Advertisement

ಸೋಷಿಯಲ್‌ ಮೀಡಿಯಾದಲ್ಲೇ ತಿರುಗೇಟು ನೀಡಿ

11:27 AM Sep 17, 2017 | Team Udayavani |

ಬೆಂಗಳೂರು: ಸಾಮಾಜಿಕ ಜಾಲತಾಣದ ಮೂಲಕ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ವಿರುದ್ಧ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಗಳಿಗೆ ಸಾಮಾಜಿಕ ಜಾಲತಾಣದ ಮೂಲಕವೇ ಸೂಕ್ತ  ಉತ್ತರ ನೀಡುವಂತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸೂಚನೆ ನೀಡಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ಶನಿವಾರ ಕೆಪಿಸಿಸಿ ಮಾಧ್ಯಮ ಘಟಕ, ಐಟಿ ಸೆಲ್‌ ಮತ್ತು ಸೋಷಿಯಲ್‌ ಮೀಡಿಯಾ ಘಟಕ  ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಆದರೆ, ಕೆಪಿಸಿಸಿ ಸಾಮಾಜಿಕ ಜಾಲತಾಣ ನೆಟ್‌ವರ್ಕ್‌ “ಸ್ಟ್ರಾಂಗ್‌’ ಇಲ್ಲ. ಬಿಜೆಪಿಯ  ಸೋಷಿಯಲ್‌ ಮೀಡಿಯಾ ಘಟಕದ ಆರೋಪಗಳಿಗೆ ತಿರುಗೇಟು ನೀಡಬೇಕು ಎಂದು ತಾಕೀತು ಮಾಡಿದರು.

ಸಾಮಾಜಿಕ ಜಾಲತಾಣದ ಮೂಲಕ ಐಟಿ ಸೆಲ್‌ ಮತ್ತು ಸೋಷಿಯಲ್‌ ಮೀಡಿಯಾ ಘಟಕದ ಸಾಧನೆ ಬಗ್ಗೆಯೂ ಅತೃಪ್ತಿ ವ್ಯಕ್ತಪಡಿಸಿದ ವೇಣುಗೋಪಾಲ್‌, ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಯಾಕೆ ಕ್ರಿಯಾಶೀಲರಾಗಿಲ್ಲ ನೀವು ಎಂದು ತರಾಟೆಗೆ ತೆಗೆದುಕೊಂಡರು.

ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಬಿಜೆಪಿ ನಿರಂತರ ವಾಗ್ಧಾಳಿ ನಡೆಸುತ್ತಿದ್ದರೂ, ಅದಕ್ಕೆ ತಿರುಗೇಟು ನೀಡಲು ಕಾಂಗ್ರೆಸ್‌ ಸೋಷಿಯಲ್‌ ಮಿಡಿಯಾ ಮತ್ತು ಮಾಧ್ಯಮ ಘಟಕ ಪ್ರಯತ್ನ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗ್ಗಿಂದಾಗ್ಗೆ ಚರ್ಚೆ ಅಥವಾ ಪ್ರಸ್ತಾಪವಾಗುವ ವಿಚಾರಗಳಿಗೆ ಸಂಬಂಧಿಸಿದಂತೆ ತತಕ್ಷಣ ಪತ್ರಿಕಾಗೋಷ್ಠಿ  ನಡೆಸಿ ಮಾಧ್ಯಮಗಳಿಗೆ ವಿವರಣೆ ನೀಡಬೇಕು. ಪೆಟ್ರೋಲ್‌ ಬೆಲೆ ನಿರಂತರವಾಗಿ ಏರುತ್ತಿದ್ದರೂ ಕಾಂಗ್ರೆಸ್‌ ಐಟಿ ಸೆಲ್‌ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪ್ರತಿಕ್ರಿಯೆ ಸಹ ವ್ಯಕ್ತಪಡಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಎಂದು ಮೂಲಗಳು ತಿಳಿಸಿವೆ.

Advertisement

ಕೇಂದ್ರ ಸರ್ಕಾರದ ಸಾಕಷ್ಟು ವೈಫ‌ಲ್ಯಗಳು ಬೆಳಕಿಗೆ ಬಂದಿದ್ದರೂ, ಸೋಷಿಯಲ್‌ ಮಿಡಿಯಾ ಘಟಕ ಆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಫ‌ಲವಾಗಿದೆ. ಹೀಗಾಗಿ, ಇನ್ಮುಂದೆ ಚುರುಕುಗೊಳಿಸಬೇಕು ಎಂದು ಸೂಚಿಸಿದರು.

