವರನ್ನು ಈ ಹುದ್ದೆಗೆ ನೇಮಿಸಿದೆ. ಜತೆಗೆ ಬೆಂಗಳೂರಿನ ಡಿಕೆನ್‌ಸನ್ ರಸ್ತೆಯಲ್ಲಿ ಅದರ ಕಚೇರಿಯೂ ಇರಲಿದೆ ಎಂದು ಟ್ವಿಟರ್ ಹೇಳಿದೆ.
ಜಗತ್ತಿನ ಕುಂದುಕೊರತೆ ಪರಿಹಾರ ಅಧಿಕಾರಿಯಾಗಿ ಜೆರೆಮಿ ಕೆಸ್ಸೆಲ್ ಇದ್ದಾರೆ. ಯಾವುದೇ ರೀತಿಯ ದೂರುಗಳಿದ್ದಲ್ಲಿ grievance-officer-in@twitter.com’ ಗೆ ಇ-ಮೇಲ್ ಮೂಲಕ ದೂರು ಸಲ್ಲಿಸಲು ಅವಕಾಶ ಇದೆ. ಅಂಚೆ ಮೂಲಕ ದೂರು ಸಲ್ಲಿಸುವುದಿದ್ದರೆ 4ನೇ ಮಹಡಿ, ದ ಎಸ್ಟೇಟ್ 121, ಡಿಕೆನ್‌ಸನ್ ರಸ್ತೆ, ಬೆಂಗ ಳೂರು 560042- ಇಲ್ಲಿಗೆ ಕಳುಹಿಸಬಹುದು ಎಂದು ಟ್ವಿಟರ್ ವೆಬ್ ಸೈ ಟ್ ನಲ್ಲಿ ಪ್ರಕಟಿಸಿದೆ. ಜು.8ರಂದು ದಿಲ್ಲಿ ಹೈಕೋರ್ಟ್ ಕುಂದುಕೊರತೆ ಪರಿಹಾರ ಅಧಿಕಾರಿ ನೇಮಿಸುವ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದಕ್ಕೆ ಟ್ವಿಟರ್ ಅನ್ನು ತರಾಟೆಗೆ ತೆಗೆದುಕೊಂಡಿತ್ತು.
ಕೇಂದ್ರಕ್ಕೆ ವರದಿ ಸಲ್ಲಿಕೆ: ಹೊಸ ಮಾಹಿತಿ ತಂತ್ರಜ್ಞಾನ ನಿಯಮದ ಅನ್ವಯ ಟ್ವಿಟರ್ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದೆ. ಖಾಸಗಿ ನಿಯಮ ಉಲ್ಲಂ ಸಿದ ಆರೋಪದಲ್ಲಿ 18 ಸಾವಿರ ಖಾತೆಗಳನ್ನು ಸಸ್ಪೆಂಡ್ ಮಾಡಿದ್ದು, 133 ಪೋಸ್ಟ್‌ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಿದೆ. 56 ದೂರುಗಳನ್ನು ಇತ್ಯರ್ಥಗೊಳಿಸಲಾಗಿದೆ. ಮಾನಹಾನಿಗೆ ಸಂಬಂಧಿಸಿದ 20, ಕಿರುಕುಳದ 6, ಅಶ್ಲೀಲ ಮಾಹಿತಿಯ 4, ಖಾಸಗಿತನ ಮತ್ತು ಪ್ರಚೋದನಾಕಾರಿ ಅಂಶದ ತಲಾ 3, ಬೌದ್ಧಿಕ ಹಕ್ಕು ಸ್ವಾಮ್ಯದ 1, ತಪ್ಪು ಮಾಹಿತಿ ಮತ್ತು ತಿರುಚಲಾಗಿರುವ ಮಾಹಿತಿಗೆ ಸಂಬಂಧಿಸಿದ 1 ದೂರುಗಳು ಬಂದಿವೆ. ನಿಗಾ ಇರಿಸುವ ವಿಭಾಗದಲ್ಲಿ 18,385 ಖಾತೆಗಳನ್ನು ಮಕ್ಕಳನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡದ್ದಕ್ಕೆ, ಬಲವಂತವಾಗಿ ಅಶ್ಲೀಲ ಫೋಟೋ ಅಪ್‌ಲೋಡ್ ಮಾಡಿದ್ದಕ್ಕೆ ಸಸ್ಪೆಂಡ್ ಮಾಡಲಾಗಿದೆ. 4,179 ಖಾತೆಗಳನ್ನು ಭಯೋತ್ಪಾದಕ ಅಂಶಗಳಿಗೆ ಪ್ರೋತ್ಸಾಹ ನೀಡಿದ್ದಕ್ಕೆ ಸಸ್ಪೆಂಡ್ ಮಾಡಲಾಗಿದೆ ಎಂದು ಹೇಳಿಕೊಂಡಿದೆ.