ಬೆಂಗಳೂರು: ರಾಜ್ಯದ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರಕ್ಕೆ ಹೊಸದಾಗಿ ಪ್ರವೇಶ ಪಡೆದಿರುವ ಟಿವಿ5 ನೆಟ್‌ವರ್ಕ್‌ನ “ಟಿವಿ5′ ಕನ್ನಡ ಸುದ್ದಿ ವಾಹಿನಿಗೆ ಸೋಮವಾರ ಚಾಲನೆ ದೊರೆಯಿತು. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಾನಾ ಪಕ್ಷಗಳ ಮುಖಂಡರು, ಗಣ್ಯರು, ಸಿನಿತಾರೆಯರು, ಉದ್ಯಮಿಗಳು, ನಾನಾ ಸಂಘಟನೆಗಳ ಪ್ರತಿನಿಧಿಗಳು ಶುಭಾಷಯ ಕೋರಿದರು.
ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅನಂತಕುಮಾರ್, “ರಾಜ್ಯದಲ್ಲಿ ಈಗಾಗಲೇ ಹಲವು ಸುದ್ದಿವಾಹಿನಿಗಳಿದ್ದು, ಟಿವಿ5 ಸುದ್ದಿ ವಾಹಿನಿ ಹೊಸ ಸೇರ್ಪಡೆಯಾಗಿದೆ. ಇದರಿಂದ ಜನರಿಗೆ ಸುದ್ದಿ ಮುಟ್ಟಿಸುವ ಸ್ಪರ್ಧೆ ಇನ್ನಷ್ಟು ತೀವ್ರ ಹಾಗೂ ಸ್ಪರ್ಧಾತ್ಮಕವಾಗಲಿದೆ. ಸುದ್ದಿಯ ಜತೆಗೆ ವಾಸ್ತವವನ್ನು ತಿಳಿಸುವುದಾಗಿ ಮಾಧ್ಯಮ ಸಂಸ್ಥೆ ಹೇಳಿದೆ. ಆ ವಾಸ್ತವದ ಹತ್ತಿರಕ್ಕೆ ಹೋದಷ್ಟು ವಾಹಿನಿಯ ಯಶಸ್ಸು ಗಳಿಸಲಿ ಎಂದು ಹಾರೈಸಿದರು.
ಮುದ್ರಣ, ಸುದ್ದಿ ವಾಹಿನಿಗಳಿಂದ ಸತ್ಯ, ನಿಷ್ಠುರತೆ, ಜನಪರ ಕಾಳಜಿಯನ್ನು ಜನ ಬಯಸುತ್ತಾರೆ. ಟಿವಿ5 ಕನ್ನಡ ವಾಹಿನಿಯು ನಾಡಿನ ಜನರ ಸಮಸ್ಯೆಗಳು, ದೈನಂದಿನ ಆಗುಹೋಗುಗಳು, ನಿರೀಕ್ಷೆಗಳನ್ನು ಬಿಂಬಿಸುವ ವಾಸ್ತವದ ಕನ್ನಡಿಯಾಗಲಿ. ನಿಮಗೆ ಬೇಕಾದ ಸುದ್ದಿ ನೀಡಲು ನಾವು ಸಿದ್ಧರಿದ್ದೇವೆ. ನೀವು ಸುದ್ದಿ ಹುಡುಕಿ. ನಿಮ್ಮ ವಾಹಿನಿ ಜನರ ಮೊದಲ ಆಯ್ಕೆಯಾಗಲಿ ಎಂದು ಶುಭ ಕೋರಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, “ನೂತನ ವಾಹಿನಿಯು ಸತ್ಯ, ನಿಷ್ಠೆ ಅಡಿಪಾಯದ ಮೇಲೆ ಕಾರ್ಯ ನಿರ್ವಹಿಸುವ ಮೂಲಕ ನಿಷ್ಪಕ್ಷಪಾತ ಸುದ್ದಿ ಪ್ರಸಾರದೊಂದಿಗೆ ಜನಪ್ರಿಯತೆ ಗಳಿಸಲಿ. ಸಕಾರಾತ್ಮಕ ಸುದ್ದಿಯೊಂದಿಗೆ ವಿಶ್ವಾಸಾರ್ಹತೆಗೆ ಆದ್ಯತೆ ಇರಲಿ. ವೇಗದ ಭರದಲ್ಲಿ ಸತ್ಯ- ವಾಸ್ತವದಲ್ಲಿ ಹಿಂದುಳಿಯಬಾರದು. ವಾಹಿನಿಯ ಕಾರ್ಯವೈಖರಿಯನ್ನು ಯಾರೊಬ್ಬರು ಪ್ರಶ್ನಿಸದಂತೆ, ಬೊಟ್ಟು ಮಾಡದಂತೆ ಕಾರ್ಯನಿರ್ವಹಿಸಲಿ. ಶ್ರದ್ಧೆ, ಧೈರ್ಯದಿಂದ ಕಾರ್ಯ ನಿರ್ವಹಿಸಿದರೆ ಜನ ಮನ್ನಣೆ ಸಿಗಲಿದೆ ಎಂದು ಹೇಳಿದರು.
