ತುಮಕೂರು: ಜಿಲ್ಲೆಯಾದ್ಯಂತ ಶುಕ್ರವಾರ ಯೋಗ ದಿನ ಆಚರಿಸಲಾಯಿತು. ಬೆಳಗ್ಗೆ 6 ಗಂಟೆ ವೇಳೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ನೆಹರು ಯುವ ಕೇಂದ್ರ, ಎನ್‌ಸಿಸಿ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಹಾಗೂ ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ಆಯೋಜಿಸಿದ್ದ 5ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿ.ಪಂ ಸಿಇಒ ಶುಭಾ ಕಲ್ಯಾಣ್, ಎಎಸ್‌ಪಿ ಡಾ. ಶೋಭಾರಾಣಿ, ಡಿಎಚ್ಒ ಡಾ.ಚಂದ್ರಿಕಾ, ಡಾ.ವೀರಭದ್ರಯ್ಯ ಇತರರಿದ್ದರು.
ಮಕ್ಕಳಿಗೆ ಬೇಕು ಯೋಗದ ಪಾಠ: ಶಾಲೆಗಳಲ್ಲಿ ಮಕ್ಕಳಿಗೆ ಯೋಗ ಕಲಿಸಲು ಸರ್ಕಾರ ಚಿಂತನೆ ಮಾಡಿದೆ. ಈ ಸಂಬಂಧ ಈಗಾಗಲೇ ಬಿ.ಇಡಿ ಪಠ್ಯದಲ್ಲಿ ಅಳವಡಿಸಲಾಗಿದೆ. ಈ ಸಂಬಂಧ ಶಿಕ್ಷಕರು ಹೆಚ್ಚು ತರಬೇತಿ ಪಡೆದು ಶಾಲಾ ಮಕ್ಕಳಿಗೂ ಯೋಗದ ತರಬೇತಿ ನೀಡಬೇಕಾಗಿದೆ.
ಗಮನ ಸೆಳೆದ ಯೋಗ ದಿನ: ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅಂತ ರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ನಿಸರ್ಗ ಯೋಗಧಾಮ, ಯೋಗ ಸಾಧನ ಮಂದಿರ, ಸಿದ್ಧಿ ಸಮಾಧಿ ಯೋಗ, ಆರ್ಟ್ ಆಫ್ ಲೀವಿಂಗ್, ಮಹಿಳಾ ಸಮನ್ವಯ ಸಮಿತಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮಂಜುನಾಥ ಸ್ವಾಮಿ, ಎನ್.ಎಸ್.ಮಹೇಶ್ ಚಾಲನೆ ನೀಡಿದರು. ಯೋಗ ಗುರುಗಳಾದ ಪ್ರೊ.ಚಂದ್ರಣ್ಣ, ಎಂ.ಕೆ.ನಾಗರಾಜ್ ರಾವ್, ಜಿ.ವಿ.ವಿ ಶಾಸ್ತ್ರಿ ಇತರರಿದ್ದರು.
ನೀರಿನಲ್ಲಿ ಯೋಗಾಸನ: ತುಮಕೂರು ಟೌನ್ ಕ್ಲಬ್‌ನಲ್ಲಿ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಈಜು ಕೊಳದಲ್ಲಿ ತರಬೇತಿದಾರ ಆರ್.ಎಂ.ಶಿವಕುಮಾರ್ ನೇತೃತ್ವದಲ್ಲಿ ನೀರಿನ ಮೇಲೆ ಯೋಗ ಪ್ರದರ್ಶಿಸಿದರು. ಟಿ.ಆರ್.ತೇಜಸ್ ರುದ್ರೇಶ್, ನೇತ್ರಾವತಿ, ಎಚ್.ಎಸ್. ಅನುಪಮಾ ಇದ್ದರು.