Advertisement

“ಅರಿಶಿನ’ಪ್ರೇಮಾ

09:09 AM Jun 06, 2019 | keerthan |

ಧಾರವಾಡದ ಕಲಘಟಗಿಯ ಪ್ರೇಮಾ ಅವರು, ಅರಿಶಿನದಲ್ಲೇ ಬದುಕಿನ ಖುಷಿಯ ಪರಿಮಳ ಕಂಡುಕೊಂಡವರು. ಎಪ್ಪತ್ತರ ವಯಸ್ಸಿನಲ್ಲೂ ನೀವು ಇವರ ಉತ್ಸಾಹ ನೋಡಬೇಕು…

Advertisement

ಹೆಣ್ಣಿಗೆ ಹಣ ಗಳಿಸುವುದು ಇಂದು ಚಾಲೆಂಜಿನ ವಿಷಯವೇ ಅಲ್ಲ. ನಾಲ್ಕು ಗೋಡೆಗಳ ಮಧ್ಯೆ ಕುಳಿತು, ಆಕೆ ಹಣಕ್ಕಾಗಿ ಕೈಚಾಚುವ ಪ್ರಸಂಗಗಳು ಮೊದಲಿಗಿಂತ ಈಗ ಬಹಳ ಕಡಿಮೆ. ದಿನದಿಂದ ದಿನಕ್ಕೆ ಸ್ತ್ರೀ ಜಗತ್ತು ಸ್ವಾವಲಂಬಿಯಾಗಿ ರೂಪುಗೊಳ್ಳುತ್ತಿರುವ ಈ ಹೊತ್ತಿನಲ್ಲಿ, ಧಾರವಾಡದ ಕಲಘಟಗಿಯ ಪ್ರೇಮಾ ಅವರು ಇದರಿಂದ ಹೊರಗುಳಿದಿಲ್ಲ. ಅರಿಶಿನದಲ್ಲೇ ಬದುಕಿನ ಖುಷಿಯ ಪರಿಮಳ ಕಂಡುಕೊಂಡ ಜಾಣೆ ಇವರು.

ಎಪ್ಪತ್ತರ ವಯಸ್ಸಿನಲ್ಲೂ ನೀವು ಪ್ರೇಮಾ ಅವರ ಉತ್ಸಾಹ ನೋಡಬೇಕು. ಅರಿಶಿನದ ಕೊಂಬುಗಳನ್ನು ಮಶೀನುಗಳಿಗೆ ಹಾಕಿ, ಪುಡಿ ಮಾಡಿಕೊಡುವ ಬಿಡುವಿಲ್ಲದ ಕೆಲಸದಲ್ಲಿ ಅವರಿಗೆ ದಣಿವೆಂಬುದೇ ಇಲ್ಲ. ಮಗ ತಂದುಕೊಟ್ಟ ಮಶೀನಿನಲ್ಲಿ, 1 ಕಿಲೋ ಅರಿಶಿನ ಪುಡಿಮಾಡಿಕೊಟ್ಟರೆ, 30 ರೂ. ಸಂಪಾದನೆ ಆಗುತ್ತದೆ. ಮಗನನ್ನು ಕಳಕೊಂಡ ದುಃಖದಲ್ಲಿರುವ ಅವರಿಗೆ, ಈ ಮಶೀನೇ ಧೈರ್ಯ ಹೇಳುತ್ತಿದೆ.

ಮದುವೆ, ಜಾತ್ರೆಯಂಥ ಸಂದರ್ಭಗಳಲ್ಲಿ ಅರಿಶಿನಕ್ಕೆ ಬೇಡಿಕೆ ಹೆಚ್ಚು. ಆಗ ಪ್ರೇಮಾ ಅವರು ಸಂಪೂರ್ಣವಾಗಿ ಈ ಕಾಯಕದಲ್ಲಿ ಮುಳುಗಿಬಿಡುತ್ತಾರೆ. “ಆ ಸೀಸನ್‌ ಕಳೆದರೆ, ಜನರಿಗೆ ಅಗತ್ಯವಿದ್ದರಷ್ಟೇ ಅರಿಶಿನ ಬಳಕೆಯಾಗುತ್ತದೆ. ಅಷ್ಟು ಡಿಮ್ಯಾಂಡ್‌ ಇರುವುದಿಲ್ಲ’ ಎನ್ನುತ್ತಾರೆ ಪ್ರೇಮಾ.
ಅರಿಶಿನವನ್ನು ಪುಡಿಮಾಡುವುದಷ್ಟೇ ಅಲ್ಲ, ಅದರ ಉಪಯೋಗದ ಬಗ್ಗೆಯೂ ಪ್ರೇಮಾ ವಿವರಣೆ ಕೊಡುತ್ತಾರೆ. “ಭಾರತೀಯ ಮಹಿಳೆಯರಿಗೆ, ಅರಿಶಿನ ಸೌಂದರ್ಯವರ್ಧಕ ಮತ್ತು ಶೃಂಗಾರ ಉತ್ಪನ್ನವಾಗಿ ಬಳಕೆಯಾಗುತ್ತಿದೆ. ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಬಿದ್ದು ಪೆಟ್ಟು ಮಾಡಿಕೊಂಡಾಗ ಗಾಯಕ್ಕೆ, ಹುಣ್ಣುಗಳು ಇದ್ದರೆ, ಅದಕ್ಕೆ ಅರಿಶಿನವೇ ರಾಮಬಾಣ. ಅರಿಶಿನ ಆರೋಗ್ಯಕ್ಕೂ ಒಳ್ಳೆಯದು. ಜೀರ್ಣಕ್ರಿಯೆಯನ್ನು ಚೆನ್ನಾಗಿಡುತ್ತದೆ’ ಎಂದು ವೈದ್ಯರಂತೆ ಸಲಹೆ ಕೊಡುತ್ತಾರೆ.

ಹೌದಲ್ಲವೇ… ಅರಿಶಿನದ ಪ್ರಯೋಜನಗಳು ಹಲವು. ಆ ಕಾರಣಕ್ಕಾಗಿಯೇ ಅಲ್ಲವೇ, ಸಾವಿರಾರು ವರ್ಷಗಳಿಂದ ಭಾರತದಲ್ಲಿ ಇದನ್ನು ಮಸಾಲೆ ಪದಾರ್ಥದಲ್ಲಿ, ಔಷಧ ಸಸ್ಯವಾಗಿ ಬಳಸುತ್ತಿರುವುದು? ಕರುಳಿನಲ್ಲಿರುವ ಹೆಪಾಟೈಟಿಕ್‌ ಅನ್ನು ಪುನಃಶ್ಚೇತನಗೊಳಿಸಿ, ನಂಜಿನ ವಿರುದ್ಧ ಹೋರಾಡುವ ಈ ಅರಿಶಿನ ಅಪ್ಪಟ ನಾಟಿ ವೈದ್ಯ. ಆ ವೈದ್ಯ, ಪ್ರೇಮಾರಂಥ ಬಡ ಮಹಿಳೆಯರಿಗೆ, ಬದುಕಿನ ದಾರಿಯನ್ನೂ ತೋರಿಸಿದ್ದಾನೆ.

Advertisement

ಸುನಿತಾ ಫ‌. ಚಿಕ್ಕಮಠ, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next