Advertisement

ಎಕ್ಸ್‌ಎಲ್‌ “ಸೂಪರ್‌’ಮತ್ತಷ್ಟು ಸೌಲಭ್ಯದೊಂದಿಗೆ ಮಾರುಕಟ್ಟೆಗೆ

04:50 PM Jul 09, 2018 | Harsha Rao |

ಸಣ್ಣ  ವ್ಯಾಪಾರಿಗಳ ಅಚ್ಚುಮೆಚ್ಚಿನ ದ್ವಿಚಕ್ರವಾಹನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದುದು ಟಿವಿಎಸ್‌ ಎಕ್ಸ್‌ಎಲ್‌ನ ಹೆಗ್ಗಳಿಕೆ. ಹಿಂದೊಮ್ಮೆ ಈ ವಾಹನವನ್ನು ಖರೀದಿಸಲೆಂದೇ ಜನ ಶೋರೂಂನ ಮುಂದೆ ಸಾಲುಗಟ್ಟಿ ನಿಂತಿದ್ದರು. ಅದೇ ಸ್ಕೂಟರ್‌, ಇದೀಗ ಹೊಸ ರೂಪಿನೊಂದಿಗೆ ಮತ್ತೆ ಮಾರುಕಟ್ಟೆಗೆ ಬಂದಿದೆ !

Advertisement

 ಎಂಭತ್ತು ತೊಂಭತ್ತರ ದಶಕದಲ್ಲಿ ಮಧ್ಯಮ ವರ್ಗದವರು, ಅದಕ್ಕಿಂತ ಕೆಳಸ್ತರದವರು ಹಾಗೂ ಸಣ್ಣ ವ್ಯಾಪಾರಸ್ತರು ಕಾಣುತ್ತಿದ್ದ ದೊಡ್ಡ ಕನಸು- ಸ್ಕೂಟರ್‌ ಖರೀದಿಸಬೇಕು ಎನ್ನುವುದೇ ಆಗಿತ್ತು. ಆಗ ಸ್ಕೂಟರೊಂದು ಸ್ವಲ್ಪ ಕಡಿಮೆ ಬೆಲೆಗೆ ದೊರಕ್ಕಿದ್ದರಿಂದ, ದ್ವಿಚಕ್ರವಾಹನ ಕೊಂಡುಕೊಳ್ಳುವ ಕನಸು ಅಚ್ಚರಿ ಎನ್ನುವಂತೆ ಸಾಕಾರಗೊಂಡಿತ್ತು. ಅದರಲ್ಲೂ ಸಣ್ಣ ವ್ಯಾಪಾರಸ್ತರು ಕೆಲ ಪ್ರದೇಶಗಳ ಶೋ ರೂಂಗಳಲ್ಲಿ ಸಾಲು ಸಾಲು ನಿಂತು ಸ್ಕೂಟರ್‌ ಖರೀದಿಸಿದ ಉದಾಹರಣೆಗಳೂ ಇವೆ!

ಹೌದು. ಅಷ್ಟರ ಮಟ್ಟಿಗೆ ಕ್ರಾಂತಿಯನ್ನೇ ನಡೆಸಿದ್ದು ಟಿವಿಎಸ್‌ ಎಕ್ಸ್‌ಎಲ್‌ 100 ಸ್ಕೂಟರ್‌.
ದೇಶೀಯ ವಾಹನ ತಯಾರಿಕಾ ಸಂಸ್ಥೆಯಾದ ಟಿವಿಎಸ್‌ ಜನಸಾಮಾನ್ಯರಿಗೆ ನೀಡಿದ ಬಲು ದೊಡ್ಡ ಕೊಡುಗೆ ಇದಾಗಿತ್ತು. ಅದರಲ್ಲೂ ಮಾರುಕಟ್ಟೆಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣದೊಂದು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ವ್ಯಾಪಾರದಿಂದ ಬಂದ ಆದಾಯದಿಂದಲೇ ದೈನಂದಿನ ಅಗತ್ಯ ಪೂರೈಸಿಕೊಳ್ಳುತ್ತಿದ್ದ ವ್ಯಾಪಾರಿಗಳಿಗಂತೂ ಎಕ್ಸ್‌ಎಲ್‌ ಒಂದು ಅತ್ಯುತ್ತಮ ದ್ವಿಚಕ್ರ ವಾಹನವೇ ಆಗಿತ್ತು. ಅದೇ ಎಕ್ಸ್‌ಎಲ್‌ ಈಗ ಮತ್ತೆ ಎಕ್ಸ್‌ಎಲ್‌ 100ನ ಐ-ಟಚ್‌ ಸರಣಿಯ ಹೆವಿಡ್ನೂಟಿ ಸ್ಕೂಟರ್‌ ಒಂದಿಷ್ಟು ಬದಲಾವಣೆಗಳೊಂದಿಗೆ ಮತ್ತೆ ಮಾರುಕಟ್ಟೆ ಪ್ರವೇಶಿಸಿದೆ. ವಿಶೇಷವಾಗಿ ಉತ್ತರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಧೂಳೆಬ್ಬಿಸುತ್ತಿವೆ.

