ತುಮಕೂರು: ಸರ್ಕಾರಿ ಕಾಮಗಾರಿಗಳು ಗುಣ ಮಟ್ಟದಲ್ಲಿ ಇರಲ್ಲ ಎಂಬ ಮಾತಿಗೆ ಅಂತರ್ಜಲ ತಡೆಗೋಡೆ ಕಾಮಗಾರಿ ಮುಗಿದು ಇಲಾಖೆಗೆ ಹಸ್ತಾಂತರಿಸುವುದ ರೊಳಗೆ ತಡೆಗೋಡೆ ಕುಸಿದು ಬಿದ್ದಿರುವುದು ತಾಜಾ ಉದಾಹರಣೆಯಾಗಿದೆ.
ಎಂ.ಜಿ ರಸ್ತೆಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಬಾಲಭವನ ನಿರ್ಮಿಸಲಾಗಿತ್ತು. ಕಾರ್ಯಾರಂಭ ಮಾಡಲು ವರ್ಷವೇ ಆಗಿತ್ತು. ನಾಲ್ಕು ವರ್ಷಗಳ ಹಿಂದೆ ಮಕ್ಕಳ ಕಾರ್ಯ- ಚಟುವಟಿಕೆಗಳು ಆರಂಭಿಸಲಾಗಿತ್ತು.
ಬಾಡಿಗೆ ಕಟ್ಟಡದಲ್ಲಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿಯನ್ನು ಬಾಲಭವನದ ನೆಲಮಾಳಿಗೆಗೆ ಸ್ಥಳಾಂತರಿಸಲಾಗಿತ್ತು. ಕಳೆದ 2016ರಲ್ಲಿ ಸುರಿದ ಮಳೆಗೆ ನೆಲಮಳಿಗೆಗೆ ನೀರು ನುಗ್ಗಿ ದಾಖಲೆಗಳು ನಾಶವಾಗಿದ್ದವು.
ಬೆಳಕಿಗೆ ಬಂದ ಕಳಪೆ ಕಾಮಗಾರಿ: ಅಂತರ್ಜ ಲದ ನೀರಾಗಿದ್ದರಿಂದ 2017ರಲ್ಲಿ ತಡೆಗೋಡೆ ನಿರ್ಮಾಣಕ್ಕೆ 24 ಲಕ್ಷ ರೂ. ಮೀಸಲಿಟ್ಟು, ಅಂತರ್ಜಲ ತಡೆಗೋಡೆ ನಿರ್ಮಿಸಲು ಕರ್ನಾಟಕ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗಿತ್ತು.
ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಡೆದಿದ್ದು, ಕಾಮಗಾರಿ ಪೂರ್ಣ ಗೊಂಡು ಸಂಬಂಧಿಸಿದ ಹಣ ಕೂಡ ನೀಡಲಾಗಿತ್ತು. ಆದರೆ ಬಾಲಭವನಕ್ಕೆ ಹಸ್ತಾಂತರ ಮಾಡಲು ಕೆಲವೇ ದಿನಗಳಿರುವಂತೆ ತಡೆಗೋಡೆ ಕುಸಿದು ಬಿದ್ದಿದ್ದು, ಕಳಪೆ ಕಾಮಗಾರಿ ಬೆಳಕಿಗೆ ಬಂದಿದೆ. ತಡೆಗೋಡೆ ಕಾಮಗಾರಿ ಮಾಡಲು ಭವನದ ಪಕ್ಕದಲ್ಲಿಯೇ ದೊಡ್ಡ ಗುಂಡಿ ತೋಡಿ, ಸುತ್ತಲೂ ತಂತಿಬೇಲಿ ಹಾಕಿ, ಒಂದು ಭಾಗಕ್ಕೆ ಸಿಮೆಂಟ್ ಮತ್ತು ಕಡಿಮೆ ದರ್ಜೆಯ ಕಬ್ಬಿಣ ಬಳಸಿ ಗೋಡೆ ನಿರ್ಮಾಣ ಮಾಡಿದ್ದಾರೆ.
24 ಲಕ್ಷ ಖರ್ಚು ಮಾಡಿದ್ದರೂ ಭೂಮಿಯಿಂದ ಸೈಜುಗಲ್ಲಿನಲ್ಲಿ ಪಾಯ ನಿರ್ಮಾಣ ಮಾಡಿ ಕೊಂಡಿಲ್ಲ. ಇದರಿಂದ ತಡೆಗೋಡೆ ಜೊತೆಗೆ ಭವನದವರೆಗೆ ಭೂಮಿಯೂ ಕುಸಿಯುತ್ತಿದೆ. ಸ್ಥಳಕ್ಕೆ ಜಿಪಂ ಸಿಇಒ ಶುಭ ಕಲ್ಯಾಣ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ್ ಮತ್ತು ಬಾಲಭವನ ಸಮಿತಿಯ ಹಿರಿಯ ಸದಸ್ಯ ಎನ್.ಬಸವಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮತ್ತೆ ತಡೆಗೋಡೆ ನಿರ್ಮಿಸಿ ಕೊಡುವುದಾಗಿ ಕೆ.ಆರ್‌ಐಡಿಯಲ್ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.