ಮುಂಬಯಿ: ಕಳೆದ 18 ದಿನಗಳಿಂದ ಮಹಾರಾಷ್ಟ್ರದಲ್ಲಿ ನೂತನ ಸರಕಾರ ರಚನೆಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳ ನಡುವೆ ಜಗ್ಗಾಟ, ಮೇಲಾಟ, ಕೆಸರೆರೆಚಾಟ ಜೋರಾಗಿರುವಂತೆ ಈ ಎಲ್ಲಾ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್ ಗೆ ಕಾರಣವಾಗಿದೆ.
ಅದರಲ್ಲೂ ತನ್ನ ದೀರ್ಘಕಾಲದ ರಾಜಕೀಯ ಮಿತ್ರ ಬಿಜೆಪಿಗೆ ಶಿವಸೇನೆ ಕೈಕೊಟ್ಟಿರುವುದಕ್ಕೆ ನೆಟ್ಟಿಗರು, ಶಿವಸೇನೆ ಮತ್ತು ಆ ಪಕ್ಷದ ನಾಯಕರನ್ನು ತಮ್ಮ ಟ್ರೋಲ್ ಗೆ ವಸ್ತುವನ್ನಾಗಿಸಿಕೊಂಡಿದ್ದಾರೆ.
#TumSENAhoPayega (ನಿಮ್ಮಿಂದ ಸಾಧ್ಯವಿಲ್ಲ) ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಶಿವಸೇನೆ, ಎನ್.ಸಿ.ಪಿ. ಮತ್ತು ಕಾಂಗ್ರೆಸ್ ಪಕ್ಷಗಳು ಸೇರಿಕೊಂಡು ರಾಜ್ಯದಲ್ಲಿ ನೂತನ ಸರಕಾರ ರಚನೆಗೆ ಪ್ರಯತ್ನಪಡುತ್ತಿರುವುದು ಮಹಾರಾಷ್ಟ್ರ ಜನತೆಯ ಅದರಲ್ಲೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಮಹಾಯುತಿಗೆ (ಬಿಜೆಪಿ-ಶಿವಸೇನೆ ಮೈತ್ರಿ) ಸತತ ಎರಡನೇ ಬಾರಿ ಮಹಾರಾಷ್ಟ್ರದ ಮತದಾರರು ಸ್ಪಷ್ಟ ಬಹುಮತ ನೀಡಿದ್ದರೂ ಶಿವಸೇನೆಯ ಮೊಂಡುತನದಿಂದ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿರುವುದು ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ #TumSENAhoPayega ಹ್ಯಾಷ್ ಟ್ಯಾಗ್ ನಲ್ಲಿ ನೆಟ್ಟಿಗರು ಪ್ರತ್ಯಕ್ಷವಾಗಿ ಶಿವಸೇನೆಯನ್ನೇ ಟಾರ್ಗೆಟ್ ಮಾಡಿದ್ದಾರೆ.
ಈ ಹ್ಯಾಷ್ ಟ್ಯಾಗ್ ನಲ್ಲಿ ‘ಸೇನಾ’ ಎಂಬ ಪದವನ್ನು ಕ್ಯಾಪಿಟಲ್ ಲೆಟರ್ ನಲ್ಲಿ ಬರುವಂತೆ ರಚಿಸಲಾಗಿದೆ. ಅಂದರೆ ಬಿಜೆಪಿ ಬೆಂಬಲವಿಲ್ಲದೇ ನಿಮಗೆ (ಸೇನ) ಸರಕಾರ ರಚಿಸಲು ಸಾಧ್ಯವೇ ಇಲ್ಲ (ನ ಹೋ ಪಾಯೇಗಾ) ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನು ಬಿಡಿಯಾಗಿ ಓದಿದಾಗ (ತುಮ್ ಸೇನ ಹೋ ಪಾಯೇಗಾ) ಎಂದು ಅರ್ಥ ಬರುತ್ತದೆ.
ಇದಲ್ಲದೇ ಎನ್.ಸಿ.ಪಿ., ಕಾಂಗ್ರೆಸ್ ಪಕ್ಷಗಳೂ ಸಹ ನೆಟ್ಟಿಗರ ಟ್ರೋಲ್ ಗೆ ಆಹಾರವಾಗಿದೆ. ಹೆಚ್ಚಿನ ಟ್ರೋಲ್ ಗಳು ಮರಾಠಿ ಭಾಷೆಯಲ್ಲಿಯೇ ಇವೆ. ಇನ್ನು ಕೆಲವು ಹಿಂದಿಯಲ್ಲಿವೆ.
ಒಟ್ಟಿನಲ್ಲಿ ಮಹಾಯುತಿ ಮೂಲಕ ಮಹಾರಾಷ್ಟ್ರದಲ್ಲಿ ಸತತ ಎರಡನೇ ಬಾರಿಗೆ ಸುಭದ್ರ ಸರಕಾರದ ಮೂಲಕ ಉತ್ತಮ ಆಡಳಿತನ್ನು ನೀಡಬಹುದಾಗಿದ್ದ ಅವಕಾಶವನ್ನು ಶಿವಸೇನೆ ಕೈಯಾರೆ ಹಾಳುಮಾಡಿಕೊಂಡು ಈ ಮೂಲಕ ರಾಜಕೀಯ ಅಸ್ಥಿರತೆಗೆ ಕಾರಣವಾಗಿರುವುದು ಮಾತ್ರವಲ್ಲದೇ ತನ್ನ ಈ ಮೊಂಡುತನದಿಂದ ಬಿಜೆಪಿಗೆ ಪರೋಕ್ಷವಾಗಿ ಲಾಭ ಮಾಡಿಕೊಟ್ಟಿರುವುದರ ನಿಗೂಢತೆ ಮಾತ್ರ ಆ ‘ಶಿವ’ನಿಗೇ ಅರ್ಥವಾಗುವಂತದ್ದು!
#TumSENAhoPayega ಹ್ಯಾಷ್ ಟ್ಯಾಗ್ ನಡಿಯಲ್ಲಿ ಮಾಡಲಾಗುತ್ತಿರುವ ಟ್ರೋಲ್ ಗಳ ಕೆಲವೊಂದು ಸ್ಯಾಂಪಲ್ ಇಲ್ಲಿದೆ: