ಯಕ್ಷಗಾನದಲ್ಲಿ ಅಳಿವಿಲ್ಲದ ಛಾಪು ಮೂಡಿಸಿದ ಮೇರು ಕಲಾವಿದ ದಿ| ಅಳಿಕೆ ರಾಮಯ್ಯ ರೈಯವರ ಸ್ಮರಣಾರ್ಥ 2009ರಲ್ಲಿ ಅಳಿಕೆ ಸ್ಮಾರಕ ಟ್ರಸ್ಟ್ ಸ್ಥಾಪಿಸಿದ ಅಳಿಕೆ ಪ್ರಶಸ್ತಿಗೆ ಈ ಬಾರಿ ಭಾಜನರಾದವರು ತೆಂಕುತಿಟ್ಟಿನ ಅವಳಿ ವೀರರಾದ ಮಾಡಾವು ಕೊರಗಪ್ಪ ರೈ ಮತ್ತು ಮುಂಡಾಜೆ ಬಾಲಕೃಷ್ಣ ಶೆಟ್ಟಿ. ಎ.13ರಂದು ಮಂಗಳೂರಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರಶಸ್ತಿ ಪ್ರದಾನ ಜರಗಲಿದೆ. ಇದೇ ಸಂದರ್ಭದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ವಾಲಿಮೋಕ್ಷ ತಾಳಮದ್ದಳೆಯನ್ನೂ ಏರ್ಪಡಿಸಲಾಗಿದೆ. ಈರ್ವರೂ ಒಬ್ಬರೇ ಗುರುವಿನ ಶಿಷ್ಯರು. 1972ರಲ್ಲಿ ಧರ್ಮಸ್ಥಳದ ಯಕ್ಷಗಾನ ಲಲಿತ ಕಲಾಕೇಂದ್ರ ಆರಂಭವಾದಾಗ ಮೊದಲ ತಂಡದ ವಿದ್ಯಾರ್ಥಿಗಳಾಗಿ ಸೇರಿದವರು. ಬಳಿಕ ಅಳಿಕೆ ರಾಮಯ್ಯ ರೈ ಯವರಿದ್ದ ಕರ್ನಾಟಕ ಮೇಳದಲ್ಲಿ ಬಾಲಕಲಾವಿದರಾಗಿ ಸೇರ್ಪಡೆಗೊಂಡು ಮುಂದೆ ಪುಂಡು ವೇಷಧಾರಿಗಳಾಗಿ ಪ್ರಸಿದ್ಧರಾದವರು.
ಮಾಡಾವು ಕೊರಗಪ್ಪ ರೈ
ಕೊರಗಪ್ಪ ರೈ ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ದಿ| ಪಡ್ರೆ ಚಂದು ಅವರಿಂದ ಯಕ್ಷಗಾನದ ನಾಟ್ಯಾಭ್ಯಾಸ ಮಾಡಿ ಕರ್ನಾಟಕ ಮೇಳದ ಮೂಲಕ ವೃತ್ತಿರಂಗಭೂಮಿಗೆ ಪದಾರ್ಪಣೆ ಮಾಡಿದರು. ಬಳಿಕ ಬಪ್ಪನಾಡು, ಕದ್ರಿ, ಕಾಂತಾವರ ಮೇಳಗಳಲ್ಲಿ ಒಟ್ಟು ಒಂಭತ್ತು ವರ್ಷ ತಿರುಗಾಟ ನಡೆಸಿದರು. ಆ ಮೇಲೆ ದಿ| ಕುಬಣೂರು ಶ್ರೀಧರ ರಾಯರು ಅವರನ್ನು ಕಟೀಲು ಮೇಳಕ್ಕೆ ತರೆತಂದರು. ಇಪ್ಪತ್ತೆçದು ವರ್ಷಗಳಿಂದ ಅದೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಅಭಿಮನ್ಯು, ಬಬ್ರುವಾಹನ, ಲಕ್ಷ್ಮಣ, ಭಾರ್ಗವ, ಶ್ರೀಕೃಷ್ಣ, ಸುಧನ್ವ, ರೋಹಿತಾಶ್ವ, ಪ್ರಹ್ಲಾದ, ಚಂಡ-ಮುಂಡ, ಹುಂಡ-ಪುಂಡ, ಚಂಡ-ಪ್ರಚಂಡ ಹೀಗೆ ಬಹುತೇಕ ಪುಂಡುವೇಷಗಳನ್ನೇ ಮಾಡುವ ಅವರು ನಕ್ಷತ್ರಿಕ, ನಾರ್ವಾಕ, ಚತುರ್ಬಾಹು, ಚಂದ್ರದ್ಯುಮ್ನನಂತಹ ಹಾಸ್ಯ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಅಭಿನಯ, ಗತ್ತುಗಾರಿಕೆ ಹಾಗೂ ರಂಗಚಲನೆಗಳಲ್ಲಿ ಸ್ವಂತಿಕೆಯಿಂದ ಗಮನ ಸೆಳೆಯುತ್ತಾರೆ.
