ಈ ವರ್ಷದ ಆರಂಭದಲ್ಲಿಯೇ ಪ್ಯಾನ್ ಇಂಡಿಯಾ “ಪಷ್ಪ’ ಸಿನಿಮಾದ ಮೂಲಕ ಎಂಟ್ರಿಕೊಟ್ಟಿದ್ದ ನಟ ಧನಂಜಯ್ ಸದ್ಯ “ಹೆಡ್ ಬುಷ್’, “ಬೈರಾಗಿ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಇದರ ನಡುವೆಯೇ ಸದ್ದಿಲ್ಲದೆ ಧನಂಜಯ್ ಅಭಿನಯದ “ಟ್ವೆಂಟಿ ಒನ್ ಹವರ್’ ಸಿನಿಮಾ ತಯಾರಾಗಿದ್ದು, ಇದೇ ವಾರ (ಮೇ. 20ಕ್ಕೆ) ತೆರೆಗೆ ಬರುತ್ತಿದೆ.
ಅಂದಹಾಗೆ, “ಟ್ವೆಂಟಿ ಒನ್ ಹವರ್’ ಕೋವಿಡ್ ಮೊದಲ ಲಾಕ್‌ಡೌನ್ ನಂತರ ಧನಂಜಯ್ ಅಭಿನಯಿಸಿರುವ ಸಿನಿಮಾ. ಔಟ್ ಆ್ಯಂಡ್ ಔಟ್ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ “ಟ್ವೆಂಟಿ ಒನ್ ಹವರ್’ ಸಿನಿಮಾದಲ್ಲಿ ಧನಂಜಯ್ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಈ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಧನಂಜಯ್, “ಮಲೆಯಾಳಿ ಹುಡುಗಿಯೊಬ್ಬಳು ಬೆಂಗಳೂರಿಗೆ ಬಂದು ಕಾಣೆಯಾಗುತ್ತಾಳೆ. ಆಕೆಯ ಹುಡುಕಾಟದ ಸುತ್ತ ಈ ಸಿನಿಮಾದ ಕಥೆ ನಡೆಯುತ್ತದೆ. ಇದರಲ್ಲಿ ನಾನು ತನಿಖಾಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಕರ್ನಾಟಕ ಹಾಗೂ ಕೇರಳದಲ್ಲಿ ಸಿನಿಮಾದ ಕಥೆ ನಡೆಯುತ್ತದೆ. ಸಿನಿಮಾದ ಟೈಟಲ್ಲೇ ಹೇಳುವಂತೆ 21 ಗಂಟೆಗಳಲ್ಲಿ ಸಿನಿಮಾದ ಕಥೆ ನಡೆಯುತ್ತದೆ. ಬಹಳ ದಿನಗಳ ನಂತರ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾವೊಂದರಲ್ಲಿ ಅಭಿನಯಿಸಿರುವುದಕ್ಕೆ ಖುಷಿಯಾಗುತ್ತಿದೆ. ಒಳ್ಳೆಯ ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರ ತಂಡದಿಂದ ಸಿನಿಮಾ ತುಂಬ ಚೆನ್ನಾಗಿ ಬಂದಿದೆ. ಆಡಿಯನ್ಸ್‌ಗೂ “ಟ್ವೆಂಟಿ ಒನ್ ಹವರ್’ ಸಿನಿಮಾ ಇಷ್ಟವಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ.
ಉಳಿದಂತೆ ದುರ್ಗಾ ಕೃಷ್ಣ, ಸುದೇವ್ ನಾಯರ್, ರಾಹುಲ್ ಮಾಧವ್ ಮೊದಲಾದವರು “ಟ್ವೆಂಟಿ ಒನ್ ಹವರ್’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಹಲವು ಜಾಹೀರಾತುಗಳನ್ನು ನಿರ್ದೇಶಿಸಿದ ಅನುಭವವಿರುವ ಜೈಶಂಕರ್ ಪಂಡಿತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿರ್ಮಾಪಕರಾದ ಬಾಲಕೃಷ್ಣ ಎನ್. ಎಸ್, ಅಭಿಷೇಕ್ ರುದ್ರಮೂರ್ತಿ, ಸುನೀಲ್ ಗೌಡ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ರುಪರ್ಟ್ ಫರ್ನಾಂಡಿಸ್ ಸಂಗೀತ, ತಿರುನವುಕ್ಕರಸು ಛಾಯಾಗ್ರಹಣ, ರಿಚರ್ಡ್ ಕೆವಿನ್ ಸಂಕಲನವಿದೆ.
ಅಂದಹಾಗೆ, ಈಗಾಗಲೇ ಬಿಡುಗಡೆಯಾಗಿರುವ “ಟ್ವೆಂಟಿ ಒನ್ ಹವರ್’ ಸಿನಿಮಾದ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕನ್ನಡ ಮತ್ತು ಮಲೆಯಾಳಂ ಎರಡೂ ಭಾಷೆಗಳಲ್ಲೂ ಚಿತ್ರ ತೆರೆಕಾಣಲಿದ್ದು, ಮೊದಲು ಕರ್ನಾಟಕದಲ್ಲಿ ತೆರೆಕಂಡ ಬಳಿಕ ಚಿತ್ರವನ್ನು ಕೇರಳದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.