Advertisement

ತುಂಗಭದ್ರಾ ಡ್ಯಾಮ್‌ ಭರ್ತಿಯಾದರೂ ತಪ್ಪದ ಆತಂಕ

04:28 PM Oct 22, 2018 | |

ಗಂಗಾವತಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಕಳೆದ ಆಗಸ್ಟ್‌ನೊಳಗೆ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಯ ಮೂಲಕ ಬಿಡಲಾಯಿತು. ನಾಲ್ಕೈದು ವರ್ಷಗಳಿಂದ ಒಂದೇ ಬೆಳೆ ಬೆಳೆದ ರೈತರು ಈ ಭಾರಿ ಎರಡು ಬೆಳೆ ಬೆಳೆಯಬಹುದೆಂದು ಖುಷಿಯಾಗಿದ್ದರು. ಆದರೆ ಈ ಖುಷಿ ಬಹಳ ದಿನ ಉಳಿಯಲಿಲ್ಲ.

Advertisement

 ಇದೀಗ ಜಲಾಶಯದಲ್ಲಿ ಕೇವಲ 75 ಟಿಎಂಸಿ ಅಡಿ ನೀರಿದ್ದು ಬೇಸಿಗೆ ಬೆಳೆಗೆ ಕಾಲುವೆಗೆ ಹರಿಸುವುದು ಕಷ್ಟ ಎನ್ನುವ ಮಾತು ಅಚ್ಚುಕಟ್ಟು ಪ್ರದೇಶದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಜಲಾಶಯಕ್ಕೆ ಹರಿದು ಬರುತ್ತಿರುವ ನೀರನ್ನು ಸಿಂಗಟಾಲೂರು ಜಲಾಶಯದಲ್ಲಿ ನಿಲ್ಲಿಸುತ್ತಿರುವುದು ರೈತರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.
 
ಅಚ್ಚುಕಟ್ಟು ಪ್ರದೇಶದ ಕೊಪ್ಪಳ, ಬಳ್ಳಾರಿ ಜಿಲ್ಲೆಯ ತಾಲೂಕುಗಳಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಮುಂಗರು ಹಂಗಾಮಿನಲ್ಲಿ ಭತ್ತ ನಾಟಿ ಮಾಡಿದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಕೆಲ ಭಾಗ ಹೊರತುಪಡಿಸಿ ಉಳಿದಂತೆ ಭತ್ತ ನಾಟಿ ಮಾಡಿಲ್ಲ. ಇನ್ನೂ ರಾಯಚೂರಿಗೆ ಎಡದಂಡೆ ಕಾಲುವೆ ನೀರು ತಲುಪಿಲ್ಲ. ಕಾಲುವೆಯಲ್ಲಿ ಹರಿಯುತ್ತಿರುವ ನೀರನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಸಿಬ್ಬಂದಿ ಕೊರತೆ ಇದೆ. ಕಾಲುವೆ ನೀರು ನದಿ ಮೂಲಕ ಆಂಧ್ರಪ್ರದೇಶವನ್ನು ಸೇರುತ್ತಿದೆ. 

 ಕೊನೆಯಲ್ಲಿ ಜಲಾಶದಲ್ಲಿ ಉಳಿಯುವ ನೀರಿನಲ್ಲಿ ಆಂಧ್ರಪ್ರದೇಶ ತನ್ನ ಪಾಲಿನ ನೀರನ್ನು ಕೇಳುವ ಮೂಲಕ ಹಕ್ಕು ಮಂಡನೆ ಮಾಡುತ್ತಿದೆ. ನೀರಿನ ಪಾಲು ಮಾಡಲು ಮಾತ್ರ ತುಂಗಭದ್ರಾ ಬೋರ್ಡ್‌ ಇದ್ದು ಜಲಾಶಯದ ಪ್ರತಿ ಆಗುಹೋಗುಗಳನ್ನು ರಾಜ್ಯ ಸರಕಾರ ನೋಡಿಕೊಳ್ಳಬೇಕಾದ
ಅನಿವಾರ್ಯತೆ ಇದೆ. ಬೋರ್ಡ್‌ ತೆಗೆದು ಹಾಕುವಂತೆ ಅನೇಕ ಭಾರಿ ರೈತರು ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ.
 
ಕುಡಿಯುವ ನೀರಿಗಾಗಿ ನಿರ್ಮಿಸಲಾದ ಸಿಂಗಟಾಲೂರು ಏತ ನೀರಾವರಿ ಯೋಜನೆ ಸಣ್ಣ ಪ್ರಮಾಣದ ಡ್ಯಾಮ್‌ನಲ್ಲಿ ಮಳೆಗಾಲದ ಸಂದರ್ಭದಲ್ಲಿ ನೆರೆಯ ನೀರನ್ನು ಮಾತ್ರ ಸಂಗ್ರಹ ಮಾಡಬೇಕೆನ್ನುವ ನಿಯಮವಿದ್ದರೂ ಗದಗ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಉಳಿದ ದಿನಗಳಲ್ಲಿ ನದಿಯ ಮೂಲಕ ಹರಿದು ಬರುವ ನೀರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ತುಂಗಭದ್ರಾ ಜಲಾಶಯದ ಒಳಹರಿವನ್ನು ತಡೆಯಲಾಗುತ್ತಿದೆ.