ಗಮನಿಸಬೇಕಾದ ಅಂಶ ಏನೆಂದರೆ, ಟಿವಿಎಸ್‌ ಜನಸಾಮಾನ್ಯನ ಪ್ರಸ್ತುತ ಅಗತ್ಯತೆಗಳಿಗೆ ತಕ್ಕುದಾದ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಹೊಸ ವೇರಿಯೆಂಟ್‌ ಅನ್ನು ಪರಿಚಯಿಸಿದೆ. ಸಾಮಾನ್ಯವಾಗಿ ಇಂದಿನ ಕಾರುಗಳಲ್ಲಿ ಇರುವಂತೆ, ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳಲು ಯುಎಸ್‌ಬಿ ಅಳವಡಿಸಿ, ಚಾರ್ಜಿಂಗ್‌ಗೂ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಎಲೆಕ್ಟ್ರಿಕ್‌ ಸ್ಟಾರ್ಟ್‌ ಬಟನ್‌ಗಳನ್ನು ನೀಡಲಾಗಿದ್ದು, ಇದು ಚಾಲಕ ಸ್ನೇಹಿಯೂ ಆಗಿದೆ.

Advertisement

ವಿನ್ಯಾಸದಲ್ಲಿ ಭಾರೀ ಬದಲಾವಣೆಯನ್ನೇನೂ ಮಾಡಲಾಗಿಲ್ಲ. ಇದಕ್ಕೂ ಕಾರಣವಿದೆ. ಗ್ರಾಮೀಣ ಪ್ರದೇಶಗಳ ಮಂದಿಗೆ ಅಚ್ಚುಮೆಚ್ಚಿನ ಸ್ಕೂಟರ್‌ ಇದಾಗಿದ್ದರಿಂದ, ಈಗ ಹೊಸ ವಿನ್ಯಾಸ ಮಾಡಿದರೆ ಅದನ್ನು ಜನ ಇಷ್ಟ ಪಡದ ಪಕ್ಷದಲ್ಲಿ ಮಾರಾಟ ಕುಸಿದು ಹೊಡೆತ ಬೀಳಬಹುದು ಎನ್ನುವ ಉದ್ದೇಶದಿಂದ  ಹಳೆಯ ವಿನ್ಯಾಸವನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಇಂದಿನ ಕ್ರೇಜಿ ಹುಡುಗರು ಬಯಸುವಂತೆ ಅತ್ಯಾಧುನಿಕ ತಂತ್ರಜ್ಞಾನದ, ಹೈಟೆಕ್‌ ವಿನ್ಯಾಸದ ಸೌಲಭ್ಯಗಳೇನೂ ಈ ಸ್ಕೂಟರ್‌ನಲ್ಲಿ ಇಲ್ಲದೇ ಇದ್ದರೂ, ಉತ್ತಮ ಮೈಲೇಜ್‌ ಹಾಗೂ ಬಹುಪಯೋಗಿ ವಾಹನವಾಗಿದೆ.

