ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಪ್ರಾರಂಭಿಸಿರುವ ತೊಗರಿ ಖರೀದಿ ಕೇಂದ್ರದಲ್ಲಿ ರೈತರು ಬೆಳೆದ ತೊಗರಿಯನ್ನು ಅಲ್ಲಿನ ಸಿಬ್ಬಂದಿ ಖರೀದಿಸದೆ ಅನಾವಶ್ಯಕವಾಗಿ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿ ತೊಗರಿಯನ್ನು ತೂರಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸುಲೇಪೇಟ ಗ್ರಾಮದ ಶ್ರೀ ಖಟ್ವಾಂಗೇಶ್ವರ ಮಠದಲ್ಲಿ ರೈತರು ಬೆಳೆದ ತೊಗರಿಯನ್ನು ಖರೀದಿಸುವುದಕ್ಕಾಗಿ ತೊಗರಿ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಖರೀದಿ ಕೇಂದ್ರಕ್ಕೆ ದಸ್ತಾಪುರ, ರಾಮತೀರ್ಥ, ಭಂಟನಳ್ಳಿ, ಹೊಡೇಬೀರನಳ್ಳಿ, ಕುಪನೂರ, ಪೆಂಚನಪಳ್ಳಿ, ರುಸ್ತಂಪುರ ಮತ್ತು ಸುಲೇಪೇಟ ಹೋಬಳಿಯಲ್ಲಿ ಬರುವ ರೈತರು ತೊಗರಿಯನ್ನು ಟ್ರಾಕ್ಟರ್, ಟಂಟಂ, ಎತ್ತಿನ ಬಂಡಿ ಮೂಲಕ ತಂದು ತಂದು ಹಾಕಿದ್ದಾರೆ.
ರೈತರು ತೊಗರಿ ಗುಣಮಟ್ಟದಿಂದ ಕೂಡಿದಿಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಿದ ನಂತರ ತೊಗರಿ ಖರೀದಿಸಲಾಗುತ್ತಿದೆ.ಆದರೆ ಇಲ್ಲಿನ ಸಿಬ್ಬಂದಿ ತೊಗರಿಯನ್ನು ಶುಚಿಗೊಳಿಸಿದ್ದರೂ ಖರೀದಿ ಮಾಡದೆ ಅನಾವಶ್ಯಕವಾಗಿ ತೊಂದರೆ ನೀಡುತ್ತಿದ್ದಾರೆ. ಕೇಂದ್ರಕ್ಕೆ ತಂದು ಹಾಕಿರುವ ತೊಗರಿಯನ್ನು ಬೇರೆಡೆ ವ್ಯಾಪಾರ ಮಾಡಲು ಕಷ್ಟಪಡಬೇಕಾಗಿದೆ.
ಮಠದಲ್ಲಿ ಕಳೆದ ಒಂದು ತಿಂಗಳ ಹಿಂದೆಯೇ ತೊಗರಿ ತಂದು ಹಾಕಿದರೂ ತೊಗರಿ ಖರೀದಿಸುತ್ತಿಲ್ಲ. ಹಗಲು ರಾತ್ರಿ ಎನ್ನದೆ ತೊಗರಿ ಕಾಯಬೇಕಾಗಿದೆ ಎಂದು ಆರೋಪಿಸಿದ್ದಾರೆ. ತೊಗರಿ ಗುಣಮಟ್ಟದಿಂದ ಕೂಡಿದ್ದರೂ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಸೋಮವಾರ ಮಧ್ಯಾಹ್ನದ ವರೆಗೆ ಯಾವುದೇ ವ್ಯಾಪಾರ ವಹಿವಾಟು ನಡೆಸಲಿಲ್ಲವೆಂದು ರೈತರಾದ ಮಹಾದೇವಪ್ಪ, ಮಲ್ಲಿಕಾರ್ಜುನ, ಪಿತಂಬರರಾವ ನಾವದಗಿ ದೂರಿದ್ದಾರೆ.
ಸುಲೇಪೇಟ ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಪ್ರತಿಕ್ವಿಂಟಾಲ್‌ಗೆ ಎರಡು ಕೆಜಿ ತೊಗರಿ ಮತ್ತು ಹಮಾಲಿ ಇನ್ನಿತರ ಖರ್ಚು ಎಂದು 150 ರೂ. ವಸೂಲಿ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಸಂಬಂಧಪಟ್ಟ ಅಧಿಧಿಕಾರಿಗಳು ಈ ಕುರಿತು ಗಮನ ಹರಿಸಬೇಕೆಂದು ಸುಲೇಪೇಟ ಗ್ರಾಮದ ರೈತ ಮುಖಂಡ ರಜಾಕ ಪಟೇಲ್ ಆಗ್ರಹಿಸಿದ್ದಾರೆ.