ಮುಂಗಾರು ಮಳೆಯಿಂದ ಭರ್ತಿಯಾಗುವ ಜಲಾಶಯದಲ್ಲಿ ಪ್ರತಿವರ್ಷ ನ. 15 ತನಕ ಪ್ರತಿ ದಿನ 15 ಸಾವಿರ ಕ್ಯೂಸೆಕ್‌ ನೀರು ಒಳಹರಿವು ಇರುತ್ತಿತ್ತು. ಇದರಿಂದ ಎಡಬಲ ಮತ್ತು ಇತರೆ ಉಪಯೋಗಕ್ಕಾಗಿ ಪ್ರತಿದಿನ 10 ಸಾವಿರ ಕ್ಯೂಸೆಕ್‌ ನೀರು ಹೊರ ಹರಿವು ಸರಿದೂಗಿಸಲಾಗುತ್ತಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ಸಿಂಗಟಾಲೂರು ಯೋಜನೆಯಲ್ಲಿ ಹರಿದುಬರುವ ನೀರನ್ನು ತಡೆಯುತ್ತಿರುವುದರಿಂದ ಡಿಸೆಂಬರ್‌ ವೇಳೆಗೆ ಜಲಾಶಯದ ನೀರು ಖಾಲಿಯಾಗುತ್ತಿದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.

ಪ್ರಸ್ತುತ ಜಲಾಶಯದಲ್ಲಿ 75 ಟಿಎಂಸಿ ಅಡಿ ನೀರಿದ್ದು, ನಾಟಿ ಮಾಡಿದ ಭತ್ತದ ಬೆಳೆಗೆ ಇನ್ನೂ 30 ಟಿಎಂಸಿ ಅಡಿ ನೀರು ಬೇಕು. ಉಳಿಯುವ 45 ಟಿಎಂಸಿ ಅಡಿ ನೀರಿನಲ್ಲಿ ಆಂಧ್ರಪ್ರದೇಶದ ಪಾಲು ತೆಗೆದು ಕುಡಿಯು ನೀರು, ಡೆಡ್‌ ಸ್ಟೋರೆಜ್‌ ಮತ್ತು ವಿದ್ಯುತ್‌ ಸ್ಥಾವರಗಳಿಗೆ ಕನಿಷ್ಟ 10 ಟಿಎಂಸಿ
ಅಡಿ ನೀರು ಬೇಕಾಗುತ್ತದೆ. ಪುನಃ ಒಂದೇ ಬೆಳೆಗೆ ಅಚ್ಚುಕಟ್ಟು ರೈತರು ತೃಪ್ತಿಪಟ್ಟುಕೊಳ್ಳುವ ಸಂಭವ ಹೆಚ್ಚಿದೆ. ಸೂಕ್ತ ನಿರ್ವಹಣೆ, ಮಿತ ಬಳಕೆ ಮೂಲಕ ನೀರನ್ನು ಉಳಿಸಬೇಕಾದ ಅನಿವಾರ್ಯತೆ ರೈತರು ಮತ್ತು ಜಲಾಶಯದ ಅಧಿಕಾರಿಗಳು ತುರ್ತಾಗಿ ಮಾಡಬೇಕಾಗಿದೆ.

Advertisement

ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಕುಡಿಯುವ ನೀರಿಗಾಗಿ 6.5 ಟಿಎಂಸಿ ಅಡಿ ನೀರು ಸಂಗ್ರಹ ಮಾಡುವ ನೆಪದಲ್ಲಿ 18 ಟಿಎಂಸಿ ಅಡಿ ಜಲಾಶಯಕ್ಕೆ ಹರಿದುಬರುವ ನೀರನ್ನು ಹಿಡಿದಿಟ್ಟುಕೊಳ್ಳುತ್ತಿರುವುದು ಅಚ್ಚುಕಟ್ಟು ಪ್ರದೇಶ ರೈತರಿಗೆ ತೊಂದರೆಯಾಗಿದೆ. ಸಮನಾಂತರ ಜಲಾಶಯ ನಿರ್ಮಿಸಿ ಸಿಂಗಟಾಲೂರು ಯೋಜನೆಯಿಂದ ನೀರಾವರಿ ಮಾಡಲು ನೆರೆ ಸಂದರ್ಭದಲ್ಲಿ ನೀರು ಸಂಗ್ರಹ ಮಾಡುವಂತೆ ರೈತ ಸಂಘ ಆಗ್ರಹಿಸಿತ್ತು. ಅವೈಜ್ಞಾನಿಕವಾಗಿ ಎಚ್‌.ಕೆ. ಪಾಟೀಲ ಅವರ ಮಾತು ಕೇಳಿ ತುಂಗಭದ್ರಾ ಜಲಾಶಯವನ್ನು ಅಪಾಯಕ್ಕೆ ದೂಡಲಾಗುತ್ತಿದೆ. ನೀರು ಆಂಧ್ರಪ್ರದೇಶಕ್ಕೆ ಹರಿಯಲು ಪ್ರಮುಖ ಕಾರಣ ಅಧಿಕಾರಿಗಳು. ಹಣ ಮಾಡುವ ದಂಧೆಯಲ್ಲಿ ತೊಡಗಿದ್ದು ಸೂಕ್ತ ತನಿಖೆಯಾಗಬೇಕು. ನೆರೆ ಸಂದರ್ಭದಲ್ಲಿ 250 ಟಿಎಂಸಿ ಅಡಿ ನೀರು ಆಂಧ್ರದ ಪಾಲಾಗಿದ್ದು ಸಾಮಾನ್ಯ ವೇಳೆಯಲ್ಲಿ ಆಂಧ್ರಕ್ಕೆ ನೀರು ಬಿಡಬಾರದು.
 ತಿಪ್ಪೇರುದ್ರಸ್ವಾಮಿ, ರೈತ ಹೋರಾಟಗಾರ

„ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next