Advertisement

ಟ್ಯುಪೊಲೆವ್‌ ವಿಮಾನ ಕಾರವಾರಕ್ಕೆ

05:00 PM Mar 04, 2020 | Suhan S |

ಕಾರವಾರ: ನೌಕಾಪಡೆ ಕಾರ್ಯಾಚರಣೆಗಳಿಂದ ನಿವೃತ್ತಿ (ಡಿ- ಕಮಿಷನ್‌) ಹೊಂದಿರುವ ಟ್ಯುಪೊಲೆವ್‌- 142ಎಂ ಯುದ್ಧ ವಿಮಾನದ ಬಿಡಿ ಭಾಗಗಳನ್ನು ನಗರಕ್ಕೆ ತಂದು, ಜೋಡಿಸಿಕೊಡುವ ಒಪ್ಪಂದ ಪತ್ರಕ್ಕೆ ನೌಕಾಪಡೆ ಕರ್ನಾಟಕ ನೌಕಾ ಪ್ರದೇಶದ ಧ್ವಜ ಅಧಿಕಾರಿ, ಕರ್ನಾಟಕ ನೇವಲ್‌ ಏರಿಯಾ ಫ್ಲ್ಯಾಗ್ ಆಫೀಸರ್‌ ರಿಯರ್‌ ಅಡ್ಮಿರಲ್‌ ಮಹೇಶ್‌ ಸಿಂಗ್‌ ಹಾಗೂ ಜಿಲ್ಲಾಧಿಕಾರಿ ಡಾ| ಕೆ.ಹರೀಶಕುಮಾರ್‌ ಮಂಗಳವಾರ ಸಹಿ ಮಾಡಿ, ವಿನಿಮಯ ಮಾಡಿಕೊಂಡರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ರವೀಂದ್ರನಾಥ ಟ್ಯಾಗೋರ್‌ ಕಡಲ ತೀರದ ಚಾಪೆಲ್‌ ಯುದ್ಧನೌಕೆ ವಸ್ತು ಸಂಗ್ರಹಾಲಯದ ಬಳಿ ಯುದ್ಧ ವಿಮಾನ ಟ್ಯುಪೊಲೆವ್‌ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಾಗುವುದು. ಚೆನ್ನೈನಿಂದ ವಿಮಾನದ ಬಿಡಿ ಭಾಗಗಳನ್ನು ನಗರಕ್ಕೆ ತಂದು, ನೌಕಾಪಡೆಯಿಂದಲೇ ಜೋಡಿಸಿಕೊಡುವ ಕಾರ್ಯ ಮಾಡಲಾಗುತ್ತದೆ. ಬಳಿಕ ಅದರಲ್ಲಿ ನೌಕಾಪಡೆ ಕಾರ್ಯಾಚರಣೆಗೆ ಸಂಬಂಧಿಸಿದ ವಿವಿಧ ಮಾದರಿಗಳನ್ನು ಇಡಲಾಗುವುದು .ಡಿಸೆಂಬರ್‌ನಲ್ಲಿ ನಡೆಯುವ ನೌಕಾ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ ಸಚಿವರು, ನೌಕಾನೆಲೆ ಹಿರಿಯ ಅಧಿಕಾರಿಗಳನ್ನು ಕರೆಸಿ, ಉದ್ಘಾಟಿಸಲು ಯೋಚಿಸಿದ್ದೇವೆ ಎಂದರು.

ಈ ಯುದ್ಧ ವಿಮಾನವನ್ನು ನಗರಕ್ಕೆ ತಂದು ಪ್ರತಿಷ್ಠಾಪಿಸಬೇಕೆಂಬ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಪ್ರಯತ್ನದಲ್ಲಿದ್ದೆವು. ಟ್ಯುಪೊಲೆವ್‌ಗೆ ಸಂಬಂಧಿಸಿ ನಮ್ಮ ರಾಜ್ಯ ಸರ್ಕಾರದ ಬೇಡಿಕೆ ಗಳೆಲ್ಲವನ್ನೂ ನೌಕಾಪಡೆ ಇದೀಗ ಪುರಸ್ಕರಿಸಿ, ಒಪ್ಪಂದ ಮಾಡಿಕೊಂಡಿದೆ. ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದದಂತೆ, ಯದ್ಧ ವಿಮಾನಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಹಾಗೂ ನೌಕಾಪಡೆ ಪರಸ್ಪರ ಶೇ.50ರಷ್ಟು ಪಾಲುದಾರಿಕೆ ವಹಿಸಿಕೊಳ್ಳಬೇಕು ಎಂದಾಗಿತ್ತು. ಅಂದು ಯೋಜನೆ ರೂಪಿಸಿದಾಗ ವಿಮಾನವನ್ನು ಇಲ್ಲಿಗೆ ತರಲು 4 ಕೋಟಿ ಖರ್ಚು ಬರಬಹುದು ಎಂಬ ನಿರೀಕ್ಷೆ ಇತ್ತು. ಅದರಂತೆ ರಾಜ್ಯ ಸರ್ಕಾರದ 2 ಕೋಟಿ ರೂ. ಕೂಡ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಆ ವೆಚ್ಚ ಸುಮಾರು 10 ಕೋಟಿಗೆ ಹೆಚ್ಚಳವಾಗಿದೆ.

