Advertisement

ನೂತನ ಐಟಿ ನಿಯಮ: ಭಾರತದಲ್ಲಿ ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್? ಏನಿದು ವಿವಾದ

11:48 AM Jun 16, 2021 | Team Udayavani |

ನವದೆಹಲಿ: ಕೇಂದ್ರದ ನೂತನ ಐಟಿ ನಿಯಮದ ಅನುಸಾರ ಶಾಸನಬದ್ಧ ಅಧಿಕಾರಿಗಳನ್ನು ನೇಮಕ ಮಾಡಲು ವಿಫಲವಾದ ಕಾರಣ ಟ್ವಿಟರ್ ಭಾರತದಲ್ಲಿ ಕಾನೂನು ರಕ್ಷಣೆಯನ್ನು ಕಳೆದುಕೊಂಡಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ.

Advertisement

ಇದನ್ನೂ ಓದಿ:ಕೋವಿಶೀಲ್ಡ್ ಎರಡು ಡೋಸ್ ನಡುವಿನ ಅಂತರ ವೈಜ್ಞಾನಿಕ ಪುರಾವೆ ಆಧಾರದಲ್ಲಿ ವಿಸ್ತರಣೆ: ಕೇಂದ್ರ

ಮೂಲಗಳ ಪ್ರಕಾರ, ದೇಶದಲ್ಲಿನ ನೂತನ ಐಟಿ ನಿಯಮಗಳನ್ನು ಅನುಸರಿಸಲು ನಿರಾಕರಿಸಿರುವ ಸಾಮಾಜಿಕ ಜಾಲತಾಣವಾದ ಟ್ವಿಟರ್ ಭಾರತದಲ್ಲಿ ಕಾನೂನು ರಕ್ಷಣೆಯನ್ನು ಕಳೆದುಕೊಂಡಿರುವುದಾಗಿ ಬುಧವಾರ(ಜೂ.16) ತಿಳಿಸಿದೆ.

ಭಾರತದಲ್ಲಿನ ನೂತನ ಐಟಿ ನಿಯಮವನ್ನು ಟ್ವಿಟರ್ ಸಂಸ್ಥೆ ಪಾಲಿಸಬೇಕು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚಿಸಿತ್ತು. ಆದರೆ ಟ್ವಿಟರ್ ಕೇಂದ್ರದ ನೂತನ ಐಟಿ ನಿಯಮಕ್ಕೆ ಸಡ್ಡು ಹೊಡೆದಿತ್ತು. ಅಲ್ಲದೇ ಭಾರತದ ನೂತನ ಐಟಿ ಕಾಯ್ದೆಯನ್ನು ಅನುಸರಿಸುವುದಾಗಿ ಹೇಳಿತ್ತಾದರೂ, ಅದಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲವಾಗಿತ್ತು.

ಏನಿದು ಜಟಾಪಟಿ:
ಭಾರತದ ನೂತನ ಐಟಿ ಕಾನೂನು ಪ್ರಕಾರ ಟ್ವಿಟರ್ ಸ್ಥಳೀಯ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕಾಗಿತ್ತು. ಆದರೆ ಸ್ಥಳೀಯ ನೋಡಲ್ ಅಧಿಕಾರಿ ನೇಮಕಕ್ಕೆ ಟ್ವಿಟರ್ ವಿರೋಧ ವ್ಯಕ್ತಪಡಿಸಿತ್ತು. ಭಾರತದಲ್ಲಿನ ಟ್ವಿಟರ್ ಬಳಕೆದಾರರ ಪ್ರತಿ ದೂರುಗಳನ್ನು ಅಮೆರಿಕದಲ್ಲಿರುವ ಅಧಿಕಾರಿ ಪರಿಶೀಲಿಸಬೇಕು. ಇದರಲ್ಲಿ ಟ್ವಿಟರ್ ಹಿತಾಸಕ್ತಿ ಅಡಗಿದೆ ಎಂದು ಕೇಂದ್ರ ಸಚಿವಾಲಯ ಆರೋಪಿಸಿತ್ತು.

Advertisement

ನಾವು (ಟ್ವಿಟರ್) ನೇಮಕ ಮಾಡುವ ನೋಡಲ್ ಅಧಿಕಾರಿಯನ್ನೇ ಡಿಜಿಟಲ್ ಫ್ಲ್ಯಾಟ್ ಫಾರಂನಲ್ಲಿ ಪ್ರಕಟವಾಗುವ ಎಲ್ಲಾ ವಿಷಯಕ್ಕೂ ಹೊಣೆಗಾರರನ್ನಾಗಿ ಮಾಡುವುದು ಆಘಾತಕಾರಿ ಸಂಗತಿ. ನೂತನ ನಿಯಮಗಳ ಎಲ್ಲಾ ವಿಷಯಗಳನ್ನು ಪರಿಶೀಲನೆಗೆ ಗುರಿಪಡಿಸಬೇಕು ಎಂದು ಟ್ವಿಟರ್ ತಿಳಿಸಿತ್ತು.

ಕೇಂದ್ರಕ್ಕೆ ಮಣಿದ ಟ್ವಿಟರ್:
ಕೇಂದ್ರ ಸರ್ಕಾರ ಕಠಿನ ಕ್ರಮಕ್ಕೆ ಮುಂದಾದ ಬೆನ್ನಲ್ಲೇ ಟ್ವಿಟರ್ ಸಂಸ್ಥೆ ದೇಶದ ನೂತನ ಐಟಿ ನಿಮಯದ ಪ್ರಕಾರ ನೂತನ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿರುವುದಾಗಿ ತಿಳಿಸಿದೆ. ನಾವು ಕಾನೂನಿನಂತೆ ಪ್ರತಿಯೊಂದು ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ನಾವು ಕೈಗೊಂಡ ಕ್ರಮದ ಬಗ್ಗೆ ಶೀಘ್ರವೇ ಸಚಿವಾಲಯದ ಜತೆ ಮಾಹಿತಿ ಹಂಚಿಕೊಳ್ಳುವುದಾಗಿ ಟ್ವಿಟರ್ ವಕ್ತಾರ ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next