Advertisement

ಪ್ರಕ್ಷುಬ್ಧ: ಈದ್‌, ಹನುಮ ಜಯಂತಿಗೆ ಕಟ್ಟೆಚ್ಚರ

02:34 PM Dec 01, 2017 | |

ಹುಣಸೂರು: ನಗರದಲ್ಲಿ ಈದ್‌ ಮಿಲಾದ್‌ ಹಾಗೂ ಹನುಮ ಜಯಂತಿ ಪ್ರಯುಕ್ತ  ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆ ತೆರಳುವ ರಸ್ತೆಗಳನ್ನು ಜಿಲ್ಲಾಡಳಿತ ನಿಗದಿಪಡಿಸಿದ್ದು,  ಎರಡೂ ಕೋಮಿನ ಮುಖಂಡರು ಕಾನೂನು ಸುವ್ಯವಸ್ಥೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್‌ ಕೋರಿದರು.

Advertisement

ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಡಿ.2 ರಂದು ನಡೆಯಲಿರುವ ಈದ್‌ ಮಿಲಾದ್‌ ಹಾಗೂ ಡಿ.3ರ  ಹನುಮ ಜಯಂತಿ ಹಿನ್ನೆಲೆಯಲ್ಲಿ ಎರಡೂ ಕೋಮುಗಳ ಮುಖಂಡರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ ಅವರು ಮಾತನಾಡಿದರು.

ಕಳೆದ ಎರಡು ವರ್ಷದಿಂದ ಹುಣಸೂರು ನಗರ ಪ್ರಕ್ಷುಬ್ಧ ಸ್ಥಿತಿ ಇರುವ ಬಗ್ಗೆ ಪೊಲೀಸ್‌, ಗುಪ್ತಚರ ವರದಿ ಹಾಗೂ ಇಲ್ಲಿನ ಕಂದಾಯಾಧಿಕಾರಿಗಳ ಮಾಹಿತಿಯನ್ನಾಧರಿಸಿ ಎರಡೂ ಕೋಮುಗಳ ಹಬ್ಬಕ್ಕೆ ಪ್ರತ್ಯೇಕ ಮಾರ್ಗ ನಕ್ಷೆ (ರೂಟ್‌ ಮ್ಯಾಪ್‌) ನಿಗದಿಪಡಿಸಲಾಗಿದೆ. ಕಾರ್ಖಾನೆ ರಸ್ತೆ, ಜೆಎಲ್‌ಬಿ ಹಾಗೂ ಟಿಎಪಿಸಿಎಂಎಸ್‌ ರಸ್ತೆಯಲ್ಲಿ ಮೆರವಣಿಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ ಎಂದರು.

ಕಲ್ಕುಣಿಕೆ ರಂಗನಾಥ ಬಡಾವಣೆಯಿಂದ ಮೆರವಣಿಗೆ ನಡೆಸಲು ಹಿಂದೂಪರ ಸಂಘಟನೆಗಳು ಕೋರಿದ್ದ ಮನವಯನ್ನು ತಿರಸ್ಕರಿಸಿದ ಎಸ್ಪಿ ರವಿ.ಡಿ.ಚನ್ನಣ್ಣನವರ್‌, ನಿಗದಿತ ಸ್ಥಳದಲ್ಲೇ ಮೆರವಣಿಗೆ ನಡೆಯಬೇಕೆಂದು ಸೂಚಿಸಿದರು. ಬ್ಯಾನರ್, ಬಂಟಿಂಗ್ಸ್‌ಗಳ ಅಳವಡಿಕೆಗೆ ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಿದ್ದು, ನಗರಸಭೆಗೆ ಅರ್ಜಿ ಸಲ್ಲಿಸಿದ 3 ಗಂಟೆಯೊಳಗೆ ಸಂಬಂಧಿಸಿದವರಿಗೆ ಅನುಮತಿ ನೀಡಲಾಗುವುದೆಂದರು.

