ಉಡುಪಿ: ಗೌರಿ ಗಣೇಶ ಹಬ್ಬ ಸನ್ನಿಹಿತವಾಗುತ್ತಿದ್ದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆಯಂತೆ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಹಾಗೂ ವಿಷಯುಕ್ತ ರಾಸಾಯನಿಕ ಬಣ್ಣದ ಗಣಪತಿ ಮೂರ್ತಿಗಳನ್ನು ನಿರ್ಬಂಧಿಸಿರುವುದರಿಂದ ಅರಿಶಿನದಲ್ಲಿ ತಯಾರಿಸಿದ ಗಣಪತಿ ವಿಗ್ರಹವನ್ನು ಪೂಜಿಸುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಕರೆ ನೀಡಿದ್ದಾರೆ.
ಮನೆ ಮನೆಗಳಲ್ಲಿ ರೋಗನಿರೋಧಕ ಶಕ್ತಿಯುಳ್ಳ ಅರಿಶಿನ ಮಿಶ್ರಿತ ಗೋಧಿ ಹಿಟ್ಟು ಅಥವಾ ರಾಗಿಹಿಟ್ಟಿನಿಂದ ಮಾಡಿದ ಪುಟ್ಟ ಗಣೇಶನ ವಿಗ್ರಹಗಳನ್ನು ಮಾಡಿ ಪೂಜಿಸಬಹುದು. ಪ್ಲಾಸ್ಟಿಕ್ ಆಲಂಕಾರಿಕ ವಸ್ತುಗಳನ್ನು ಬಳಸಿ ಪೂಜಿಸುವ ಬದಲು, ಹೂವು ಪತ್ರೆಗಳಿಂದ ಗಣಪತಿಯನ್ನು ಸಿಂಗರಿಸಬಹುದು. ಅರಿಶಿನ ಗಣೇಶ ವಿಗ್ರಹವನ್ನು ಕೂರಿಸಲು ಪೀಠವಾಗಿ ತೆಂಗಿನ ಕರಟವನ್ನು ಉಪಯೋಗಿಸಬಹುದು. ಈ ರೀತಿ ಮಾಡಿದಲ್ಲಿ ನದಿ ತೊರೆ, ಕೆರೆ ಕಟ್ಟೆಗಳು ಮಾಲಿನ್ಯವಾಗುವುದನ್ನು ತಪ್ಪಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ಅಭಿಯಾನ:
ಜನಾಂದೋಲನ ರೂಪಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯಾದ್ಯಂತ “10 ಲಕ್ಷ ಅರಿಶಿನ ಗಣಪತಿ ಅಭಿಯಾನ’ ಹಮ್ಮಿಕೊಂಡಿದೆ. ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಮನೆಗಳಲ್ಲಿ ಅರಿಶಿನ ಗಣಪತಿಯನ್ನು ತಯಾರಿಸಿ, ಪೂಜಿಸಿ, ಗಣಪತಿಯೊಂದಿಗಿನ ತಮ್ಮ ಸೆಲ್ಫಿಯನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿ ಬಂಪರ್ ಬಹುಮಾನ ಗೆಲ್ಲಬಹುದಾಗಿದೆ.
ಹೆಚ್ಚಿನ ಸಹಕಾರಕ್ಕಾಗಿ ಮಂಡಳಿಯ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.ಸೆ. 10ರ ಸಂಜೆ 6ರ ವರೆಗೆ ತಯಾರಿಸಿದ ಅರಿಶಿನ ಗಣೇಶನ ಛಾಯಾ ಚಿತ್ರಗಳನ್ನು ಮಂಡಳಿಯ ಜಾಲತಾಣ kspcb.karnataka.gov.in, Youtube@kspcbkarnataka, facebook@kspcbofficial, Twitter@karnatakakspcb, Instagram: kspcb_official ಗೆ ಕಳುಹಿಸಬಹುದಾಗಿದ್ದು, ಹೆಚ್ಚಿನ ವಿವರಗಳಿಗೆ ಮಂಡಳಿಯ ಜಾಲತಾಣ kspcb.karnataka.gov.in ಸಂಪರ್ಕಿಸಬಹುದಾಗಿದೆ.