ತುಮಕೂರು: ವಿಶ್ವ ಪ್ರಸಿದ್ಧ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಕಲ್ಪತರು ನಾಡಿನಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ಎಚ್ ಎಎಲ್ ಹೆಲಿಕಾಪ್ಟರ್ ಘಟಕ ಮತ್ತು ಪ್ರಸಿದ್ಧ ಪಾವಗಡ ಸೋಲಾರ್ ಪಾರ್ಕ್ ಸ್ತಬ್ಧಚಿತ್ರ ಜನರ ಗಮನ ಸೆಳೆಯಲಿವೆ.
ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ವಿಶ್ವ ವಿಖ್ಯಾತ ದಸರಾ ಮಹೋತ್ಸವ ಈ ಬಾರಿ ವಿಜೃಂಭಣೆ ಯಿಂದ ನಡೆಯಲಿದೆ. ಅ.5 ರಂದು ಜರುಗ ಲಿರುವ ಜಂಬೂ ಸವಾರಿಗೆ ತುಮಕೂರು ಜಿಲ್ಲೆಯಿಂದ ಎರಡು ವಿಷಯಾಧಾರಿತ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ. ನಿಟ್ಟೂರಿನಲ್ಲಿ ಸ್ಥಾಪನೆಯಾಗಿ ಉದ್ಘಾಟನೆಗೆ ಸಿದ್ಧವಾಗಿರುವ ಎಚ್‌ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ ಮತ್ತು ಪಾವಗಡದ ವಿಶ್ವದ ಮೊದಲ ಬೃಹತ್ ಸೋಲಾರ್ ಪಾರ್ಕ್ ಕುರಿತ ಸ್ತಬ್ಧಚಿತ್ರ ಅಂದು ಪ್ರದರ್ಶನಗೊಳ್ಳಲಿದೆ.
ಸ್ತಬ್ಧಚಿತ್ರದ ವಿವರ: ಎಚ್‌ಎಎಲ್ ಹೆಲಿಕಾ ಪ್ಟರ್ ತಯಾರಿಕಾ ಘಟಕ, ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಬಿದರೆಹಳ್ಳ ಕಾವಲಿನಲ್ಲಿ 610 ಎಕರೆ ಜಾಗದಲ್ಲಿ ಸುಮಾರು 5 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಹೆಲಿಕಾಪ್ಟರ್ ತಯಾರಿಕಾ ಘಟಕದಲ್ಲಿ ವಾರ್ಷಿಕ ಸೇನೆಗೆ ಬಳಸುವ 30 ಲಘು ವಿಮಾನಗಳು ತಯಾರಾಗಲಿವೆ. ಘಟಕದಿಂದ 2 ಸಾವಿರಕ್ಕೂ ಹೆಚ್ಚು ನೇರ ಉದ್ಯೋಗ ದೊರೆ ಯಲಿದೆ. ಈ ವರ್ಷ ಘಟಕ ಉದ್ಘಾಟನೆ ಆಗ ಲಿದೆ. ಅದಕ್ಕಾಗಿ ಸಿದ್ಧತೆಯೂ ನಡೆದಿದೆ. ಪಾವ ಗಡ ಸೋಲಾರ್ ಪಾರ್ಕ್ ವಿಶ್ವದ ಮೊದಲ ಬೃಹತ್ ಸೋಲಾರ್ ವಿದ್ಯುತ್ ತಯಾರಿಕಾ ಘಟಕವಾಗಿದೆ. ಸುಮಾರು 12 ಸಾವಿರ ಕೋಟಿ ವೆಚ್ಚದಲ್ಲಿ 13 ಸಾವಿರ ಎಕರೆ ಪ್ರದೇಶ ದಲ್ಲಿ ನಿರ್ಮಾಣವಾಗಿದ್ದು, 2050 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ.
ಸ್ತಬ್ಧಚಿತ್ರದ ವಿಶೇಷ : ಸುಮಾರು 27 ಅಡಿ ಉದ್ದ 12 ಅಡಿ ಅಗಲ ಹಾಗೂ 13 ಅಡಿ ಎತ್ತರದಲ್ಲಿ ಎರಡು ವಿಷಯಗಳ ಸ್ತಬ್ಧಚಿತ್ರ ನಿರ್ಮಾಣವಾಗುತ್ತಿದೆ. ಮುಂಭಾಗದಲ್ಲಿ ಹೆಲಿಕಾಪ್ಟರ್ ಮತ್ತು ಘಟಕ, ಹಿಂಭಾಗದಲ್ಲಿ ಸೋಲಾರ್ ಪಾರ್ಕ್ ವಿನ್ಯಾಸಗೊಳಿಸಲಾಗಿದೆ. ಸೆಪ್ಟೆಂಬರ್ 19 ರಿಂದ ಕಲಾವಿದ, ಪತ್ರಕರ್ತ ರಾದ ತಿಪಟೂರು ಕೃಷ್ಣ ನೇತೃತ್ವದಲ್ಲಿ ಸುಮಾರು 18 ಜನ ಕಲಾವಿದರು ಸೇರಿ ಕಲಾಕೃತಿ ತಂಡ ಸ್ತಬ್ಧಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. 2015 ರಿಂದ ತುಮಕೂರು ಜಿಲ್ಲೆ ಸ್ತಬ್ಧಚಿತ್ರ ನಿರ್ಮಾಣದಲ್ಲಿ ತೊಡಗಿರುವ ಕಲಾಕೃತಿ ತಂಡ ಮೂರು ಬಾರಿ ವಿಭಾಗ ಮಟ್ಟದ ಪ್ರಶಸ್ತಿ ಪಡೆದು, ಜಿಲ್ಲೆಗೆ ಕೀರ್ತಿ ತಂದಿರುವುದು ವಿಶೇಷ. ಅರಳುಗುಪ್ಪೆ ಚನ್ನಕೇಶವ ದೇವಾಲಯ, ಎಡೆಯೂರು ಸಿದ್ದಲಿಂಗೈಶ್ವರ, ಸಿದ್ದಗಂಗ ಶ್ರೀ ಶಿವಕುಮಾರ ಸ್ವಾಮಿಗಳ ಸ್ತಬ್ಧಚಿತ್ರ ಜನಮನ್ನಣೆಗಳಿದ್ದವು.