Advertisement

ಕನ್ನಡ ಪರೀಕ್ಷೆ ಬರೆಯಲು ಸಹಾಯ ಸೂತ್ರಗಳು

10:37 PM Feb 24, 2020 | Sriram |

ನಮ್ಮ ಮಾತೃಭಾಷೆ ಕನ್ನಡವು ನಮ್ಮ ಪ್ರಥಮ ಭಾಷಾ ಪಠ್ಯವೂ ಆಗಿದೆ. ನಮಗೆ ಮಾತನಾಡಲು, ವ್ಯವಹರಿಸಲು ಒಳ್ಳೆಯ ಕನ್ನಡ ತಿಳಿದಿದ್ದರೂ ಪರೀಕ್ಷೆಯನ್ನು ಎದುರಿಸಲು ತಯಾರಿ ಮಾಡಿಕೊಳ್ಳುವಾಗ, ಕನ್ನಡ ಪರೀಕ್ಷೆಯನ್ನು ಉತ್ತರಿಸುವಾಗ ಕೆಲವು ಅಂಶಗಳನ್ನು ನೆನಪಿನಲ್ಲಿ ಇರಿಸಿಕೊಂಡಿದ್ದರೆ ಅಂಕಗಳನ್ನು ಗಳಿಸಲು ಸುಲಭ. ಪ್ರಥಮ ಭಾಷೆ ಕನ್ನಡ ವಾರ್ಷಿಕ ಪರೀಕ್ಷೆಗೆ ತಯಾರಾಗುವಾಗ ಅನುಸರಿಸಬೇಕಾದ ಅಗತ್ಯ ಕ್ರಮಗಳು ಇಲ್ಲಿವೆ.

Advertisement

ಈಗಾಗಲೇ ನಡೆದ ಮೂರೂ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಗಳನ್ನು ಮತ್ತೂಮ್ಮೆ ಬರೆದು ಉತ್ತರಿಸಿ. ಇದರಿಂದ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಖಂಡಿತ ಪಡೆಯಬಹುದು.

ಬಹು ಆಯ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಉತ್ತರದ ಜತೆಗೆ ಕ್ರಮಾಕ್ಷರ ಗಳೊಂದಿಗೆ ಆಯ್ಕೆಯನ್ನು ಬರೆಯಬೇಕು. ವೈಟ್ನರ್‌, ಪೆನ್ಸಿಲ್‌ ಉಪಯೋಗಿಸಬಾರದು ಮತ್ತು ಹೊಡೆದು ಹಾಕಿ ಬಹು ಆಯ್ಕೆ ಉತ್ತರ ಬರೆಯಬಾರದು.

ಒಂದು ವಾಕ್ಯದಲ್ಲಿ ಉತ್ತರಿಸುವ ಸಂದರ್ಭ ದಲ್ಲಿ ಪಠ್ಯಪುಸ್ತಕದ ಕೀ ಉತ್ತರವನ್ನು ಬರೆಯಬೇಕು. ಉದಾ: ಇರಸಾಲು, ಖೀರ್ದಿ, ಪುಸ್ತಕ ಇತ್ಯಾದಿ.

2 ಅಂಕದ 16 ಪ್ರಶ್ನೆಗಳಿಗೆ ಉತ್ತರಿಸುವಾಗ ಕೇಳಿದ ಪ್ರಶ್ನೆ ಯಾವ ಪಾಠದ್ದೆಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಅನಂತರದಲ್ಲಿ ಉತ್ತರ ಗೊತ್ತಿದ್ದರೆ ನಿಖರವಾಗಿ ಅಡಿಗೆರೆಯೊಂದಿಗೆ ಬರೆಯಬೇಕು. ಅಲ್ಪಸ್ವಲ್ಪ ಗೊತ್ತಿದ್ದರೂ ಅದನ್ನು ಹಾಗೆಯೇ ಬರೆಯಬೇಕು.