ಹೀಗಾಗಿ ರಾಜ್ಯ ಸರ್ಕಾರ 5 ಕೋಟಿ ಕೊಡಬೇಕಾಯಿತು. ನೌಕಾಪಡೆ ಕೂಡ ಹಣ ನೀಡಲು ರಕ್ಷಣಾ ಪಡೆಯ ಪ್ರಧಾನ ಕಚೇರಿಯಿಂದಲೇ (ಡಿಫೆನ್ಸ್‌ ಹೆಡ್‌ ಕ್ವಾರ್ಟರ್‌) ಅನುಮತಿ ಪಡೆಯಬೇಕಾದ್ದರಿಂದ ಈ ಪ್ರಕ್ರಿಯೆ ವಿಳಂಬವಾಗಿತ್ತು ಎಂದರು. ಈ ನಡುವೆ ದೇಶದಲ್ಲಿ ಸುಲಲಿತವಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದು ಇಲ್ಲಿನ ಸೀಬರ್ಡ್‌ ಯೋಜನೆಗೆ. ಜತೆಗೆ, ಏಷ್ಯಾದಲ್ಲೇ ಅತಿದೊಡ್ಡ ನೌಕಾನೆಲೆ ಕೂಡ ಇಲ್ಲೇ ಇದ್ದಿದ್ದರಿಂದ, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಯುದ್ಧ ವಿಮಾನದ ಪೂರ್ತಿ ಖರ್ಚನ್ನು ನೌಕಾನೆಲೆಯವರೇ ಭರಿಸಬೇಕು ಎಂದು ಸಂಸದರು, ಉಸ್ತುವಾರಿ ಸಚಿವರು, ಶಾಸಕರು ರಕ್ಷಣಾ ಸಚಿವರಿಗೆ ಹಾಗೂ ರಕ್ಷಣಾ ಪಡೆಯ ಪ್ರಧಾನ ಕಚೇರಿ (ಡಿಫೆನ್ಸ್‌ ಹೆಡ್‌ ಕ್ವಾರ್ಟರ್‌) ಮೇಲೆ ಒತ್ತಡ ಹೇರಿದ್ದರು. ನೌಕಾಪಡೆ ಹಿರಿಯ ಅಧಿಕಾರಿಗಳು ಇಲ್ಲಿನ ನೌಕಾನೆಲೆಗೆ ಭೇಟಿ ನೀಡಿದಾಗಲೂ ವಿಶೇಷವಾಗಿ ಈ ಬಗ್ಗೆ ಮನವರಿಕೆ ಮಾಡಿದ್ದೆವು. ಇದರೊಂದಿಗೆ ಕರ್ನಾಟಕ ನೌಕಾ ಪ್ರದೇಶದ ಧ್ವಜ ಅಧಿಕಾರಿ ರಿಯರ್‌ ಅಡ್ಮಿರಲ್‌ ಮಹೇಶ್‌ಸಿಂಗ್‌ ಕೂಡ ಸಹಕಾರ ನೀಡಿದರು ಎಂದರು.

