Advertisement

Tumkur; ಕಲ್ಪತರು ನಾಡಿನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಿಜೆಪಿ, ಜೆಡಿಎಸ್‌ ಸೆಡ್ಡು

10:14 PM Mar 24, 2024 | Team Udayavani |

ತುಮಕೂರು: ಕಲ್ಪತರು ನಾಡು, ಶೈಕ್ಷಣಿಕ-ಧಾರ್ಮಿಕ ಜಿಲ್ಲೆ ಎಂದೇ ಹೆಸರು ಪಡೆದು, ರಾಜಧಾನಿ ಬೆಂಗಳೂರಿಗೆ ಉಪನಗರವಾಗಿ ಬೆಳವಣಿಗೆಯಾಗುತ್ತಾ ರಾಜ್ಯದಲ್ಲಿ 2ನೇ ಅತೀ ದೊಡ್ಡ ಜಿಲ್ಲೆ ಎಂದು ಹೆಸರು ಪಡೆದಿರುವ ತುಮಕೂರು ಲೋಕಸಭಾ ಕ್ಷೇತ್ರ ರಾಜಕೀಯವಾಗಿ ತನ್ನದೇ ಆದ ಇತಿಹಾಸ ಹೊಂದಿದೆ.

Advertisement

ಒಂದು ಕಾಲದಲ್ಲಿ ಕಾಂಗ್ರೆಸ್‌ ಪಕ್ಷದ ಭದ್ರ ಕೋಟೆಯಾಗಿದ್ದ, ತುಮಕೂರು ಕ್ಷೇತ್ರ 1991ರಲ್ಲಿ ಎಸ್‌. ಮಲ್ಲಿಕಾರ್ಜುನಯ್ಯ ಬಿಜೆಪಿಯಿಂದ ಗೆಲ್ಲುವ ಮೂಲಕ ಇಲ್ಲಿ ಬಿಜೆಪಿಗೆ ಬುನಾದಿ ಹಾಕಿದರು. ಅಲ್ಲಿಂದ ಈ ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳಲಾರಂಭಿಸಿತ್ತು. ಅನಂತರ ಆಗಾಗ್ಗೆ ಕಾಂಗ್ರೆಸ್‌ ಗೆಲುವು ಸಾಧಿಸಿದರಾದರೂ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಬೇರು ಬಿಟ್ಟಿದೆ. ಕ್ಷೇತ್ರದಲ್ಲಿ ಬಿಜೆಪಿಯ ಒಬ್ಬರು ಶಾಸಕರು ಇದ್ದಾಗಲೂ ಇಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಲಿಂಗಾಯತರು, ಒಕ್ಕಲಿಗರೇ ಗೆಲ್ಲುತ್ತಿದ್ದ ಈ ಕ್ಷೇತ್ರದಲ್ಲಿ 1996ರಲ್ಲಿ ಜೆಡಿಎಸ್‌ನಿಂದ ಹಿಂದುಳಿದ ವರ್ಗದ ಸಿ.ಎನ್‌. ಭಾಸ್ಕರಪ್ಪ ಗೆಲುವು ಸಾಧಿಸಿದ್ದರು. ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಎಸ್‌. ಮಲ್ಲಿಕಾರ್ಜುನಯ್ಯ ಅವರು ಲೋಕಸಭೆಯ ಉಪಸಭಾಪತಿಗಳಾಗಿ ಕಾರ್ಯನಿರ್ವಹಿಸಿದ್ದರು.

