ಮಧುಗಿರಿ: ಜಿಲ್ಲೆಯ ಹೈನುಗಾರರ ನೆರವಿಗೆ ತುಮಕೂರು ಹಾಲು ಒಕ್ಕೂಟ ಬರಲಿದ್ದು, ಯಾರೂ ಎದೆಗುಂದಬೇಕಿಲ್ಲ ಎಂದು ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಭರವಸೆ ನೀಡಿದರು.
ಮಧುಗಿರಿಯ ಶೀಥಲೀಕೇಂದ್ರದಲ್ಲಿ ಹೈನುಗಾರರಿಗೆ ಸಹಾಯಧನ ಹಾಗೂ ಮೃತ ರಾಸುಗಳ ವಿಮಾ ಪರಿಹಾರದ ಚೆಕ್ ವಿತ ರಣಾ ಸಮಾರಂಭದಲ್ಲಿ ಮಾತನಾಡಿದರು.
ವಿಮಾ ಪರಿಹಾರದ ಮೊತ್ತ ಹೆಚ್ಚಳ: ರೈತರು ನೀಡುವ ಗುಣಮಟ್ಟದ ಹಾಲಿನಿಂದ ಒಕ್ಕೂಟ ಇಂದು ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ನಿಮ್ಮ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಹಲವು ಸಹಾಯಧನ ಹಾಗೂ ರಾಸುಗಳಿಗೆ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಹಿಂದೆ 15 ಸಾವಿರ ರೂ. ಇದ್ದ ವಿಮಾ ಪರಿಹಾರದ ಮೊತ್ತ ವನ್ನು ಮಾಜಿ ಪಶುಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ 50 ಸಾವಿರ ರೂ.ಗೆ ಹೆಚ್ಚಿಸಿದ್ದರು. ಈಗ ಕೇವಲ 250 ರೂ. ಪ್ರೀಮಿಯಂ ಹಣ ಭರಿಸಿದರೆ ಉಳಿದ ಹಣ ಒಕ್ಕೂಟ ಭರಿಸಲಿದೆ ಎಂದು ಹೇಳಿದರು.
19.5 ಲಕ್ಷ ರೂ. ವಿತರಣೆ: ರಾಸು ಮೃತ ಪಟ್ಟರೆ 50 ಸಾವಿರ ರೂ.ವರೆಗೂ ಪರಿಹಾರ ರೈತರಿಗೆ ಒಕ್ಕೂಟದಿಂದ ಸಿಗುತ್ತದೆ. ಅದರಂತೆ ಈ ಪ್ರಸಕ್ತ ಸಾಲಿನಲ್ಲಿ 19 ಮೃತಪಟ್ಟ ರಾಸುಗಳ 19.5 ಲಕ್ಷ ರೂ. ಪರಿಹಾರ ವಿತರಣೆ ಮಾಡಿ ದ್ದೇವೆ. ಅಲ್ಲದೆ ಮೃತಪಟ್ಟ 5 ಹಾಲು ಉತ್ಪಾದಕರ ಕುಟುಂಬಗಳಿಗೆ ತಲಾ 25 ಸಾವಿರ ರೂ., ವೈದ್ಯಕೀಯ ವೆಚ್ಚವಾಗಿ 20 ಸಾವಿರ ರೂ., ಬಣವೆಗೆ ಬೆಂಕಿ ಬಿದ್ದರೆ 10 ಸಾವಿರ ರೂ., ಮೃತಪಟ್ಟ 3 ಪಡ್ಡೆ ಹಸುಗಳ ಮಾಲೀಕರಿಗೆ 15 ಸಾವಿರ ರೂ. ಪರಿಹಾರ ನೀಡಲಾಗಿದೆ ಎಂದರು.
ಹೈನುಗಾರಿಕೆ ಕೈ ಬಿಡಬೇಡಿ: ಜಿಲ್ಲೆಯ ಎಲ್ಲ ತಾಲೂಕುಗಳು ಬರದಿಂದ ಕಂಗೆಟಿದ್ದು, ಕೃಷಿ ಮಾಡಲಾಗದ ಸ್ಥಿತಿ ಇರುವುದರಿಂದ ರೈತರು ಹೈನುಗಾರಿಕೆ ಕೈ ಬಿಡಬಾರದು. ಹಾಲು ಉತ್ಪಾದಕ ಸಂಘಗಳಲ್ಲಿ ಸದಸ್ಯತ್ವ ಪಡೆದು ಉತ್ತಮ ಹಾಲು ಸಂಗ್ರಹಿಸಿ ಸಂಘಕ್ಕೆ ನೀಡ ಬೇಕು. ಇದರಿಂದ ಸಂಘಗಳ ಅಭಿವೃದ್ಧಿ ಜೊತೆಗೆ ರೈತರು ಆರ್ಥಿಕವಾಗಿ ಸದೃಢವಾಗ ಬಹುದು. ಹಲವಾರು ಉಪಯೋಗಗಳಿದ್ದು, ಹಾಲು ಉತ್ಪಾದಕರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ನೀಡಲಿದ್ದು, ಜಿಲ್ಲಾ ಕೇಂದ್ರದಲ್ಲಿ ಹೆಣ್ಣು ಮಕ್ಕಳಿಗಾಗಿ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ. ಇಂತಹ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ತಾಲೂಕು ವಿಸ್ತರಣಾಧಿಕಾರಿ ಶಂಕರ್‌ನಾಗ್, ಗಿರೀಶ್, ಶಿಲ್ಪಾ, ಮಹಾಲಕ್ಷ್ಮೀ, ಪಶುವೈದ್ಯ ದಿಕ್ಷೀತ್, ಹಾಗೂ ತಾಲೂಕಿನ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಗಳು, ಫಲಾನುಭವಿಗಳು ಇದ್ದರು.