ಪಣಜಿ: ಗೋವಾದ ಜುವಾರಿ ನದಿ ಸೇತುವೆಯ ಎಂಟು ಪಥಗಳ ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು ಮತ್ತು ತಿರುಗುವ ವೀಕ್ಷಣಾಲಯ ನಿರ್ಮಾಣಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ಟೆಂಡರ್ ನೀಡಿದೆ. ಗೋವಾದ ಪ್ರವಾಸೋದ್ಯಮದಲ್ಲಿ ಈ ಗೋಪುರಗಳು ಹೊಸ ಆಕರ್ಷಣೆಯಾಗಲಿವೆ. ಅವಳಿ ಗೋಪುರಗಳ ನಿರ್ಮಾಣಕ್ಕೆ ಈ ಹಿಂದೆಯೇ ಟೆಂಡರ್ ಕರೆಯಲಾಗಿತ್ತು, ಆದರೆ ಕೋವಿಡ್ ಸಾಂಕ್ರಾಮಿಕ ರೋಗಗಳು ಮತ್ತು ಇತರ ಕಾರಣಗಳಿಂದ ಗುತ್ತಿಗೆದಾರರನ್ನು ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಈ ಸೇತುವೆಯ ಅವಳಿ ಗೋಪುರ ನಿರ್ಮಾಣಕ್ಕೆ ಗುತ್ತಿಗೆದಾರರನ್ನು ನೇಮಿಸಿದ ನಂತರ ಟವರ್‍ಗಳು ಮತ್ತು ತಿರುಗುವ ವೀಕ್ಷಣಾಲಯಗಳ ವಿನ್ಯಾಸವನ್ನು ಅಂತಿಮಗೊಳಿಸಲಾಗುತ್ತದೆ. ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಗೋಪುರಗಳ ವಿನ್ಯಾಸವು ವಿಶ್ವದ ಇತರ ಆಕರ್ಷಣೆಗಳಿಗಿಂತ ಭಿನ್ನವಾಗಿರಬೇಕು ಎಂದು ಹೇಳಿದ್ದರು.
ಹೊಸ ಜುವಾರಿ ಸೇತುವೆಯ ಮೇಲಿನ ಗೋಪುರಗಳು ಪ್ಯಾರಿಸ್‍ನ ಐಫೆಲ್ ಟವರ್‍ಗೆ ಪ್ರತಿಸ್ಪರ್ಧಿಯಾಗಬಹುದು ಎಂದು ಗಡ್ಕರಿ ನಿರೀಕ್ಷಿಸಿದ್ದರು. ಜುವಾರಿ ಸೇತುವೆಯ ಮುಂದೆ ಉತ್ತರ ದಡದಲ್ಲಿ ಸೇತುವೆಯ ಕೆಳಗೆ ಪಾಕಿರ್ಂಗ್ ಇರುತ್ತದೆ. ಸೇತುವೆ ನಿರ್ಮಾಣ ಗುತ್ತಿಗೆದಾರರಾದ ದಿಲೀಪ್ ಬಿಲ್ಡ್‍ಕಾನ್ ಅವರ ಕಚೇರಿ ಪ್ರಸ್ತುತ ಅಲ್ಲಿಯೇ ಇದೆ.
ಜುವಾರಿ ಸೇತುವೆಯ ಮೇಲಕ್ಕೆ ಹೋಗಲು ಹೈ ಸ್ಪೀಡ್ ಲಿಫ್ಟ್ ಇರುತ್ತದೆ. ಈ ಗೋಪುರಗಳು ಗೋವಾದ ಇತಿಹಾಸ ಮತ್ತು ಪರಂಪರೆಯನ್ನು ಪ್ರದರ್ಶಿಸುವ ಗ್ಯಾಲರಿಗಳನ್ನು ಒಳಗೊಂಡಿರುತ್ತವೆ. ಗೋಪುರದ ಮೇಲ್ಭಾಗದಲ್ಲಿ ರೆಸ್ಟೋರೆಂಟ್‍ನ ಯೋಜನೆಯೂ ಇದೆ. ಪ್ರತಿ ಗೋಪುರವು ಸುಮಾರು 500 ಪ್ರವಾಸಿಗರಿಗೆ ಅವಕಾಶ ಕಲ್ಪಿಸುವ ನಿರೀಕ್ಷೆಯಿದೆ. ಈ ಎಲ್ಲಾ ಮಾಹಿತಿಯನ್ನು ಸಚಿವ ನಿತಿನ್ ಗಡ್ಕರಿ ಅವರು ನೂತನ ಜುವಾರಿ ಸೇತುವೆಯ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದ್ದರು.