ಈಗಿರುವ ಚಾಪೆಲ್‌ ಯುದ್ಧ ನೌಕೆ ವಸ್ತು ಸಂಗ್ರಹಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಅದರಂತೆ, ಈಗ ಟ್ಯುಪೊಲೆವ್‌ ಯುದ್ಧ ವಿಮಾನ ವಸ್ತು ಸಂಗ್ರಹಾಲಯವಾದರೆ ತಿಂಗಳಿಗೆ ಅಂದಾಜು 6 ಲಕ್ಷ ರೂ. ನಿರ್ವಹಣಾ ವೆಚ್ಚ ಬರಬಹುದು. ಅದನ್ನು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಂದ ಸರಿದೂಗಿಸಿಕೊಳ್ಳಬಹುದು ಎಂಬ ಯೋಚನೆ ಇದೆ. ನೌಕಾಪಡೆಯೊಂದಿಗೆ ಈ ಸಂಬಂಧ ಎರಡು ವರ್ಷದ ಕರಾರು ಹೊಂದಿದ್ದೇವೆ. ಇದು ಮುಂದೆ ನವೀಕರಣಗೊಳ್ಳಲಿದೆ. ಈ ಕರಾರನ್ನು ವಿಲೇ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಿದೆ.

Advertisement

ಇದೇ ಮೊದಲ ಬಾರಿಗೆ ಈ ಯುದ್ಧ ವಿಮಾನದ ಸಾಗಣೆ ಹಾಗೂ ಜೋಡಣೆಯ ವೆಚ್ಚವನ್ನು ಭಾರತೀಯ ನೌಕಾಪಡೆ ಭರಿಸುತ್ತಿದೆ. ನಿರ್ವಹಣೆ ಮಾತ್ರ ನಮ್ಮದು. ಚಾಪೆಲ್‌ ಹಾಗೂ ಟ್ಯುಪೊಲೆವ್‌ ವಸ್ತು ಸಂಗ್ರಹಾಲಯವೆರಡಕ್ಕೂ ಒಂದೇ ಪ್ರವೇಶ ಶುಲ್ಕವನ್ನು ಇಡಲಾಗುವುದು. ಅತಿ ಕಡಿಮೆ ಶುಲ್ಕ ಇಡಲಾಗುವುದು. ಇದು ನೌಕಾಪಡೆ ಯೋಜನೆ ಆಗಿರುವುದರಿಂದ ಸಿಆರ್‌ಝೆಡ್‌ ನಿಯಮಗಳು ಅಡ್ಡಿ ಬರುವುದಿಲ್ಲ. ಆದರೂ ರಾಜ್ಯ ಸರ್ಕಾರದ ಸಿಆರ್‌ಝೆಡ್‌ ಸಮಿತಿಗೆ ಕಳುಹಿಸಿದ್ದೇವೆ ಎಂದರು.

ನೌಕಾಪಡೆಯ ಕರ್ನಾಟಕ ನೌಕಾ ಪ್ರದೇಶದ ಧ್ವಜ ಅಧಿಕಾರಿ ರಿಯರ್‌ ಅಡ್ಮಿರಲ್‌ ಮಹೇಶ್‌ಸಿಂಗ್‌ ಮಾತನಾಡಿ, ಕಾರವಾರದ ಜನರಿಗಾಗಿ ಭಾರತೀಯ ನೌಕಾಪಡೆ ಆಭಾರಿಯಾಗಿದೆ. ಇಲ್ಲಿನ ನೌಕಾನೆಲೆ ಏಷ್ಯಾದ ಅತಿದೊಡ್ಡ ನೆಲೆಯಾಗಿ ಅಭಿವೃದ್ಧಿಗೊಳ್ಳುತ್ತಿದೆ ಎಂದರು. ಒಮ್ಮೆ ಇದು ಇಲ್ಲಿ ಸ್ಥಾಪನೆಗೊಂಡ ಬಳಿಕ ಕಾರವಾರಕ್ಕೆ ಒಂದು ಐತಿಹಾಸಿಕ ಗುರುತು ನೀಡಲಿದೆ. ಇದನ್ನು ನೌಕಾಪಡೆಯಿಂದ ವಿಶಾಖಪಟ್ಟಣಂ, ಕೊಲ್ಕತ್ತಕ್ಕೆ ಉಡುಗೊರೆಯಾಗಿ ನೀಡಲಾಗಿದ್ದು, ಕಾರವಾರ ಇದನ್ನು ಪಡೆಯುತ್ತಿರುವ ಮೂರನೇ ನಗರವಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್‌, ನೌಕಾನೆಲೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಜಯ್‌ ಕಪೂರ್‌ ಹಾಗೂ ನೌಕಾಪಡೆ ಇತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next