ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟಿನ ಚೈನ್ ಕಟ್ಟಾಗಿ ಗೇಟ್ ಮೂಲಕ ಅಪಾರ ಪ್ರಮಾಣದ ನೀರು, ನದಿ ಪಾತ್ರಕ್ಕೆ ಹರಿಯುತ್ತದೆ. ಸ್ಥಳಕ್ಕೆ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಡ್ಯಾಂ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ, ಜಲಾಶಯಕ್ಕೆ ನಾಳೆ ತಜ್ಞರು ಭೇಟಿ ನೀಡಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 50 ರಿಂದ 60 ಟಿಎಂಸಿ ಖಾಲಿ ಮಾಡಬೇಕಿದೆ. 20 ಫೀಟ್ ನೀರು ಕಡಿಮೆಯಾಗಬೇಕು ಎಂದರು.
ಚೈನ್ ಲಿಂಕ್ ಪೂರ್ಣ ತುಂಡಾಗಿದೆ. ನೀರು ಕೆಳಗೆ ಇಳಿದ ಮೇಲೆ ಗೊತ್ತಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಡ್ಯಾಂ ಡಿಸೈನ್ ಮಾಡಿದ ಅಧಿಕಾರಿಗಳು ಇಂಜಿನಿಯರ್ ಗಳು ಹೈದರಾಬಾದ್ ನಿಂದ ನಾಳೆ ಬರಲಿದ್ದಾರೆ ಎಂದರು.
20 ಅಡಿ ನೀರು ಹೋಗಲೇಬೇಕಿದೆ. ನೀರಿನ ಒತ್ತಡ ಪ್ರಮಾಣ ತುಂಬಾ ಇದೆ, ಹೀಗಾಗಿ ಅಲ್ಲಿ ಇಳಿದು ಕೆಲಸ ಮಾಡಲು ಆಗುತ್ತಿಲ್ಲ. ನಾಳೆ ಬೆಳಿಗ್ಗೆ ಇದರ ಬಗ್ಗೆ ತಿಳಿಸುತ್ತೇವೆ, ಈಗ 1 ಲಕ್ಷ ಕ್ಯೂಸೆಕ್ ನೀರು ಹೊರ ಹೋಗುತ್ತಿದೆ. ಡ್ಯಾಂ ನ 32 ಗೇಟ್ ಗಳನ್ನು ತೆರೆಯುತ್ತಿದ್ದೇವೆ. ಎಲ್ಲಾ ಗೇಟ್ ಓಪನ್ ಮಾಡಿರುವುದರಿಂದ ಹಳ್ಳಿಗಳಿಗೆ ಎಲ್ಲಾ ಕಡೆ ಮಾಹಿತಿ ನೀಡಿದ್ದೇವೆ. 2 ಲಕ್ಷ 35 ಸಾವಿರ ಕ್ಯೂಸೆಕ್ ವರೆಗೆ ನೀರು ಬಿಟ್ಟರೆ ಯಾವುದೇ ಪರಿಣಾಮವಾಗಲ್ಲ. ಎರಡೂವರೆ ಲಕ್ಷ ನೀರು ಬಿಟ್ಟರೆ ಕೆಲವು ಕಡೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಸದ್ಯ ನಾವು ಜಲಾಶಯದ ಭದ್ರತೆಯ ಬಗ್ಗೆ ನೋಡುತ್ತಿದ್ದೇವೆ. ನಾಳೆ ತಜ್ಞರು ಬಂದು ನಂತರ ಮಾತಾಡಿ ಎನೂ ಮಾಡಬೇಕು ಎಂದು ಯೋಚನೆ ಮಾಡುತ್ತೇವೆ ಎಂದರು.
ಸಿಎಂ ಅವರ ಗಮನಕ್ಕೂ ತರುವ ಕೆಲಸ ಮಾಡುತ್ತೇವೆ. ಈಗ 65 ಟಿಎಂಸಿ ನೀರು ಖಾಲಿ ಮಾಡಿದ ಬಳಿಕವೇ ಅಲ್ಲಿ ಕೆಲಸ ಮಾಡಲು ಸಾಧ್ಯ. ಆ.13ಕ್ಕೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸುವುದು ಕ್ಯಾನ್ಸಲ್ ಆಗಿ 16 ಕ್ಕೆ ಫಿಕ್ಸ್ ಆಗಿತ್ತು ಎಂದು ಶಿವರಾಜ ತಂಗಡಗಿ ಹೇಳಿದರು.