ತುಮಕೂರು: ಸ್ಮಾರ್ಟ್‌ಸಿಟಿ ಯೋಜನೆಯಡಿ ಪ್ರಾರಂಭವಾಗಿರುವ ಕಾಮಗಾರಿಗಳು ತ್ವರಿತವಾಗಿ ಅನುಷ್ಠಾನಗೊಂಡು ನಂಬರ್ ಒನ್ ಸ್ಮಾರ್ಟ್ ನಗರ ವಾಗುವ ಕಾಲ ದೂರವಿಲ್ಲ ಎಂದು ಸ್ಮಾರ್ಟ್‌ಸಿಟಿ ಲಿಮಿಟೆಡ್ ಅಧ್ಯಕ್ಷೆ ಡಾ. ಶಾಲಿನಿ ರಜನೀಶ್ ಹೇಳಿದರು. ನಗರದ ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಗುರುವಾರ ನೂತನ ಸಭಾಂಗಣ ಉದ್ಘಾಟಿಸಿ ಮಾತನಾಡಿ, ಸ್ಮಾರ್ಟ್‌ಸಿಟಿ ಕಚೇ ಸ್ಮಾರ್ಟ್ ಲುಕ್ ಪಡೆದಿದೆ. ನಗರದ ಸ್ವಚ್ಛತೆಗೆ ಜನ ಸಾಮಾನ್ಯರೂ ಇಲಾಖೆಗಳ ಜೊತೆಗೆ ಸಹಕರಿಸಬೇಕು ಎಂದರು.
ನಗರದ ಗುಂಡ್ಲಮ್ಮಕೆರೆ ಹಾಗೂ ಮರಳೂರು ಕೆರೆಯಲ್ಲಿ ಒಳಚರಂಡಿ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಅನುದಾನ ಕಲ್ಪಿಸಲು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಲಮಂಡಳಿ ಕಾರ್ಯದರ್ಶಿ ಜೊತೆಗೆ ಚರ್ಚಿಸಿದ್ದೇನೆ. ಸ್ಮಾಟ್ಸಿಟಿ ಯೋಜನೆ, ಜಿಲ್ಲೆಯಲ್ಲಿರುವ ನಾಲೆಗಳ ದುರಸ್ತಿ ಹಾಗೂ ಮತ್ತಿತರ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು.
ಹೊಸ ತಂತ್ರಜ್ಞಾನ, ಆವಿಷ್ಕಾರ: 1000 ಕೋಟಿ ರೂ. ಹಣದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ಟೆಂಡರ್ ಕರೆದು ನಗರದಲ್ಲಿ ಬಹಳಷ್ಟು ಕಾಮಗಾರಿ ಕೈಗೆತ್ತಿಕೊಳ್ಳ ಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮತ್ತಷ್ಟು ಹೊಸ ತಂತ್ರಜ್ಞಾನ, ಆವಿಷ್ಕಾರ ಅಳವಡಿಸಿ ಕೊಳ್ಳುವ ಆಶಯದಿಂದ ದೇಶ-ವಿದೇಶ ಹಾಗೂ ವಿವಿಧ ಮೂಲಗಳಿಂದ ಬಂಡವಾಳ ತರಲು ಹಾಗೂ ಪಿಪಿಪಿ ಮಾದರಿ ತಯಾರಿಸಲು ಉದ್ದೇಶಿ ಸಲಾಗಿದೆ. ನಗರ ಅಭಿವೃದ್ಧಿಪಡಿಸಲು ಜ್ಞಾನ ಮತ್ತು ಅನುಭವ ಹಂಚಿಕೊಳ್ಳುವ ನಿಟ್ಟಿನಲ್ಲಿ ಸಹೋದರಿ ನಗರ ಒಪ್ಪಂದಕ್ಕೆ ಮಂಡಳಿ ಸಭೆಯಲ್ಲಿ ಡೆನ್ಮಾರ್ಕ್ ಸರ್ಕಾರದ ಪ್ರತಿನಿಧಿ ಯೊಂದಿಗೆ ವಿಷಯ ಪ್ರಸ್ತಾಪ ಮಾಡಲಾಗಿದೆ ಎಂದರು.
ಹಸಿರೀಕರಣ ಕಾಮಗಾರಿ: ಸ್ಮಾರ್ಟ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಅಗೆದಿರುವ ರಸ್ತೆ ಕಾಮಗಾರಿ ಮುಗಿಸಿದ ನಂತರವೇ ಹೊಸ ಕಾಮಗಾರಿ ಕೈಗೊಳ್ಳ ಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣ ಗೊಳಿಸದ ಗುತ್ತಿಗೆದಾರರಿಗೆ ದಂಡ ಹಾಕಲಾಗುವುದು. ಅಮಾನಿಕೆರೆಗೆ ನೀರು ಬಂದಿರುವುದರಿಂದ ಅಗಲೀ ಕರಣ ಕಾಮಗಾರಿ ನಿರ್ವಹಿಸಲು ಸಮಸ್ಯೆಯಾಗುತ್ತಿರು ವುದರಿಂದ ಈಗಾಗಲೇ ನಿರ್ಮಿಸಲಾಗಿರುವ 5 ಮೀ. ಪ್ಲಾಟ್ಫಾರ್ಮ್ಗೆ ಹೊಂದಿಕೊಂಡಂತೆ ಹಸಿರೀಕರಣ ಕಾಮಗಾರಿ ಮುಂದುವರೆಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಟೂರಿಸಂ ಫ್ಲೈಯರ್ ಉಪಯೋಗಿಸುವ ವಿಧಾನದ ಪ್ರಾತ್ಯಕ್ಷಿಕೆ ನೀಡಿದ ಸ್ಮಾರ್ಟ್‌ಸಿಟಿ ಎಂಜಿನಿಯರ್ ಸ್ಮಿತಾ ಮಾತನಾಡಿ, ಮೊಬೈಲ್ನಲ್ಲಿ ಗೂಗಲ್ ಪ್ಲೇಸ್ಟೋರ್‌ನಲ್ಲಿ ಕ್ಯೂಆರ್ ಕೋಡ್ ಡೌನ್‌ಲೋನ್ ಮಾಡಿಕೊಂಡು ಅಪ್‌ಲೋಡ್ ಮಾಡಲಾದ ಸ್ಮಾರ್ಟ್ ಸಿಟಿಗೆ ಸಂಬಂಧಿಸಿದ ಕಾಮಗಾರಿ ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಇಂಟಿಗ್ರೇಟೆಡ್ ಬಸ್ ಟರ್ಮಿನಲ್, ಸಿಟಿ ಲೈಬ್ರರಿ ಅಂಡ್ ಬಿಸಿನೆಸ್ ಇನ್‌ಕ್ಯುಬೇಷನ್ ಸೆಂಟರ್, ಅಮಾನಿಕೆರೆ ಅಭಿವೃದ್ಧಿ, ಎಂಪ್ರಸ್ ಕಾಲೇಜಿನ ಮಲ್ಟಿ ಡೈಮೆನ್ಷನಲ್ ಆಡಿಟೋರಿಯಂ, ಇಂಟಿಗ್ರೇಟೆಡ್ ಸಿಟಿ ಮ್ಯಾನೇಜ್‌ಮಂಟ್ ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ಗಳ ಡಿಜಿಟಲೈಸ್ಡ್ ಛಾಯಾಚಿತ್ರ ಪ್ರದರ್ಶಿಸಿರುವುದನ್ನು ಶಾಲಿನಿ ರಜನೀಶ್ ವೀಕ್ಷಿಸಿದರು.