Advertisement
ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ಈಶಾನ್ಯದ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಅಸ್ಸಾಂ ಪ್ರತಿಭಟನೆಯ ಕೇಂದ್ರ ಸ್ಥಾನವಾಗಿದ್ದು, ಕ್ರಮೇಣ ಪ್ರತಿಭಟನೆಯ ಕಾವು ದೇಶದ ಇತರೆಡೆಗಳಿಗೂ ವ್ಯಾಪಿಸುವ ಸಾಧ್ಯತೆ ಕಾಣಿಸುತ್ತಿದೆ. ವಿಧೇಯಕವೊಂದು ಈ ಮಟ್ಟದ ಪ್ರತಿಭಟನೆ ಮತ್ತು ಹಿಂಸಾ ಚಾರಕ್ಕೆ ಕಾರಣವಾದ ಉದಾಹರಣೆ ಇಲ್ಲ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಿರ್ಧಾರ ಘೋಷಣೆ ಯಾದಾಗ ಹಿಂಸಾಚಾರ ಭುಗಿಲೇಳುವ ಸಾಧ್ಯತೆಯಿತ್ತಾದರೂ ಈ ಅಪಾಯವನ್ನು ಮೊದಲೇ ಗ್ರಹಿಸಿದ್ದ ಸರಕಾರ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿತ್ತು. ಆದರೆ ಪೌರತ್ವ ವಿಧೇಯಕ ವಿಚಾರವಾಗಿ ಸರಕಾರ ಈಶಾನ್ಯದ ರಾಜ್ಯಗಳಲ್ಲಿ ಈ ಮಟ್ಟದ ಪ್ರತಿರೋಧವನ್ನು ನಿರೀಕ್ಷಿಸಿರಲಿಕ್ಕಿಲ್ಲ. ಹೀಗಾಗಿ ಅಲ್ಲಿ ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿ ರಲಿಲ್ಲ.
Related Articles
Advertisement
ಈ ವಿಚಾರದಲ್ಲಿ ವಿಪಕ್ಷಗಳಷ್ಟೇ ತಪ್ಪು ಆಡಳಿತ ಪಕ್ಷದ್ದೂ ಇದೆ. ಅಂತಿಮ ಗಡುವನ್ನು ವಿಸ್ತರಿಸಿದ ಕಾರಣವನ್ನು ಇನ್ನೂ ಆಡಳಿತ ಪಕ್ಷ ಸ್ಪಷ್ಟಪಡಿಸಿಲ್ಲ ಹಾಗೂ ಇದರಿಂದ ಆಗಬಹುದಾದ ಪರಿಣಾಮವನ್ನೂ ಅಂದಾಜಿಸಿದಂತಿಲ್ಲ. ಮಸೂದೆಯನ್ನು ತರುವಾಗ ಅದರ ಸಾಧಕಬಾಧಕಗಳ ಸಮಗ್ರ ಅದ್ಯಯನ ನಡೆಸುವುದು ಅಗತ್ಯ. ಆದರೆ ಕೇಂದ್ರ ಸರಕಾರ ಅವಸರದಲ್ಲಿ ಮಸೂದೆಯನ್ನು ತಂದಿರುವಂತೆ ಕಾಣಿಸುತ್ತದೆ. ಕನಿಷ್ಠ ಈಶಾನ್ಯ ರಾಜ್ಯಗಳಲ್ಲಿ ಮಸೂದೆಗೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಬಹುದು ಎಂಬುದರ ಬಗ್ಗೆಯಾದರೂ ಒಂದು ಸ್ಥೂಲ ಅಧ್ಯಯನ ನಡೆಸುವ ಅಗತ್ಯ ಇತ್ತು.
ಮೊದಲೇ ಈಶಾನ್ಯ ರಾಜ್ಯಗಳಲ್ಲಿ ಒಂದು ರೀತಿಯ ಪ್ರತ್ಯೇಕತೆಯೇ ಭಾವನೆಯಿದೆ. ಹಿಂದಿನ ಸರಕಾರಗಳು ಅನುಸರಿಸಿದ ನೀತಿಯಿಂದಾಗಿ ಈ ರಾಜ್ಯಗಳ ಜನರು ತಮ್ಮನ್ನು ಪರಕೀಯರೆಂದು ಭಾವಿಸುತ್ತಿದ್ದರು. ಆದರೆ ನಿರಂತರವಾದ ಪ್ರಯತ್ನಗಳ ಫಲವಾಗಿ ಈಗ ಈಶಾನ್ಯದವರು ದೇಶದ ಮುಖ್ಯವಾಹಿನಿಯಲ್ಲಿ ಬೆರೆತಿದ್ದಾರೆ. ಲುಕ್ ಈಸ್ಟ್ ಪಾಲಿಸಿ ಈ ನಿಟ್ಟಿನಲ್ಲಿ ಸಾಕಷ್ಟು ಕೊಡುಗೆಯನ್ನು ನೀಡಿದೆ. ಇದೀಗ ಪೌರತ್ವ ಮಸೂದೆ ಈ ಪ್ರಯತ್ನಗಳನ್ನು ವಿಫಲಗೊಳ್ಳಲು ಬಿಡಬಾರದು. ಈಶಾನ್ಯದವರಲ್ಲಿರುವ ಭೀತಿಯನ್ನು ದೂರ ಮಾಡುವುದು ತಕ್ಷಣ ಮಾಡಬೇಕಾದ ಕೆಲಸ. ಸೇನೆ ರವಾನಿಸುವುದರಿಂದ ಹಿಂಸಾಚಾರವನ್ನೇನೋ ನಿಯಂತ್ರಿಸಬಹುದು. ಆದರೆ ಜನರ ಮನಸ್ಸಿನಲ್ಲಿರುವ ಭೀತಿಯನ್ನು ನಿವಾರಿಸಲು ನಿರಂತರವಾದ ಸಂವಹನ ಮತ್ತು ಸಂಪರ್ಕಗಳು ಅಗತ್ಯ. ಈ ನಿಟ್ಟಿನಲ್ಲಿ ಸರಕಾರ ಮುಂದಡಿಯಿಡಲಿ.