Advertisement
ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಸಾರ್ವಜನಿಕರು ಪರದಾಡುತ್ತಿದ್ದಾರೆ. ದೇವಸ್ಥಾನಗಳು, ಸಂಪರ್ಕ ರಸ್ತೆಗಳು ಜಲಾವೃತಗೊಂಡಿವೆ. ನದಿ ತೀರದಲ್ಲಿ ಕಂದಾಯ ಅಧಿಕಾರಿಗಳು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಬಳ್ಳಾರಿ: ತುಂಗಾಭದ್ರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು ಹೊಸಪೇಟೆ,ಸಿರಗುಪ್ಪ ಮತ್ತು ಹೂವಿನಹಡಗಲಿ ತಾಲೂಕುಗಳಲ್ಲಿನ ನದಿಪಾತ್ರದಲ್ಲಿರುವ ಎಲ್ಲ ಗ್ರಾಮಗಳಲ್ಲಿ ಜಿಲ್ಲಾಡಳಿತ ವತಿಯಿಂದ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಹಡಗಲಿ ತಾಲೂಕಿನ ಹಿರೇಹಡಗಲಿ ಹೋಬಳಿ ಕುರವತ್ತಿ ಗ್ರಾಮದಲ್ಲಿ 38 ಜನರನ್ನು ಸ್ಥಳಾಂತರ ಮಾಡಲಾಗಿದ್ದು, ಅವರಿಗೆ ಗ್ರಾಮ ಮಟ್ಟದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಹಡಗಲಿ ಹೋಬಳಿಯ ಅಂಗೂರು ಗ್ರಾಮದಲ್ಲಿ 11ಜನರನ್ನು ಸ್ಥಳಾಂತರಿಸಲಾಗಿದ್ದು, ಸಂತ್ರಸ್ಥರು ತಮ್ಮ ಇಚ್ಚೆಯಂತೆ ಸಂಬಂಧಿಕರ ಮನೆಗಳಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಹಡಗಲಿ,ಹೊಸಪೇಟೆ ಮತ್ತು ಸಿರಗುಪ್ಪ ತಾಲೂಕುಗಳಲ್ಲಿ ನದಿ ನೀರಿನ ಮಟ್ಟ ಹೆಚ್ಚಳದ ಪರಿಣಾಮ 883 ಹೆಕ್ಟೇರ್ ಭತ್ತದ ಬೆಳೆ ನೀರಿನಲ್ಲಿ ಮುಳುಗಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಎರಡೂಮೂರು ದಿನಗಳಲ್ಲಿ ನದಿ ನೀರಿನ ಮಟ್ಟ ಕಡಿಮೆಯಾದರೇ ಬೆಳೆ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
Related Articles
ಕಂಪ್ಲಿ: ಕಳೆದ ಹಲವು ದಿನಗಳಿಂದ ಪ್ರವಾಹಕ್ಕೆ ತುತ್ತಾಗಿರುವ ಕಂಪ್ಲಿ-ಕೋಟೆ ಪ್ರದೇಶ ಸೇರಿದಂತೆ ತಾಲೂಕಿನಲ್ಲಿ ಜಲಾವೃತಗೊಂಡ ವಿವಿಧ ಗ್ರಾಮಗಳಿಗೆ ಜಿಲ್ಲಾ ನ್ಯಾಯಾಧೀಶರಾದ ವಿ.ಎಸ್.ಹಂದ್ರಾಳ್, ಶಾಸಕ ಜೆ.ಎನ್.ಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರಿಗೆ ತೊಂದರೆಯಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚಿಸಿದರು. ಕೋಟೆ ನದಿ ತೀರದ ವಿವಿಧ ಪ್ರದೇಶ ಹಾಗೂ ಮನೆಗಳಿಗೆ ನೀರು ನುಗ್ಗಿ ಸಂತ್ರಸ್ತರಾದ ಕುಟುಂಬಗಳೊಂದಿಗೆ ಚರ್ಚಿಸಿದರು. ಸಂತ್ರಸ್ತರು ತಾಲೂಕು ಆಡಳಿತ ಆರಂಭಿಸಿರುವ ಗಂಜಿಕೇಂದ್ರಕ್ಕೆ ಸ್ಥಳಾಂತರಗೊಳ್ಳಬೇಕು ಹಾಗೂ ನೀರಿನ ಪ್ರವಾಹ ಅಧಿಕವಾದರೆ ಸುರಕ್ಷಿತ ಸ್ಥಳಗಳಿಗೆ
ತೆರಳುವಂತೆ ಸೂಚಿಸಿದರು. ನಂತರ ಗಂಜಕೇಂದ್ರಕ್ಕೆ ಭೇಟಿ ನೀಡಿದ ನ್ಯಾ|ವಿ.ಎಸ್. ಹಂದ್ರಾಳ್, ಸಂತ್ರಸ್ತರಿಗೆ ಕೈಗೊಂಡ ವಸತಿ ಹಾಗೂ ಊಟದ ವ್ಯವಸ್ಥೆ ಪರಿಶೀಲಿಸಿ ಸೇತುವೆ ಮೇಲೆ ಹರಿಯುತ್ತಿರುವ ಪ್ರವಾಹ ವೀಕ್ಷಿಸಿದರು. ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ನದಿಗೆ ಇನ್ನು ಹೆಚ್ಚಿನ ಪ್ರಮಾಣದ ನೀರು ಬಿಡುವ ನಿರೀಕ್ಷೆ ಇದ್ದು, ನದಿ ತೀರದ ಕುಟುಂಬಗಳನ್ನು ಸ್ಥಳಾಂತರಿಸಲು ಸೂಕ್ತ ಕ್ರಮ ಮತ್ತು ಸಂತ್ರಸ್ತರಿಗೆ ಗಂಜಿಕೇಂದ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸೂಚಿಸಿದರು. ಈ ವೇಳೆ ತಹಶೀಲ್ದಾರ್ ಎಂ.ರೇಣುಕಾ,
ಉಪ ತಹಶೀಲ್ದಾರ್ ಬಿ.ರವೀಂದ್ರಕುಮಾರ್, ಪಿಎಸ್‌ಐ ನಿರಂಜನ ಇದ್ದರು.
Advertisement
ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕೋಟೆಯಲ್ಲಿ ಪ್ರವಾಹ ಪರಿಸ್ಥಿತಿ ಅಧಿಕವಾಗಿದೆ. ಇಂದು 26 ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಅಲ್ಲಿ ಗಂಜಿಕೇಂದ್ರ ತೆರೆಯಲಾಗಿದೆ. ಪ್ರವಾಹ ಅಧಿಕವಾದರೆ ಪಟ್ಟಣದ 8ನೇ ವಾರ್ಡ್ ಸರ್ಕಾರಿ ಶಾಲೆಯನ್ನು ವಸತಿಗಾಗಿ ಕಾಯ್ದಿರಿಸಲಾಗಿದೆ.
ಗಂಜಿಕೇಂದ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ನದಿ ತೀರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ನದಿ ತೀರದಲ್ಲಿ ಕಂದಾಯ ಅಧಿಕಾರಿಗಳು, ಉಪ ತಹಶೀಲ್ದಾರ್ ಬಿ.ರವೀಂದ್ರಕುಮಾರ್, ಆಹಾರ ನಿರೀಕ್ಷಕರಾದ ರವಿ ರಾಠೊಡ್, ಎಸ್.ಎಸ್.ತಂಗಡಗಿ, ಗ್ರಾಮ ಲೆಕ್ಕಾಧಿಕಾರಿಗಳು, ಪುರಸಭೆ ಸಿಬ್ಬಂದಿ, ಪೊಲೀಸರು ಬೀಡು ಬಿಟ್ಟಿದ್ದು ತೀವ್ರ ನಿಗಾವಹಿಸಿದ್ದಾರೆ.ಎಂ.ರೇಣುಕಾ, ತಹಶೀಲ್ದಾರ್ ಕಂಪ್ಲಿ.