ದನ್ವಯ ಈ ಕ್ಷೇತ್ರವನ್ನು ಜೆಡಿಎಸ್ ಪಡೆದುಕೊಂಡಿದ್ದು, ಮೈತ್ರಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಇನ್ನೂ ಗೊಂದಲವಿದೆ. ಇನ್ನು ಬಿಜೆಪಿಯಿಂದ ಜಿ.ಎಸ್. ಬಸವರಾಜುಗೆ ಟಿಕೆಟ್ ಘೋಷಣೆಯಾಗಿದೆ.
Advertisement
ರಾಜಧಾನಿ ಬೆಂಗಳೂರಿಗೆ ಅತಿ ಸಮೀಪವಿರುವ ತುಮಕೂರು, ಆರ್ಥಿಕ, ಕೈಗಾರಿಕಾ ನಗರವಾಗಿ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಸಮಸ್ಯೆಗಳೂ ವೃದ್ಧಿಸುತ್ತಿವೆ. ಈ ಮಧ್ಯೆ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಜಿಲ್ಲೆಯ ಬಹುತೇಕ ತಾಲೂಕುಗಳು ಬರಪೀಡಿತವಾಗಿದ್ದು, ಜನ-ಜಾನುವಾರುಗಳು ತೊಂದರೆಗೆ ಸಿಲುಕಿವೆ. ಹೇಮಾವತಿ ನದಿ ನೀರನ್ನು ಜಿಲ್ಲೆಗೆ ಹರಿಸಿ, ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ದಶಕಗಳಿಂದ ನನೆಗುದಿಗೆ ಬಿದ್ದಿದೆ. ಭವಿಷ್ಯದಲ್ಲಿ ಹೇಮಾವತಿ ನದಿಯಿಂದ ನಮಗೆ ನೀರು ಸಿಗಲಿದೆ ಎಂಬ ಭರವಸೆಯಲ್ಲಿ ಜಿಲ್ಲೆಯ ಜನ ದಿನಗಳನ್ನು ದೂಡುತ್ತಿದ್ದಾರೆ.ಈ ಮಧ್ಯೆ ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ನೀರಿನ ತೀವ್ರ ಬರ ಎದುರಾಗಿದೆ. ಆದರೆ ಜನಸಾಮಾನ್ಯರು, ರೈತರ ಈ ಯಾವ ಸಂಕಷ್ಟಗಳ ನಿವಾರಣೆಗೂ ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಚುನಾವಣೆ ವೇಳೆ ಮಾತ್ರ ಈ ಸಮಸ್ಯೆಗಳು ಪ್ರಚಾರದ ಸರಕಾಗುತ್ತಿವೆ.
ಕಳೆದ ಬಾರಿ ಕಾಂಗ್ರೆಸ್‌ನ ಎಸ್.ಪಿ. ಮುದ್ದಹನುಮೇಗೌಡರಿಗೆ ಬಿಜೆಪಿ ಯಿಂದಲೇ ಸ್ಪರ್ಧಿಸಿದ್ದ ಮಾಜಿ ಸಂಸದ ಜಿ.ಎಸ್.ಬಸವರಾಜು ಮತ್ತು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ರಾಜ್ಯ ಜೆಡಿಎಸ್ ಅಧ್ಯಕ್ಷ ಪಿ.ಕೃಷ್ಣಪ್ಪ ಪ್ರಬಲ ಸ್ಪರ್ಧೆ ನೀಡಿದ್ದರು. ಆದರೆ ಜೆಡಿಎಸ್‌ಗೆ ಜಿಲ್ಲೆಯಲ್ಲಿ ತನ್ನದೇ ಆದ ಪ್ರಭಾವವಿದ್ದರೂ ನಿರೀಕ್ಷಿಸಿದಷ್ಟು ಮತಗಳು ಬಂದಿರಲಿಲ್ಲ. ಹೀಗಾಗಿ ಮೂರನೇ ಸ್ಥಾನಕ್ಕೆ ಜೆಡಿಎಸ್ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಆದರೆ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಿಲ್ಲ. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವಿದ್ದು, ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಎರಡೂ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಿವೆ.ಇವೆಲ್ಲದರ ಮಧ್ಯೆಯೂ ಮೈತ್ರಿ ಸರಕಾರದ ಸಾಧನೆ, ಜೆಡಿಎಸ್-ಕಾಂಗ್ರೆಸ್ ಪಕ್ಷಗಳಿಗಿರುವ ಸಂಘಟನ ಬಲ, ಕೇಂದ್ರದಲ್ಲಿನ ಮೋದಿ ಸರಕಾರದ ವೈಫಲ್ಯಗಳು ಜೆಡಿಎಸ್ ಪಕ್ಷದ ಪ್ಲಸ್ ಪಾಯಿಂಟ್. ಬಿಜೆಪಿ ಚುನಾವಣ ಅಸ್ತ್ರ
ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಲ್ಲಿ ಜಯ ಗಳಿಸುತ್ತೇವೆ ಎನ್ನುವ ಉತ್ಸಾಹದಲ್ಲಿ ಬಿಜೆಪಿ ನಾಯಕರಿದ್ದಾರೆ. ಲೋಕಸಭಾ ಉಪಸಭಾಪತಿಯಾಗಿದ್ದ ಎಸ್.ಮಲ್ಲಿಕಾರ್ಜುನಯ್ಯ ಅವರು ಬಿಜೆಪಿಯಿಂದ ಸ್ಪರ್ಧಿಸಿ, 1991, 1998, 2004ರಲ್ಲಿ ಗೆಲುವು ಸಾಧಿಸಿದ್ದರು. 1984ರಲ್ಲಿ ಕಾಂಗ್ರೆಸ್‌ನಿಂದ ಸಂಸದರಾಗಿದ್ದ ಬಸವರಾಜು, 1989, 1999ರವರೆಗೆ ಕಾಂಗ್ರೆಸ್‌ನಲ್ಲಿದ್ದರು. 2009ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಸಂಸದರಾಗಿದ್ದರು. ಆದರೆ 2014ರಲ್ಲಿ ಮೋದಿ ಅಲೆ ನಡುವೆಯೂ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ನಿಕಟವರ್ತಿಯಾಗಿದ್ದು, ಈ ಬಾರಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಿ.ಎಸ್.ಬಸವರಾಜು ನೊಣಬ ಲಿಂಗಾಯತರು ಎಂಬುದು ವಿಶೇಷ.
Related Articles
Advertisement
ಕ್ಷೇತ್ರವ್ಯಾಪ್ತಿಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೆಕೆರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ ಮತ್ತು ಮಧುಗಿರಿ ವಿಧಾನಸಭಾ ಕ್ಷೇತ್ರಗಳು ತುಮಕೂರು ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತವೆ. ಹಾಲಿ ಸಂಸದ ಕಾಂಗ್ರೆಸ್‌ನ ಎಸ್.ಪಿ. ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿರುವುದು ಸಹಜವಾಗಿ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಸ್ತುತ ಹಾಲಿ ಸಂಸದರಿದ್ದರೂ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದಕ್ಕೆ ಸ್ವತಃ ಗೃಹ ಸಚಿವ ಪರಮೇಶ್ವರ್ ಗರಂ ಆಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಯಾರು ಎಂಬುದು ಇನ್ನೂ ನಿಗದಿಯಾಗಿಲ್ಲ. ಸ್ವತಃ ದೇವೇಗೌಡರ ಸ್ಪರ್ಧೆಗೆ ಒತ್ತಡ ಹೆಚ್ಚುತ್ತಿದೆ.