Advertisement

“ಸಂದರ್ಭ ಸಹಿತ ಸ್ವಾರಸ್ಯ’ ಬರೆಯುವಾಗ 3 ಪ್ಯಾರಾಗ್ರಾಫ್ ಮಾಡಿ ವ್ಯವಸ್ಥಿತವಾಗಿ ಬರೆಯಬೇಕು. ಒಂದನೇ ಪ್ಯಾರಾ ಆಯ್ಕೆ, ಎರಡನೇ ಪ್ಯಾರಾ ಸಂದರ್ಭ, ಮೂರನೆಯ ಪ್ಯಾರಾ ಸ್ವಾರಸ್ಯ ಆಗಿರಬೇಕು. ಸ್ವಾರಸ್ಯವನ್ನು ನಿಖರವಾಗಿ ಬರೆಯಬೇಕೆಂದೇನೂ ಇಲ್ಲ, ನಿಮಗೆ ತಿಳಿದ ಹಾಗೆ ಬರೆದರೆ ಸಾಕು. ಯಾವ ಕಾರಣಕ್ಕೂ ಒಂದೇ ಪ್ಯಾರಾದಲ್ಲಿ ಸಂದರ್ಭ ಸಹಿತ ಪ್ರಶ್ನೆಗಳ ಉತ್ತರವನ್ನು ಮುಗಿಸಬಾರದು.

ದೀರ್ಘ‌ ಉತ್ತರದ ಪ್ರಶ್ನೆಗಳಿಗೆ ಉತ್ತರಿಸು ವಾಗ ಕಥೆಯನ್ನು ಹೊಂದಿರುವ ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನ ಪಡಬೇಕು. ಅದು 3 ಪ್ಯಾರಾಗಳಲ್ಲಿ ಇದ್ದರೆ ಪೂರ್ಣ ಅಂಕ ಗಳಿಸಲು ಸಾಧ್ಯವಾಗುತ್ತದೆ.

ಗಾದೆಗಳನ್ನು ಬರೆಯುವಾಗ 3 ವಾಕ್ಯಗಳಲ್ಲಿ ಪೀಠಿಕೆ ಬರೆಯಿರಿ. ಅನಂತರ ಸಾಧ್ಯವಾದರೆ ಗಾದೆಯ ವಿವರಣೆ ನೀಡಿ. ಇಲ್ಲಿಯೂ ಕೂಡ 2 ಪ್ಯಾರಾಗ್ರಾಫ್ ಮಾಡಿ ಬರೆಯಿರಿ.

ಪದ್ಯ ಕಂಠ ಪಾಠ ಕಲಿಕೆಯಲ್ಲಿ ಹಿಂದುಳಿದವರು ಒಂದೊಂದು ಪದ್ಯವನ್ನಾದರೂ ಕಂಠಪಾಠ ಮಾಡಿ. ಕಲಿಕೆಯಲ್ಲಿ ತೀರಾ ಹಿಂದುಳಿದವರು ಹೊಸಗನ್ನಡ ಪದ್ಯವನ್ನು ಕಂಠಪಾಠ ಮಾಡಿದರೆ ಒಂದು ಮಾರ್ಕಿನ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗುತ್ತದೆ. 2 ಮಾರ್ಕಿನ ಪ್ರಶ್ನೆಗೂ ಅದೇ ಉತ್ತರವಾಗುತ್ತದೆ. ಸಂದರ್ಭಕ್ಕೂ ಅದೇ ಪದ್ಯ ಸಹಕಾರಿಯಾಗುತ್ತದೆ. ಹೀಗೆ ಕನಿಷ್ಠ 1 ಅಂಕ, ಗರಿಷ್ಠ 4 ಅಂಕಗಳನ್ನು ಪಡೆಯಲು ಒಂದು ಪದ್ಯ ಕಂಠಪಾಠದಿಂದ ಸಾಧ್ಯವಾಗುತ್ತದೆ.

ಪತ್ರಲೇಖನ ಪ್ರಶ್ನೆಗೆ ಸಾಧ್ಯವಾದಷ್ಟು ವ್ಯಾವಹಾರಿಕ ಪತ್ರವನ್ನು ಆಯ್ಕೆ ಮಾಡಿಕೊಳ್ಳಿ. ಏಕೆಂದರೆ ಅಲ್ಲಿ “ಇವರಿಗೆ’,”ಇವರಿಂದ’ ಮುಂತಾದ ಭಾಗಗಳಿಗೂ ಅಂಕಗಳು ನಿರ್ಧಾರವಾಗಿರುತ್ತವೆ.

ಪತ್ರ ಲೇಖನ ಸಂದರ್ಭದಲ್ಲಿ ನಿಮಗೆ ಕೆಲವು ಶಬ್ದಗಳು ಗೊತ್ತಿರಬೇಕು. ಉದಾ: ಅತಿವೃಷ್ಟಿ ಎಂದರೇನು? ಅನಾವೃಷ್ಟಿ ಎಂದರೇನು? ಫಿಟ್‌ ಇಂಡಿಯಾ ಕಾರ್ಯಕ್ರಮ ಎಂದರೇನು? ಕನ್ನಡ ಜಾಗೃತಿ ಕಾರ್ಯಕ್ರಮ ಅಂದರೇನು? ನವೆಂಬರ್‌ ಮಾಸಾಚರಣೆ ಅಂದರೇನು? – ಈ ವಿಷಯಗಳ ಬಗ್ಗೆ ಗಮನವಿರಲಿ.

ಪ್ರಬಂಧವನ್ನು ಸಾಮಾನ್ಯವಾಗಿ ತಂತ್ರಜ್ಞಾನ, ಪರಿಸರ ಸಮಸ್ಯೆ, ಪ್ರಸ್ತುತ ಸಮಸ್ಯೆಯ ಮೇಲೆ ಕೇಳುವುದರಿಂದ ಮೊಬೈಲ್‌ ಬಳಕೆ, ಪ್ಲಾಸ್ಟಿಕ್‌ ತ್ಯಾಜ್ಯ ಮುಂತಾದ ಒಂದೆರಡು ವಿಷಯಗಳನ್ನು ಗಮನದಲ್ಲಿರಿಸಿ 3 ಪ್ಯಾರಾ ದಷ್ಟು ಉತ್ತರ ಬರೆಯಿರಿ. ಮೂರು ಪ್ಯಾರಾ ಬರೆದರೆ ಪೂರ್ಣ ಅಂಕ ದೊರಕುತ್ತದೆ.

ಕನ್ನಡ ಪ್ರಥಮ ಭಾಷೆ ಅನೇಕ ಕಥೆಗಳನ್ನು ಹೊಂದಿದೆ. ಈ ಕಥೆಗಳನ್ನು ಓದಿಕೊಂಡರೆ ಸುಮಾರು 25ರಿಂದ 30 ಅಂಕ ಬರುತ್ತವೆ.

ಅಲಂಕಾರವನ್ನು ಉತ್ತರಿಸುವಾಗ ಅಂತೆ, ವೋಲ್‌, ತೆರದಿಂ, ಹಂಗಾ ಮುಂತಾದ ಉಪಮಾವಾಚಕ ಬಂದರೆ ಅದು ಉಪಮಾಲಂಕಾರ ಎಂದು ಬರೆಯಬೇಕು. ಆಗ ಸುಲಭವಾಗಿ ಒಂದು ಅಂಕ ದೊರೆಯುತ್ತದೆ.

ಪ್ರಸ್ತಾರ ಹಾಕುವ ಪ್ರಶ್ನೆಯಲ್ಲಿ ಒಂದು ಗೆರೆಯ ಪದ್ಯ ಕೇಳಿದರೆ ಅದು ಖ್ಯಾತ ಕರ್ನಾಟಕ ವೃತ್ತವಾಗಿರುತ್ತದೆ. ಅಕ್ಷರಗಣದಲ್ಲಿ ಹೆಚ್ಚಾಗಿ ಉತ್ಪಲಮಾಲೆ ಬರುತ್ತದೆ. 2 ಸಾಲಿನ ಪದ್ಯ ಕೇಳಿದರೆ ಮಾತ್ರಾಗಣ ಛಂದಸ್ಸು, ಕಂದಪದ್ಯ ಆಗಿರುತ್ತದೆ. 3 ಸಾಲಿನ ಪದ್ಯ, “ವೀರಲವ’ದಿಂದ ಕೇಳಿದರೆ ವಾರ್ಧಕ ಷಟ³ದಿ, “ಕೌರವೇಂದ್ರನ ಕೊಂದೆ’ಯಿಂದ ಕೇಳಿದರೆ ಭಾಮಿನಿ ಆಗಿರುತ್ತದೆ. ಇದು ಸುಲಭವಾಗಿ ಒಂದೊಂದು ಅಂಕ ಗಳಿಸಲು ನೆನಪಿರಿಸಿಕೊಳ್ಳಬೇಕಾದುದು.