ಏಕಾಏಕಿ ನಿರ್ಬಂಧ ಸರಿಯಲ್ಲ: ತಾಲೂಕು ಬಿಜೆಪಿ ಅಧ್ಯಕ್ಷ, ವಕೀಲ ಬಿ.ಎಸ್‌.ಯೋಗಾನಂದಕುಮಾರ್‌ ಮಾತನಾಡಿ, ಯಾವ ಸಭೆಯಲ್ಲೂ ರೂಟ್‌ ಮ್ಯಾಪ್‌ ಬಗ್ಗೆ ಚರ್ಚೆಯಾಗಿಲ್ಲ, ಏಕಾಏಕಿ ನಿರ್ಬಂಧ ವಿಧಿಸಲಾಗಿದೆ. ನಾವೇನೂ ಕಾನೂನು ಉಲ್ಲಂ ಸುವವರಲ್ಲ, ಕಳೆದ ಬಾರಿ ಜಿಲ್ಲಾಡಳಿತ  ಹೇಳಿದಂತೆಯೇ ಕೇಳಿದ್ದೇವೆ. ರಂಗನಾಥ ಬಡಾವಣೆಯಿಂದ ಮೆರವಣಿಗೆ ನಡೆಸಲು ತಿರಸ್ಕರಿಸಿರುವುದು ಸರಿಯಲ್ಲ. ಸಂಸದ ಪ್ರತಾಪಸಿಂಹ ವಿರುದ್ಧª  ನಗರ ಠಾಣೆ ಪಿಎಸ್‌ಐ ಏಕವಚನದಲ್ಲಿ ಮಾತನಾಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

Advertisement

ಭಟ್ಕಳ ಹೇಳಿಕೆ: ಮುಸ್ಲಿಂ ಸಮಿತಿ ಕಾರ್ಯದರ್ಶಿ ಮುಷಾಹಿದ್‌ ಮಾತನಾಡಿ, ಹುಣಸೂರು ಇನ್ನೊಂದು ಭಟ್ಕಳ ಆಗುತ್ತಿದೆ ಎಂಬ ಹೇಳಿಕೆ ಬೇಸರ ತರಿಸಿದೆ. ಇಲ್ಲಿ ಎರಡೂ ಕಡೆಯವರು ಚೆನ್ನಾಗಿದ್ದೇವೆ. ಕೆಲವರಿಂದ ಮಾತ್ರ ಸಮಸ್ಯೆ ಇದೆ. ಜಿಲ್ಲಾಡಳಿತದ ಸೂಚನೆಯಂತೆ ನಡೆದುಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಎರಡೂ ಸಂಘಟನೆಗಳ ಮುಖಂಡರಾದ ವಿ.ಎನ್‌.ದಾಸ್‌, ವರದರಾಜು ಪಿಳ್ಳೆ, ಎನ್‌.ರಾಜೇಂದ್ರ, ಕಿರಣ್‌ ಕುಮಾರ್‌, ಚಂದ್ರಶೇಖರ್‌, ಗಿರೀಶ್‌, ಅನಿಲ್‌, ಸರದಾರ್‌, ಮೊಹಿದುಲ್ಲಾ, ಷಫೀ, ಸಯೀದ ಅಹಮದ್‌ಷಾ ಉಪವಿಭಾಗಾಧಿಕಾರಿ ಕೆ.ನಿತೀಶ್‌, ಎಎಸ್‌ಪಿ ಮಹಮದ್‌ ಸುಜೀತಾ, ಡಿವೈಎಸ್‌ಪಿ ಭಾಸ್ಕರ್‌, ಇಒಸಿ ಆರ್‌.ಕಷ್ಣಕುಮಾರ್‌, ತಹಶೀಲ್ದಾರ್‌ ಮೋಹನ್‌, ಪೌರಾಯುಕ್ತ ಶಿವಪ್ಪನಾಯ್ಕ, ವತ್ತ ನಿರೀಕ್ಷಕ ಪೂವಯ್ಯ ಇತರರಿದ್ದರು.

