ತುಮಕೂರು: ಲೋಕಸಭೆ ಚುನಾವಣೆ ಬಳಿಕ ಜಿಲ್ಲೆಯ ರಾಜಕಾರಣದಲ್ಲಿ ಮಾತಿನ ಸಂಗ್ರಾಮ ನಡೆದಿದೆ. ದಿನಕ್ಕೊಬ್ಬ ರೆಬೆಲ್ ನಾಯಕ ಹುಟ್ಟಿಕೊಳ್ಳುತ್ತಿದ್ದು, ನಾಯಕರು ಕೆಸರೆರೆಚಾಟ ಆರಂಭಿಸಿದ್ದಾರೆ. ಇತ್ತ ಉಪಮುಖ್ಯಮಂತ್ರಿ ಡಾ.ಜಿ.ಪರಮೆಶ್ವರ್‌ಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ತೊಡೆ ತಟ್ಟಿ ನಿಂತಿದ್ದಾರೆ.
Advertisement
ಕಲ್ಪತರು ನಾಡಿನಲ್ಲಿ ರಾಜಕೀಯ ಕೆಸರಾಟ ಸಖತ್ ಸದ್ದು ಮಾಡುತ್ತಿದೆ. ಇಷ್ಟು ದಿನಗಳ ಕಾಲ ಕಾಂಗ್ರೆಸ್‌ನಲ್ಲಿ ಇದ್ದುಕೊಂಡೇ ಮೈತ್ರಿ ಸರ್ಕಾರವನ್ನು ವಿರೋಧ ಮಾಡುತ್ತಿರುವ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಈಗ ಡಾ.ಜಿ.ಪರಮೇಶ್ವರ್ ವಿರುದ್ಧ ಹರಿಹಾಯುತ್ತಿರುವುದು ಮತ್ತು ದೇವೇಗೌಡರ ಸೋಲಿಗೆ ಝೀರೋ ಟ್ರಾಫಿಕ್ ಕಾರಣ ಎಂದು ಹೇಳಿಕೆ ನೀಡಿದ್ದು ಈಗ ಕಾಂಗ್ರೆಸ್‌ನ ಪರಮೇಶ್ವರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Related Articles
Advertisement
ಹಣ ಪಡೆದ ಆರೋಪ: ಚುನಾವಣೆ ನಂತರ ನಾಮಪತ್ರ ವಾಪಸ್ ಪಡೆಯಲು ಮುದ್ದಹನುಮೇಗೌಡ ಮತ್ತು ರಾಜಣ್ಣ 3.5 ಕೋಟಿ ಹಣ ಪಡೆದಿದ್ದರು ಎನ್ನುವ ಆರೋಪವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬೆಂಬಲಿಗನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಇದು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಸ್ವತಹ ಮುದ್ದಹನುಮೇಗೌಡರು ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡಿ ನಾನು ಹಣ ಪಡೆದಿಲ್ಲ ಎಂದು ಹೇಳಿಕೆ ನೀಡಿದ್ದರು. ಟೌನ್‌ಹಾಲ್ ವೃತ್ತದಲ್ಲಿ ಯಾರೋ ಕೆಲವರು ಪರಮೇಶ್ವರ್ ಹಠಾವೋ ಕಾಂಗ್ರೆಸ್ ಬಛಾವೋ ಎಂದು ಭಿತ್ತಿಪತ್ರ ಹಾಕಲಾಗಿತ್ತು.
ನಾಲಿಗೆ ಸೀಳುತ್ತೇನೆ ಎಂದಿದ್ದ ರಾಜಣ್ಣ: ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡರ ಸೋಲಿಗೆ ಪರಮೇಶ್ವರ್ ಝೀರೋ ಟ್ರಾಫಿಕ್ ಕಾರಣ ಎಂದು ರಾಜಣ್ಣ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಚೇರಿಯಲ್ಲಿ ಕೆ.ಎನ್. ರಾಜಣ್ಣ ವಿರುದ್ಧ ಧಿಕ್ಕಾರ ಕೂಗಿದರು ಮತ್ತು ಟೌನ್ ಹಾಲ್ ನಲ್ಲಿ ರಾಜಣ್ಣ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಕಚೇರಿಗೆ ಬಂದು, ಜಿಲ್ಲಾಧ್ಯಕ್ಷ ರಾಮಕೃಷ್ಣ ವಿರುದ್ಧ ಹರಿಹಾಯ್ದಿದ್ದರು. ಬಳಿಕ ನನ್ನ ವಿರುದ್ಧ ಧಿಕ್ಕಾರ ಕೂಗಿದರೆ ನಾಲಿಗೆ ಸೀಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು.
ಇಬ್ಬರು ನಾಯಕರ ಪರವಾದ ಕಾರ್ಯಕರ್ತರು ತೊಡೆತಟ್ಟುವ ಮೂಲಕ ಜಿಲ್ಲಾ ಕಾಂಗ್ರೆಸ್ ಮನೆಯೊಂದು ಎರಡು ಬಾಗಿಲಿನಂತೆ ಆಗಿದೆ. ಜೂ.10 ರಂದು ಎರಡು ಗುಂಪುಗಳ ಪ್ರತಿಭಟನೆ ತಮ್ಮ ತಮ್ಮ ನಾಯಕನ ಪರವಾಗಿ ಹೋರಾಟ ಮಾಡಲು ಎಲ್ಲಾ ರೀತಿಯ ತಯಾರಿ ನಡೆದಿದೆ. ಇದು ಮುಂದೆ ಯಾವ ಹಂತಕ್ಕೆ ಹೋಗುತ್ತದೆಯೋ ಎನ್ನುವ ಆತಂಕ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡುತ್ತಿದೆ. ಮಳೆ ಬಿಟ್ಟರೂ ಮರದ ಹನಿ ನಿಲ್ಲದು ಎನ್ನುವಂತೆ ಚುನಾವಣೆ ಮುಗಿದು ಎಲ್ಲವೂ ಶಾಂತವಾದರೂ ತುಮಕೂರಿನಲ್ಲಿ ಮಾತ್ರ ಮೈತ್ರಿ ಅಭ್ಯರ್ಥಿಯ ಸೋಲಿನ ಹೊಣೆ ಯಾರು ಹೊರಲು ತಯಾರಾಗದೆ ಒಬ್ಬರ ಮೇಲೆ ಒಬ್ಬರು ಕೆಸೆರಾಟ ನಡೆಸುತ್ತಿದ್ದಾರೆ ಇದರಿಂದ ಪಕ್ಷಕ್ಕೆ ಹಾನಿ ಉಂಟಾಗುವುದರಲ್ಲಿ ಅನುಮಾನವಿಲ್ಲ.