ಬಿಎಸ್‌ 4 ಮತ್ತು ಡೇ ಟೈಂ ಲೈಟ್‌
ವಾಯುಮಾಲಿನ್ಯದ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಟಿವಿಎಸ್‌ ಎಕ್ಸ್‌ಎಲ್‌ 100 ಅನ್ನು ಬಿಎಸ್‌-4 ಎಂಜಿನ್‌ಗಳೊಂದಿಗೆ ಪರಿಚಯಿಸಿದೆ. ಬಿಎಸ್‌ 3 ಅಳವಡಿಕೆಗೆ ಅವಕಾಶವೇ ಇಲ್ಲದ ಕಾರಣ ಟಿವಿಎಸ್‌, ಈ ನಿಯಮದಂತೆ ನೂತನ ಎಂಜಿನ್‌ ಬಳಸಿದೆ. ಅದರಂತೆ, ಸರ್ಕಾರದ ಈಗಿನ ನಿಯಮಾವಳಿಯ ಪ್ರಕಾರ ಡೇ ಟೈಂ ಲೈಟ್‌ ಕೂಡ ಅಳವಡಿಸಲಾಗಿದೆ. ಹೆಡ್‌ಲ್ಯಾಂಪ್‌ ಕೆಳಗಡೆ ಎಲ್‌ಇಡಿ ಲೈಟ್‌ ಅಳವಡಿಸಲಾಗಿದೆ.

ಇನ್ನಷ್ಟು ಬಣ್ಣಗಳಲ್ಲಿ ಲಭ್ಯ
ಈತನಕ ಟಿವಿಎಸ್‌ ಎಕ್ಸ್‌ಎಲ್‌ 100 ಕೆಂಪು, ಕಪ್ಪು, ಹಸಿರು ಮತ್ತು ಬೂದು ಬಣ್ಣಗಳಲ್ಲಷ್ಟೇ ಲಭ್ಯರುತ್ತಿದ್ದವು. ಆದರೆ, ಇದೀಗ ಮಿನರಲ್‌ ಪರ್ಪಲ್‌ ಮತ್ತು ತಾಮ್ರದ ಹೊಳಪಿನ ಬಣ್ಣಗಳಲ್ಲಿಯೂ ಲಭ್ಯವಿರಲಿದೆ.

ಎಂಜಿನ್‌ ಸಾಮರ್ಥ್ಯ
99.7ಸಿಸಿ, ಸಿಂಗಲ್‌ ಸಿಲಿಂಡರ್‌ನ 4 ಸ್ಟ್ರೋಕ್‌ ಏರ್‌ ಕೂಲ್ಡ್‌ ಎಂಜಿನ್‌ ಸ್ಕೂಟರ್‌ ಇದಾಗಿದೆ. 4ಬಿಎಚ್‌ಪಿ, 6.5ಎನ್‌ಎಂ ಟಾರ್ಕ್‌ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಸಿಂಗಲ್‌ ಗೇರ್‌ಬಾಕ್ಸ್‌ ಇದರದ್ದು. ಸಾಮಾನ್ಯ ವಿನ್ಯಾಸದ ಎಕ್ಸ್‌ಎಲ್‌ 100ನ ಕಬ್‌ ವೇಟ್‌ ಕೇವಲ 86 ಕಿಲೋಗ್ರಾಂನಷ್ಟು ಮಾತ್ರ. ಉಳಿದಂತೆ ಮುಂಭಾಗದಲ್ಲಿ ಟೆಲಿಸ್ಕೋಪಿಕ್‌ ಫೋರ್ಕ್ಸ್, ಮುಂಭಾಗದಲ್ಲಿ ಡ್ಯುಯಲ್‌ ಶಾಕ್ಸ್‌ ಅಬ್ಸರ್ವರ್‌ ಜತೆಗೆ ಮುಂಭಾಗದಲ್ಲಿ 80ಮಿ.ಮೀ. ಡ್ರಮ್‌ ಬ್ರೇಕ್‌ ಅಳವಡಿಸಲಾಗಿದೆ. ಹಿಂಭಾಗದಲ್ಲಿ 110ಮಿ.ಮೀ. ಡ್ರಮ್‌ ಬ್ರೇಕ್‌ ಇದ್ದು, ಸುರಕ್ಷತೆ ದೃಷ್ಟಿಯಿಂದಲೂ ಉತ್ತಮವಾಗಿದೆ.

– ಎಕ್ಸ್‌ ಶೋ ರೂಂ ಬೆಲೆ: 36,100 ರೂ.
– ಮೈಲೇಜ್‌ ಪ್ರತಿ ಲೀಟರ್‌ಗೆ: 67ಕಿ.ಮೀ.

Advertisement

Udayavani is now on Telegram. Click here to join our channel and stay updated with the latest news.

Next