ಕ್ರಿಯಾ ಪದದ ಅತಿಸಣ್ಣ ವಾಕ್ಯ ಸಾಮಾನ್ಯ ವಾಕ್ಯ. ಕೊಟ್ಟ ವಾಕ್ಯದಲ್ಲಿ ಆದ್ದರಿಂದ, ಅಥವಾ, ಮತ್ತು ಮುಂತಾದ ಪದಗಳು ಇದ್ದರೆ ಅದು ಸಂಯೋಜಿತ ವಾಕ್ಯ. ಇದೂ ಸುಲಭವಾಗಿ ಅಂಕ ಪಡೆಯಲು ನೆನಪಿಟ್ಟುಕೊಳ್ಳಬೇಕಾದದ್ದು.

ಅಂಶಿ ಸಮಾಸ ಸಾಮಾನ್ಯವಾಗಿ ದೇಹದ ಭಾಗಗಳಿಗೆ ಸಂಬಂಧಪಟ್ಟ ಪದವಾಗಿರುತ್ತದೆ. ಇದು ಸುಲಭವಾಗಿ ಇನ್ನೊಂದು ಅಂಕ ಪಡೆಯಲು ನೆನಪಿಟ್ಟುಕೊಳ್ಳಬೇಕಾದದ್ದು.

ಸಾರಾಂಶ ಬರೆಯುವಾಗ ಕೊಟ್ಟ ಪದ್ಯವನ್ನು ವಿವರಿಸಲು ಪ್ರಯ ತ್ನಿಸಿದರೆ 2 ಅಂಕಗಳು ಸಿಗುತ್ತವೆ.

ಕವಿ ಪರಿಚಯ ಮಾಡಿಕೊಳ್ಳುವ ಸುಲಭ ವಿಧಾನವೆಂದರೆ ಗದ್ಯ ಪಾಠದ ಶೀರ್ಷಿಕೆ ನೆನಪಿಟ್ಟುಕೊಳ್ಳಬೇಕು. ಉದಾ: ಶಬರಿ, ಎದೆಗೆ ಬಿದ್ದ ಅಕ್ಷರ, ಸರ್‌. ಎಮ್‌. ವಿಶ್ವೇಶ್ವರಯ್ಯ ಇತ್ಯಾದಿ. ಶೀರ್ಷಿಕೆಗೆ ಹತ್ತಿರವಿರುವ ಕೃತಿಗಳೆಂದರೆ ಯುದ್ಧ -ಕದನ, ಲಂಡನ್‌ ನಗರ – ಪ್ರಯಾಣ ಹೀಗೆ ಗುರುತಿಸಿಕೊಳ್ಳಬಹುದು.

ಕನ್ನಡ ಪಠ್ಯದಲ್ಲಿರುವ ಎಲ್ಲ ಹೊಸಗನ್ನಡ ಲೇಖಕರಿಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಜಯಪ್ಪ ಗೌಡರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿ ಪಂಪ, ಕುಮಾರವ್ಯಾಸ, ರನ್ನ, ಲಕ್ಷ್ಮೀಶ ಮಾತ್ರ ಕಲಿತರೂ 3 ಅಂಕ ಪಡೆಯಬಹುದು.

-ಕೆ. ಕಿರಣ್‌ ಹೆಗ್ಡೆ
ಕನ್ನಡ ಅಧ್ಯಾಪಕರು
ಸರಕಾರಿ ಪ್ರೌಢಶಾಲೆ, ಕಾವಡಿ

ನನ್ನಿಂದ ಸಾಧ್ಯ ಎಂಬ ಆಶಾವಾದದಿಂದ ಅರ್ಧ ಗೆಲುವು ಲಭಿಸುತ್ತದೆ.- ಥಿಯೊಡೋರ್‌ ರೂಸ್‌ವೆಲ್ಟ್

Advertisement

Udayavani is now on Telegram. Click here to join our channel and stay updated with the latest news.

Next