Advertisement
ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯ ಪ್ರಸಕ್ತ ವರ್ಷ ಖಾಲಿ ಖಾಲಿಯಾಗಿದೆ.ಪ್ರಸಕ್ತ ವರ್ಷ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಪರಿಣಾಮ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದು ಬಂದಿಲ್ಲ.
Related Articles
Advertisement
ಜುಲೈ ತಿಂಗಳಲ್ಲಿ ವಾಡಿಕೆಯಂತೆ ಅತ್ಯಂತ ಉತ್ತಮ ಮಳೆ ಆಗುತ್ತಾ ಬಂದಿದೆ. ಜೂನ್ ಅಂತ್ಯಕ್ಕೆ ಜುಲೈನ ಮೊದಲ ವಾರದಲ್ಲಿ ಹಳ್ಳ ಕೊಳ್ಳ ತುಂಬಿ ಹರಿಯುವ ರೀತಿ ಮಳೆ ಆಗುತ್ತಿತ್ತು. ಈ ವರ್ಷ ಈ ಲಕ್ಷಣ ಗೋಚರಿಸುತ್ತಿಲ್ಲ.ಮಳೆಗಾಗಿ ಕಾಯುತ್ತಿರುವ ರೈತರ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಜಲಾಶಯದಲ್ಲಿ 3.1 ಟಿಎಂಸಿ: ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ತೀರಾ ಕುಸಿದಿದೆ. 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವುಳ್ಳ ಜಲಾಶಯದಲ್ಲಿ ಸುಮಾರು 33 ಟಿಎಂಸಿ ಯಷ್ಟು ಹೂಳು ಸಂಗ್ರಹವಾಗಿದ್ದು, ಸಂಗ್ರಹ ಸಾಮರ್ಥ್ಯ 100 ಟಿಎಂಸಿಗೆ ಕುಸಿದಿದೆ. ಸದ್ಯ ಜಲಾಶಯದಲ್ಲಿ ನೀರಿನ ಮಟ್ಟ 1573.53 ಅಡಿ ಇದ್ದು, ಕೇವಲ 273 ಕ್ಯೂಸೆಕ್ ಒಳಹರಿವು ದಾಖಲಾಗಿದೆ. 1149 ಕ್ಯೂಸೆಕ್ ನೀರನ್ನು ಕಾಲುವೆಗಳ ಮೂಲಕ ಹೊರಬಿಡಲಾಗುತ್ತಿದ್ದು, 3.01 ಟಿಎಂಸಿ ನೀರು ಸಂಗ್ರಹವಿದೆ ಎಂದು ಟಿಬಿ ಮಂಡಳಿಯ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ.
ಒಟ್ಟಿನಲ್ಲಿ ಈ ಬಾರಿ ಮುಂಗಾರು ಬಹುತೇಕ ಕೈಕೊಟ್ಟಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬರುವುದು ಕಷ್ಟಸಾಧ್ಯ ಎನ್ನುವುದು ರೈತರ ಮಾತು.
3 ವರ್ಷಕೊಮ್ಮೆ ಕೊರತೆ: ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಸರಾಸರಿ ಪ್ರತಿ ಮೂರು ವರ್ಷಕ್ಕೊಮ್ಮೆ ಮಳೆ ಕೊರತೆಯಾಗಿದೆ. ಜಲಾಶಯದ ಇತಿಹಾಸದಲ್ಲೇ 2017 ರಲ್ಲಿ ಅತ್ಯಂತ ಕಡಿಮೆ ಪ್ರಮಾಣದ ನೀರು ಕೇವಲ 88 ಟಿಎಂಸಿ ನೀರು ಹರಿದು ಬಂದಿತ್ತು. ಆ ವರ್ಷ ಕೃಷಿಗೆ ಸಮರ್ಪಕವಾಗಿ ನೀರು ಕೊಡಲು ಸಾಧ್ಯವಾಗಲಿಲ್ಲ. ಕೊನೆಗೆ ಆನ್ ಆಂಡ್ ಆಫ್ ಪದ್ಧತಿಯಂತೆ ಕಾಲುವೆಗಳಿಗೆ ಕೆಲ ದಿನಗಳು ಕೃಷಿಗೆ ನೀರು ಹರಿಸಿ ಕೆಲದಿನಗಳು ಬಂದ್ ಮಾಡಲಾಗಿತ್ತು. ಅದರಂತೆ ಪ್ರಸಕ್ತ ವರ್ಷವೂ ಸಮರ್ಪಕ ಮಳೆಯಾಗದಿದ್ದಲ್ಲಿ ಅದೇ ಪದ್ಧತಿಯಂತೆ ರೈತರ ಜಮೀನುಗಳಿಗೆ ನೀರು ಹರಿಸಲಾಗುವುದು ಎಂದು ತುಂಗಭದ್ರಾ ನೀರಾವರಿ ಇಲಾಖೆಯ ಅಧಿ ಕಾರಿಗಳು ತಿಳಿಸಿದ್ದಾರೆ.
-ವೆಂಕೋಬಿ ಸಂಗನಕಲ್ಲು