ಮುಂಡಾಜೆ ಬಾಲಕೃಷ್ಣ ಶೆಟ್ಟಿ
ಮುಂಡಾಜೆ ರಾಮಯ್ಯ ಶೆಟ್ಟಿ ಧರ್ಮಸ್ಥಳ ಯಕ್ಷಗಾನ ಕೇಂದ್ರದ ಆರಂಭದ ವರ್ಷವೇ ಕುರಿಯ ವಿಠಲ ಶಾಸ್ತ್ರಿ ಮತ್ತು ಪಡ್ರೆ ಚಂದು ಅವರಿಂದ ಯಕ್ಷಗಾನ ಕುಣಿತವನ್ನು ಅಭ್ಯಸಿಸಿ ಯಕ್ಷರಂಗಕ್ಕೆ ಕಾಲಿಟ್ಟರು. ಕರ್ನಾಟಕ ಯಕ್ಷಗಾನ ನಾಟಕ ಸಭಾದಲ್ಲಿ ಗೆಜ್ಜೆಕಟ್ಟಿದ ಅವರು ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಯಶಸ್ಸಿನ ಮೇಟ್ಟಿಲೇರಿದರು.
ಬೋಳಾರರ ಹಿರಣ್ಯಕಶಿಪುವಿಗೆ ಪ್ರಹ್ಲಾದನಾಗಿ, ಮಂಕುಡೆ ಮತ್ತು ಕೋಳ್ಯೂರು ಅವರ ಚಂದ್ರಮತಿಗೆ ರೋಹಿತಾಶ್ವನಾಗಿ ಬಾಲಪಾತ್ರಗಳನ್ನು ನಿರ್ವಹಿಸುತ್ತಿದ್ದ ಮುಂಡಾಜೆ ಮುಂದೆ ಅಭಿಮನ್ಯು, ಬಬ್ರುವಾಹನ, ಚಂಡ-ಮುಂಡ, ಕುಶ-ಲವ, ಭಾರ್ಗವ, ಅಯ್ಯಪ್ಪ, ಶಾಸ್ತಾರ ಮೊದಲಾದ ಪುಂಡುವೇಷಗಳಲ್ಲಿ ಖ್ಯಾತರಾದರು. ಮಾತುಗಾರಿಕೆಗಿಂತ ಕುಣಿತದ ಕಡೆಗೆ ಅವರು ಗಮನಕೊಟ್ಟುದುದು ಹೆಚ್ಚು. ತುಳು ಕೋಟಿ-ಚೆನ್ನಯ್ಯದ ಚೆನ್ನಯ್ಯ, ಪಟ್ಟದ ಪದ್ಮಲೆಯ ರಾಜಶೇಖರ, ಕಾಡಮಲ್ಲಿಗೆಯ ಶಾಂತಕುಮಾರ, ರಾಜಮುದ್ರಿಕೆಯ ವೀರಸೇನ, ಜಾಲಕೊರತಿಯ ಕುಂಞ, ಮಾಯಾ ಜುಮಾದಿಯ ಕರ್ಣಗೆ ಅವರಿಗೆ ಹೆಸರು ತಂದ ಪಾತ್ರಗಳು. ನಗುಮೊಗ, ಸ್ಪುರದ್ರೂಪ ಮತ್ತು ಚುರುಕಿನ ರಂಗಚಲನೆ ಅವರ ಧನಾಂಶ, ನೂರು ಧೀಂಗಿಣಗಳಿಲ್ಲದೆ ಅವರ ವೇಷ ನಿಲ್ಲುತ್ತಿರಲಿಲ್ಲ. ದೇವಿಮಹಾತೆ¾ಯ ಸುಪಾರ್ಶ್ವಕ ಮುನಿಯ ಮೂರು ಪದ್ಯಗಳಿಗೆ ಮುನ್ನೂರು ಗಿರಕಿ ಹೊಡೆದ ದಾಖಲೆ ಅವರದು.ಶೆಟ್ಟರು ಯಕ್ಷಗಾನದಲ್ಲಿ ಉತ್ತಮ ಅವಕಾಶವಿದ್ದಾಲೇ ಕಾಲುನೋವಿನ ಕಾರಣದಿಂದ ಮೇಳ ತ್ಯಜಿಸುವಂತಾದುದು ದುರದೃಷ್ಟಕರ.
ರೈ ಮತ್ತು ಮುಂಡಾಜೆ ಜೋಡಿ ವೇಷಗಳಿಗೆ ಹೆಸರಾಗಿದ್ದರು. ಅವರ ಧೀಂಗಣದ ವೇಗ ಎಷ್ಟಿತ್ತೆಂದರೆ ಒಮ್ಮೆ ಇಬ್ಬರೂ ಗಿರಕಿ ಹೊಡೆಯುತ್ತಿದ್ದಾಗ ಮುಂಡಾಜೆಯವರ ಮಣಿ ಅಲಂಕಾರ ರೈಯವರ ಕೈಗೆ ಗೀರಿ ರಕ್ತಸ್ರಾವವಾಗುತ್ತಿದ್ದುದು ಅರಿವಿಗೆ ಬಂದದ್ದು ಚೌಕಿಗೆ ಬಂದಾಗಲೇ. ಇನ್ನೊಮ್ಮೆ ಅರಸಿನಮಕ್ಕಿಯಲ್ಲಿ ಕುಶ-ಲವರಾಗಿ ಹಾರಿ ಹಾರಿ ಕೊನೆಗೆ ವೇದಿಕೆಯಿಂದ ಕೆಳಗೆ ಬಿದ್ದಾಗಲೇ ವಾಸ್ತವದ ಅರಿವಾದದ್ದು. ಇದೀಗ ಈ ಅವಳಿ ಯಕ್ಷ ವೀರರು ಅಳಿಕೆ ಪ್ರಶಸ್ತಿಯನ್ನು ಜತೆಯಾಗಿ ಪಡೆಯುತ್ತಿರುವುದೂ ಒಂದು ಯೋಗಾ ಯೋಗ.
ಭಾಸ್ಕರ ರೈ ಕುಕ್ಕುವಳ್ಳಿ