ನವದೆಹಲಿ: ಟ್ವಿಟ್ಟರ್ ನಿಂದ ಸುಮಾರು 1,70,000 ಅಕೌಂಟ್ ಗಳನ್ನು ತೆಗೆದುಹಾಕಲಾಗಿದೆ ಎಂದು ಸಂಸ್ಥೆ ಅಧಿಕೃತವಾಗಿ ಗುರುವಾರ (11-06-2020) ಮಾಹಿತಿ ನೀಡಿದೆ.
ಚೈನಾ ಸರ್ಕಾರದ ಪರವಾಗಿ ಪೋಸ್ಟ್ ಮಾಡುತ್ತಿದ್ದರಿಂದ ಇಷ್ಟೊಂದು ಪ್ರಮಾಣದ ಅಕೌಂಟ್ ಗಳನ್ನು ರಿಮೂವ್ ಮಾಡಲಾಗಿದೆ. ಮಾತ್ರವಲ್ಲದೆ ಹಾಂಕ್ ಕಾಂಗ್ ಪ್ರತಿಭಟನೆ, ಕೋವಿಡ್ 19 ಸೇರಿದಂತೆ ಇತರ ವಿಚಾರಗಳಿಗೆ ಚೈನಾ ಕಮ್ಯುನಿಷ್ಟ್ ಸರ್ಕಾರವನ್ನು ಬೆಂಬಲಿಸಿ ಪೋಸ್ಟ್ ಮಾಡಲಾಗುತ್ತಿತ್ತು ಎಂದು ಮಾಧ್ಯಮದ ವರದಿ ತಿಳಿಸಿದೆ.
ಈ ಕುರಿತು ಸ್ಪಷ್ಟನೆ ನೀಡಿದ ಟ್ವಿಟ್ಟರ್ , ರಿಮೂವ್ ಮಾಡಲಾಗಿರುವ ಅಕೌಂಟ್ ಗಳಲ್ಲಿ ಚೀನಾ ಸರ್ಕಾರದ ಪರವಾಗಿ ಹೆಚ್ಚಿನ ಒಲವು ವ್ಯಕ್ತಪಡಿಸಲಾಗುತ್ತಿತ್ತು. ಇದು ಭೌಗೋಳಿಕ ಸಮಸ್ಯೆಗೆ ಕಾರಣವಾಗುತ್ತಿರುವುದರಿಂದ ಮಾತ್ರವಲ್ಲದೆ ಟ್ವಿಟ್ಟರ್ ನೀತಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.ಅಮಾನತುಗೊಂಡ ಖಾತೆಗಳು ಚೀನಾದ ಭಾಷೆಗಳಲ್ಲಿ ಪ್ರಧಾನವಾಗಿ ಟ್ವೀಟ್ ಮಾಡಿವೆ ಎಂದು ಟ್ವಿಟರ್ ಹೇಳಿದೆ.
ಚೀನಾದಲ್ಲಿ ಟ್ವಿಟ್ಟರ್ ಸಾಮಾಜಿಕ ಜಾಲತಾಣವನ್ನು ಅಧಿಕೃತವಾಗಿ ನಿರ್ಬಂಧಿಸಲಾಗಿದೆ. ಆದರೂ ಅಲ್ಲಿನ ಜನರು ವಿಪಿಎನ್ ಮೂಲಕ ಟ್ವಿಟ್ಟರ್ ಖಾತೆಯನ್ನು ಬಳಸುತ್ತಾರೆ ಎಂದು ವರದಿ ತಿಳಿಸಿದೆ.
23,750 ಖಾತೆಗಳು ಕೋರ್ ನೆಟ್‌ವರ್ಕ್ ಆಗಿ ಚೀನಾಕ್ಕೆ ಅನುಕೂಲಕರವಾದ ವಿಷಯವನ್ನು ಟ್ವೀಟ್ ಮಾಡಲು ಬಳಸಲಾಗುತ್ತಿತ್ತು. ಮಾತ್ರವಲ್ಲದೆ 1,50,000 ಖಾತೆಗಳನ್ನು ಟ್ವೀಟ್ ಗಳನ್ನು ರೀಟ್ವೀಟ್ ಮಾಡಲು ಬಳಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.