ವಿಶ್ವಾಸಾರ್ಹತೆ ಮುಖ್ಯ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, “ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಲೋಪಗಳನ್ನು ಎತ್ತಿ ತೋರುವ ಅವಕಾಶ ಮಾಧ್ಯಮಗಳಿಗಿದೆ. ಆದರೆ ತನ್ನ ವ್ಯಕ್ತಿತ್ವವನ್ನೇ ಮಾರಿಕೊಳ್ಳಬಾರದು. ತಮ್ಮ ವ್ಯಕ್ತಿತ್ವವನ್ನೇ ಮಾರಿಕೊಂಡು ಸುಲಿಗೆಗಿಳಿಯುವುದನ್ನು ಕಂಡಿದ್ದೇವೆ. ಮಾಧ್ಯಮಗಳು ನಂಬಿಕೆ, ವಿಶ್ವಾಸಾರ್ಹತೆ ಗಳಿಸುವುದು ಮುಖ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೊನೆಗೆ ಸತ್ಯವಷ್ಟೇ ಉಳಿಯಲಿದೆ. ಮಾಧ್ಯಮ ಕ್ಷೇತ್ರದಲ್ಲಿ ದಶಕ ಪೂರೈಸಿರುವ ಸಂಸ್ಥೆಯು ನಾಡಿನ ಜನರ ವಿಶ್ವಾಸಾರ್ಹತೆ ಗಳಿಸುವ ನಂಬಿಕೆ ಇದೆ ಎಂದು ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, “ಇಂದು ಮನೆಗಳನ್ನು ಕಟ್ಟುವ, ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಮಾಡಬೇಕಿದೆ. ಮನೆ ಒಡೆಯುವಂತಹ ಕಪ್ಪು ಕುರಿಗಳು ಮಾಧ್ಯಮದಲ್ಲೂ ಇವೆ. ಒಡೆಯುವ ಬದಲಿಗೆ ಜೋಡಿಸುವ ಕೆಲಸ ಆಗಬೇಕಿದೆ. ನಾನಾ ಪ್ರಭಾವಕ್ಕೆ ಒಳಗಾಗಿ ರಾಜಕೀಯ ನಡೆಸುವುದು, ಜಾತಿ, ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತುವ ಮನೋಭಾವ ದಾಟಿ ಹೊರ ಬಂದಾಗ ನಿಜವಾದ ಜನಪರ ಮಾಧ್ಯಮವಾಗಲಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೂತನ ವಾಹಿನಿಗೆ ಶುಭ ಕೋರಿದರು. ಸಚಿವ ಎಂ.ಕೃಷ್ಣಪ್ಪ, ಮೇಯರ್ ಆರ್.ಸಂಪತ್‌ರಾಜ್, ಉದ್ಯಮಿ ಅನಿಲ್ ಕುಮಾರ್, ಟಿವಿ5 ನೆಟ್‌ವರ್ಕ್‌ನ ಅಧ್ಯಕ್ಷ ಬಿ.ಆರ್.ನಾಯ್ಡು, ಉಪಾಧ್ಯಕ್ಷ ಬಿ.ಸುರೇಂದ್ರನಾಥ್, ವ್ಯವಸ್ಥಾಪಕ ನಿರ್ದೇಶಕ ಬಿ.ರವೀಂದ್ರನಾಥ್ ಇತರರು ಉಪಸ್ಥಿತರಿದ್ದರು.