ಹೊಸಪೇಟೆ: ಪವಿತ್ರ ತುಂಗಭದ್ರಾ ನದಿಯ ದಡದ ಎಲ್ಲಿ ನೋಡಿದರಲ್ಲಿ ದೀಪಗಳ ಸಾಲು ಸಾಲು.. ಬೆಳಕಿನ ವೈಭವ. ನದಿಯಲ್ಲಿ ತೇಲುತ್ತ ಸಾಗಿದ ಸಾವಿರಾರು ದೀಪಗಳು. ನದಿಯಲ್ಲಿನ ಬಂಡೆಗಳ ಮೇಲೂ ಉರಿದ ಹಣತೆ…ನದಿಗೆ ಬಾಗಿನ ಸಮರ್ಪಣೆ.
ಇದು ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಐತಿಹಾಸಿಕ ಹಂಪಿಯ ತುಂಗಭದ್ರಾ ನದಿ ಕಂಡದಲ್ಲಿ ಕಂಡ ದೃಶ್ಯ. ಹಂಪಿ ಉತ್ಸವ ನಿಮಿತ್ತ ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ದೇವಾಲಯದ ಸಮೀಪದಲ್ಲಿರುವ ತುಂಗಭದ್ರಾ ನದಿ ತೀರದಲ್ಲಿ ಮಂಗಳವಾರ ‘ತುಂಗಭದ್ರಾ ಆರತಿ’ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ನದಿದಡದಲ್ಲೇ ಸುಂದರ ಮಂಟಪ ನಿರ್ಮಿಸಿ ತಾಯಿ ಭುವನೇಶ್ವರಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ತುಂಗಭದ್ರಾ ಆರತಿ ಮಹೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ಚಾಲನೆ ನೀಡಿದರು. ಗಂಗಾ ಪೂಜೆ ನೆರವೇರಿಸಿ ನಂತರ ತುಂಗಭದ್ರೆಗೆ ಬಾಗಿನ ಅರ್ಪಿಸುವ ಮೂಲಕ ಹಂಪಿ ಉತ್ಸವಕ್ಕೆ ಚಾಲನೆ ನೀಡಿದರು. ಶ್ರೀ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ನಾನಾ ಬಗೆಯ ಆರತಿಯನ್ನು ಬೆಳಗಿ ಬಳಿಕ ಬಾಗಿನ ಅರ್ಪಿಸಿದರು. ಭುವನೇಶ್ವರಿ ದೇವಿ ಹಾಗೂ ತುಂಗಭಧ್ರೆಗೆ ಕುಂಭ ಆರತಿ, ಅಲಿಗೆ ಆರತಿ, ಧೂಪದ ಆರತಿ ಸೇರಿದಂತೆ ವಿವಿಧ ಬಗೆಯ ಆರತಿಯನ್ನು ಬೆಳಗಲಾಯಿತು. ತುಂಗಭದ್ರೆಗೆ ಪೂಜೆ ಸಲ್ಲಿಸಿದ ಬಳಿಕ ಹತ್ತು ಸಾವಿರ ದೀಪಗಳನ್ನು ಹಚ್ಚಿ ನದಿಯಲ್ಲಿ ಬಿಡಲಾಯಿತು. ನದಿದಡ ಕಲ್ಲು-ಬಂಡೆಗಳ ಮೇಲೆ ಒಂದು ಸಾವಿರ ಮಣ್ಣಿನ ಹಣತೆಗಳನ್ನು ಬೆಳಗಿಸಲಾಯಿತು. ದೇವಸ್ಥಾನದ ಪ್ರಧಾನ ಆರ್ಚಕರಾದ ಪಿ. ಶ್ರೀನಾಥ್ ಶರ್ಮಾ, ಜೆ.ಎಸ್. ಶ್ರೀನಿನಾಥ ಶರ್ಮಾ, ಮುರಳಿಧರ ಶಾಸ್ತ್ರಿ , ಶಿವಪಾಣಿ, ಮಂಜುನಾಥ ಭಟ್ ಹಾಗೂ ರವಿಪಾಟೀಲ್ ಅವರ ತಂಡ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಆರಂಭದಲ್ಲಿ ಗಾಯಕಿ ಡಿ. ಶೈಲಜಾ ದೇವರಮನೆ ಮತ್ತು ತಂಡದ ಸದಸ್ಯರು, ಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು. ವಿವಿಧ ಭಜನಾ ತಂಡಗಳು ಸೇರಿದಂತೆ ಸಹಸ್ರಾರು ಜನ ಸಾಕ್ಷಿಯಾದರು. ಬಾಣ-ಬಿರುಸು ಪ್ರದರ್ಶನ ನಡೆಯಿತು. ವಿಜಯನಗರ ರಾಜ ವಂಶಸ್ಥ ಕೃಷ್ಣದೇವರಾಯ, ಸಂಸದ ಉಗ್ರಪ್ಪ, ರಾಜ್ಯಸಭಾ ಸದಸ್ಯ ನಾರ್ಸೀ ಹುಸೇನ್, ತಾಪಂ ಸದಸ್ಯ ಪಾಲಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಜಿಲ್ಲಾಧಿಕಾರಿ ರಾಮಪ್ರಸಾತ್, ಉಪವಿಭಾಗಾಧಿಕಾರಿ ಪಿ.ಎನ್. ಲೋಕೇಶ್, ತಹಶೀಲ್ದಾರ್ ಎಚ್.ವಿಶ್ವನಾಥ, ಎಎಸ್ಪಿ ಲಾವಣ್ಯ, ಹಂಪಿ ಡಿವೈಎಸ್ಪಿ ಸಿನಿ ಮರಿಯಂ ಜಾರ್ಜ್, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಎಸ್.ಪಿ.ಬಿ. ಮಹೇಶ್ ಸೇರಿದಂತೆ ಇನ್ನಿತರರಿದ್ದರು.