ಮೆರವಣಿಗೆಗೆ ರೂಟ್‌ ಮ್ಯಾಪ್‌: ಹನುಮ ಜಯಂತಿಗೆ ಹುಣಸೂರು ನಗರದ ಮಂಜುನಾಥ ಬಡಾವಣೆಯ ಮಂಜುನಾಥಸ್ವಾಮಿ ದೇವಾಲಯದಿಂದ ಆರಂಭಿಸಿ ಮಾರುತಿ ಪೆಟ್ರೋಲ್‌ ಬಂಕ್‌, ಕಲ್ಪತರು ವೃತ್ತ, ಹೊಸ ಹಾಗೂ ಹಳೇ ಬಸ್‌ನಿಲ್ದಾಣ, ರೋಟರಿ ವೃತ್ತದ ಮೂಲಕ ನಗರಸಭೆ ಮೈದಾನ‌ವನ್ನು ಸೇರಲಿದೆ. ಈದ್‌ಮಿಲಾದ್‌ ಮೆರವಣಿಗೆಗೆ ಶಬ್ಬೀರ್‌ನಗರದ ಶಾಹಿ ಮಸೀದಿಯಿಂದ ಆರಂಭಿಸಿ ಕಲ್ಪತರು ವೃತ್ತ, ಹೊಸ-ಹಳೆ ಬಸ್‌ನಿಲ್ದಾಣ, ರೋಟರಿ ವೃ‌ತ್ತದ ಮೂಲಕ ಈದ್ಗಾ ಮೈದಾನವನ್ನು ಸೇರಲಿದೆ.

ನಿಗದಿಗೊಳಿಸಿರುವ ರಸ್ತೆಯನ್ನು ಹೊರತುಪಡಿಸಿ ಬೇರೆಲ್ಲೂ ಹೋಗುವಂತಿಲ್ಲ. ಈ ರಸ್ತೆಗಳಲ್ಲಿ ನಿಷೇಧ ಆದೇಶದ ನಾಮಫ‌ಲಕ ಅಳವಡಿಸಲಾಗುವುದು. ಯಾವುದೇ ಧಾರ್ಮಿಕ ಆಚರಣೆಗೆ ಅಡ್ಡಿ ಮಾಡುವುದು ನಮ್ಮ ಉದ್ದೇಶವಲ್ಲ.ನಗರದಲ್ಲಿನ ಪರಿಸ್ಥಿತಿಯನ್ನು ಎಲ್ಲರೂ ಅರ್ಥಮಾಡಿಕೊಂಡು ಜಿಲ್ಲಾ, ತಾಲೂಕು ಆಡಳಿತ ಹಾಗೂ ಪೊಲೀಸ್‌ ಇಲಾಖೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ರಂದೀಪ್‌ ಮನವಿ ಮಾಡಿದರು.

ಹೊರಗಿನ ವ್ಯಕ್ತಿಗಳಿಗೆ ನಿರ್ಬಂಧ: ಎಸ್ಪಿ
ತಾಲೂಕಿನಲ್ಲಿ ಗಾಳಿ ಮಾತು, ವದಂತಿ ಹೆಚ್ಚಿದ್ದು,  ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ್ದನ್ನು ಫೋಸ್ಟ್‌ ಮಾಡಿ ಜನರ ನೆಮ್ಮದಿ ಕೆಡಿಸುವುದು ಕೂಡ ಅಪರಾಧವಾಗಿದೆ. ಹೊರಗಿನ ವ್ಯಕ್ತಿಗಳು ಬರುವವಂತಿಲ್ಲ. ಜನಸಾಮಾನ್ಯರ ಸುರಕ್ಷತೆಗಾಗಿ ಈ ಕ್ರಮ ಕೈಗೊಂಡಿದ್ದೇವೆ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕಾನೂನು ಉಲ್ಲಂ ಸುವವರಿಗೆ ಕಠಿಣ ಕ್ರಮ ಕಾದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್‌ ಎಚ್ಚರಿಕೆ ನೀಡಿದರು.

ಪೂರ್ವಗ್ರಹ ಪೀಡಿತರಾಗಿ ಮೆರವಣಿಗೆಗೆ ರಸ್ತೆಗಳಿಗೆ ನಿರ್ಬಂಧ ವಿಧಿಸಿಲ್ಲ. ಇಲ್ಲಿನ ಪರಿಸ್ಥಿತಿ ಎಲ್ಲರೂ ಅಂದುಕೊಂಡಷ್ಟು ಸುಲಭವಾಗಿಲ್ಲ. ಇಲ್ಲಿ ಎರಡೂ ಕಡೆಯಲ್ಲಿ ಕೆಲ ಕಿಡಿಗೇಡಿಗಳಿಂದ ಅಶಾಂತಿ ಉಂಟಾಗುತ್ತಿದೆ. ಇದನ್ನು ಆಧರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next