Advertisement

Tungabhadra Dam: ಹೆಚ್ಚಿದ ಒಳಹರಿವು; ಜು.19 ರಿಂದ ಕಾಲುವೆಗಳಿಗೆ ನೀರು ಬಿಡುಗಡೆ

01:05 PM Jul 18, 2024 | Team Udayavani |

ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ (Tungabhadra Dam) ಒಂದು ಲಕ್ಷ ಕ್ಯೂಸೆಕ್ಸ್‌ಒಳ ಹರಿವು ಹೆಚ್ಚಾಗಿದ್ದು, ಡ್ಯಾಂನಲ್ಲಿ 46 ಟಿಎಂಸಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಜು.19 ರಿಂದ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.

Advertisement

ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು 2024-25ನೇ ಸಾಲಿನಲ್ಲಿ ಮುಂಗಾರು-ಹಂಗಾಮಿನಲ್ಲಿ ಮಳೆ ತೀವ್ರತೆ ಹೆಚ್ಚಿರುವುದರಿಂದ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಒಳಹರಿವು ಹೆಚ್ಚಿದೆ. ತುಂಗಭದ್ರಾ ಜಲಾಶಯದಲ್ಲಿ ಗುರುವಾರ 46.80 ಟಿ.ಎಂ.ಸಿಯಷ್ಟು ನೀರು ಸಂಗ್ರಹಣೆಯಾಗಿದ್ದು, ಒಳಹರಿವು ಸುಮಾರು 1 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದೇ ಪ್ರಮಾಣದಲ್ಲಿ ಒಳಹರಿವು ಮುಂದುವರಿದಲ್ಲಿ, ಮುಂದಿನ ಒಂದು ವಾರದೊಳಗೆ ಜಲಾಶಯ ಭರ್ತಿಯಾಗುವ ನಿರೀಕ್ಷೆಯಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಜೊತೆ ಚರ್ಚಿಸಿ, ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಮುಖ್ಯ ಅಭಿಯಂತರರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜುಲೈ 19 ರಿಂದ ಸರಾಸರಿ 4100 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು. ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಸರಾಸರಿ 25 ಕ್ಯೂಸೆಕ್ಸ್‌ನಂತೆ ಹರಿಸಲಾಗುವುದು. ಬಲದಂಡೆ ಕೆಳಮಟ್ಟದ ವಿತರಣಾ ಕಾಲುವೆಗೆ ಸರಾಸರಿ 650 ಕ್ಯೂಸೆಕ್ ನಂತೆ ನೀರು ಹರಿಸಲಾಗುವುದು. ಬಲದಂಡೆ ಮೇಲ್ಮಟ್ಟದ ವಿತರಣಾ ಕಾಲುವೆಗೆ ಜುಲೈ 22 ರಿಂದ ಸರಾಸರಿ 1300 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು. ರಾಯ ಬಸವಣ್ಣ ಕಾಲುವೆಗೆ ಈಗಾಗಲೇ ಜೂನ್ 01 ರಿಂದ 180 ಕ್ಯೂಸೆಕ್ಸ್ ನಂತೆ ಹರಿಸಲಾಗುತ್ತಿದೆ. ನದಿಗೆ ಪೂರಕವಾಗಿ ಸುಮಾರು 1000 ಕ್ಯೂಸೆಕ್ಸ್ ಮತ್ತು ಕಾರ್ಖಾನೆಗಳಿಗೆ 60 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು. ರೈತರು ತುಂಗಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಮಿತವ್ಯಯವಾಗಿ ಬಳಸಿ ಅಧಿಕೃತ ಅಚ್ಚುಕಟ್ಟು ಪ್ರದೇಶದಲ್ಲಿ ನಿಗದಿತ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸಲು ಮನವಿ ಮಾಡಿದ್ದಾರೆ.

ಪ್ರಸಕ್ತ ಅಂದಾಜಿಸಿದ ನೀರಿನ ಪ್ರಮಾಣವು ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣದ ಮೇಲೆ ಅವಲಂಬಿತವಾಗಿದ್ದು, ಮುಂದೆ ಒಳ ಹರಿವಿನ ಪ್ರಮಾಣದಲ್ಲಿ ಕೊರತೆ ಉಂಟಾದಲ್ಲಿ ಪರಿಷ್ಕೃತ ಪ್ರಕಟಣೆ ಪ್ರಕಟಿಸಲಾಗುವುದು ಮುನಿರಾಬಾದ್ ನೀರಾವರಿ ಇಲಾಖೆಯು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next