ಸಚಿವರ ಬಗ್ಗೆಯೂ ಗರಂ
ಸಚಿವರು  ಕೆಪಿಸಿಸಿ ಕಚೇರಿಗೆ ಬಂದು ಸರ್ಕಾರದ ಸಾಧನೆಗಳನ್ನು ಮಾಧ್ಯಮಗಳ ಮುಂದೆ ಹೇಳುವಂತೆ ಸೂಚಿಸಿದ್ದರೂ ಬಹುತೇಕ ಸಚಿವರು ಪಕ್ಷದ ಕಚೇರಿಗೆ ಆಗಮಿಸದಿರುವ ಬಗ್ಗೆ ವೇಣುಗೋಪಾಲ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸುವುದಾಗಿಯೂ ಹೇಳಿದ್ದಾರೆ. ಮಂತ್ರಿಗಳು ಕೇವಲ ಅವರ ಇಲಾಖೆಗಳ ಸಾಧನೆಗಳನ್ನು ಮಾತ್ರ ಹೇಳುವುದಷ್ಟೇ ಅಲ್ಲ. ಪಕ್ಷ ಹಾಗೂ ಸರ್ಕಾರದ ವಿರುದ್ದ ಬಂದಿರುವ ಆರೋಪಗಳಿಗೆ ತಿರುಗೇಟು ನೀಡುವುದು ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗಾœಳಿ ನಡೆಸಬೇಕು ಎಂದು ಸೂಚಿಸಿದ್ದಾರೆ.

ಸಕ್ರಿಯವಾಗಲು ಸೂಚನೆ
ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌, ಸೋಷಿಯಲ್‌ ಮೀಡಿಯಾ ಗ್ರೂಪ್‌ಗೆ ಚುರುಕು ಮುಟ್ಟಿಸಿರುವುದು ನಿಜ. ನಾನು ಮತ್ತು ವೇಣುಗೋಪಾಲ್‌ ಇಬ್ಬರೂ ಬಿಜೆಪಿ ಸೋಷಿಯಲ್‌ ಮೀಡಿಯಾಗಿಂತ ಹೆಚ್ಚು ಸಕ್ರಿಯರಾಗಿರುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.

ತಮ್ಮ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮುಂಬರುವ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಇಬ್ಬರೂ ಶ್ರಮಿಸುತ್ತಿದ್ದೇವೆ.

ಸಂಪುಟ ವಿಸ್ತರಣೆ ಬಳಿಕವೂ ನಾನು ಮುಖ್ಯಮಂತ್ರಿ ಮನೆಗೆ ತೆರಳಿ ಭೇಟಿ ಮಾಡಿ ಬಂದಿದ್ದೇನೆ. ಬೆಳಗಾವಿ ಸಮಾವೇಶಕ್ಕೆ ಹೋಗಲು ಕೊನೆ ಕ್ಷಣದಲ್ಲಿ ಆಗದಿದ್ದರಿಂದ ಲಕ್ಷ್ಮೀ ಹೆಬ್ಟಾಳ್ಕರ್‌ಗೆ ಹೇಳಿದ್ದೆ, ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೊನೆ ಕ್ಷಣದಲ್ಲಿ ಬೆಳಗಾವಿ ಸಮಾವೇಶ ಆಯೊಜನೆ ಮಾಡಿದ್ದರಿಂದ ತೆರಳಲು ಸಾಧ್ಯವಾಗಲಿಲ್ಲ ಎಂದು ಪರಮೇಶ್ವರ್‌ ಸ್ಪಷ್ಟನೆ ನೀಡಿದರು.

ಸಿಎಂ ಸಿದ್ದರಾಮಯ್ಯ ಹಾಗೂ ಪರಮೇಶ್ವರ್‌ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇಬ್ಬರೂ ಸೇರಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ಇಬ್ಬರ ನಡುವೆ ಅಸಮಾಧಾನ ಇದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಬಿಜೆಪಿಯವರೇ ಪರಿಸ್ಥಿತಿ ಹಾಳು ಮಾಡುತ್ತಿದ್ದಾರೆ. ಗೌರಿ ಲಂಕೇಶ್‌ ಅವರು ಹತ್ಯೆಯಾದಾಗ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯತ್ತ ಬಿಜೆಪಿಯವರು ಸುಳಿಯಲೇ ಇಲ್ಲ, ಇದೀಗ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಗೌರಿ ಹತ್ಯೆಯ ಹಿಂದೆ ಯಾರಿದ್ದಾರೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
– ಕೆ.ಸಿ. ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ.

Advertisement

Udayavani is now on Telegram. Click here to join our channel and stay updated with the latest news.

Next