ದೇವೇಗೌಡರೇ ಸೋತಿದ್ದ ಕ್ಷೇತ್ರವಿದು
ಐದು ಸಲ ಸಂಸದರಾಗಿದ್ದ ಜಿ.ಎಸ್‌. ಬಸವರಾಜು, ದಿಲ್ಲಿಯಲ್ಲಿ ಪ್ರಭಾವಿ ಎನ್ನಿಸಿದ್ದ ಕೆ. ಲಕ್ಕಪ್ಪ ಸೇರಿ ಘಟಾನುಘಟಿ ಮುಖಂಡರನ್ನು ನೀಡಿದ ಹೆಗ್ಗಳಿಕೆ ಜಿಲ್ಲೆಯದ್ದು. ಎಚ್‌.ಡಿ. ದೇವೇಗೌಡರನ್ನೇ ಸೋಲಿಸಿದ್ದ ಹಾಲಿ ಸಂಸದ ಜಿ.ಎಸ್‌. ಬಸವರಾಜು ವಯಸ್ಸಿನ ಕಾರಣದಿಂದ ರಾಜಕೀಯ ನಿವೃತ್ತಿ ಘೋಷಿಸಿದ್ದು ಅವರ ಜಾಗಕ್ಕೆ ಲಿಂಗಾಯತ ಸಮುದಾಯದ ಮಾಜಿ ಸಚಿವ ವಿ. ಸೋಮಣ್ಣರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ರಾಜಕೀಯ ಪ್ರಾಬಲ್ಯ
ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ 8 ತಾಲೂಕುಗಳು ಬರುತ್ತದೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಪ್ರಾಬಲ್ಯ ಹೊಂದಿದ್ದವು. 4 ಕ್ಷೇತ್ರದಲ್ಲಿ ಬಿಜೆಪಿ, 3 ಕ್ಷೇತ್ರದಲ್ಲಿ ಜೆಡಿಎಸ್‌, 1 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಗೆಲುವು ಸಾಧಿಸಿದ್ದವು. ಆದರೆ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ 4, ಬಿಜೆಪಿ 2, ಜೆಡಿಎಸ್‌ 2 ಕ್ಷೇತ್ರದಲ್ಲಿ ಶಾಸಕರು ಇದ್ದಾರೆ. ಈಗ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರು ಹೆಚ್ಚಿದ್ದಾರೆ.
ಬದಲಾಗಿದೆ ರಾಜಕೀಯ ಟ್ರೆಂಡ್‌
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಟ್ರೆಂಡ್‌ ಬದಲಾಗಿದೆ. 1952ರಿಂದ 18 ಸಾರ್ವತ್ರಿಕ ಚುನಾವಣೆ ನಡೆದಿವೆ. ಒಮ್ಮೆ 1962ರಲ್ಲಿ ಉಪಚುನಾವಣೆ ನಡೆದಿದೆ. 11 ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿ ತುಮಕೂರು ಕ್ಷೇತ್ರ ಕಾಂಗ್ರೆಸ್‌ ಭದ್ರ ಕೋಟೆ ಆಗಿತ್ತು. ಆದರೆ 1991ರಿಂದ ಬಿಜೆಪಿ ಭದ್ರ ಕೋಟೆ ಆಗಿದೆ. ಅಲ್ಲಿಂದ 5 ಬಾರಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. 3 ಬಾರಿ ಎಸ್‌. ಮಲ್ಲಿಕಾರ್ಜುನಯ್ಯ, ಎರಡು ಬಾರಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ಜಿ.ಎಸ್‌. ಬಸವರಾಜು ಗೆಲುವು ಸಾಧಿಸಿದ್ದಾರೆ. ಒಂದು ಬಾರಿ ಜೆಡಿಎಸ್‌ ಗೆಲುವು ಸಾಧಿಸಿದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಿದೆ.

ಲಿಂಗಾಯತರು , ಒಕ್ಕಲಿಗರೇ ಅಧಿಕ
ತುಮಕೂರು ಕ್ಷೇತ್ರದಲ್ಲಿ ಬರುವ 8 ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರೇ ಪ್ರಬಲರು. ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ತುಮಕೂರು ಲಿಂಗಾಯತ ಸಮುದಾಯ ಪ್ರಾಬಲ್ಯ. ತುರುವೇಕೆರೆ, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿಯಲ್ಲಿ ಒಕ್ಕಲಿಗರೇ ಪ್ರಾಬಲ್ಯ ಹೊಂದಿದ್ದಾರೆ. ಒಟ್ಟಾರೆ ಅಹಿಂದ ಮತದಾರರು ಇಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ.

Advertisement

ಮತದಾರರ ಸಂಖ್ಯೆ
ಮತದಾರರು 2024 2019
ಪುರುಷರು 8,11,120 8,03,006
ಮಹಿಳೆಯರು 8,32,206 8,04,874
ಇತರ 91 120
ಒಟ್ಟು 16,43,417 16,08,000

ಹಾಲಿ ಸಂಸದ:
ಜಿ.ಎಸ್‌. ಬಸವರಾಜು – ಬಿಜೆಪಿ
ಪಡೆದ ಮತಗಳು: 5,96,127
ಗೆಲುವಿನ ಅಂತರ: 13,339

ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next