Advertisement

ತುಳುನಾಡ ವೈಭವದ ಅನಾವರಣ ಅಭಿನಂದನೀಯ: ಕುಶಲ್ ಸಿ. ಭಂಡಾರಿ

01:33 PM Aug 23, 2019 | Team Udayavani |

ಥಾಣೆ, ಆ.22: ನಮ್ಮ ಸಂಸ್ಕೃತಿ ನಾಶವಾದರೆ ಒಂದು ಜನಾಂಗವೇ ನಾಶವಾದಂತೆ. ನಮ್ಮ ತುಳುನಾಡು ಭವ್ಯ ಸಂಸ್ಕೃತಿಯ ಬೀಡಾಗಿದೆ. ಇಲ್ಲಿ ಅನೇಕ ಜಾತಿ ಧರ್ಮ, ಪಂಗಡಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿದ ಹಿರಿಮೆ ನಮ್ಮ ಈ ಭವ್ಯ ಸಂಸ್ಕೃತಿಗೆ ಸಲ್ಲುವಂತಿದೆ. ಆದ್ದರಿಂದ ನಾವು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಕುಶಲ್ ಸಿ. ಭಂಡಾರಿ ಅವರು ಹೇಳಿದರು.

Advertisement

ಆ. 11ರಂದು ರವಿವಾರ ಥಾಣೆ ಪಶ್ಚಿಮದ ಘೋಡ್‌ಬಂದರ್‌ ರೋಡ್‌ನ‌ಲ್ಲಿರುವ ಹೊಟೇಲ್ ವಿಹಾಂ ಗ್‌ಇನ್‌ ಸಭಾಂಗಣದಲ್ಲಿ ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಇದರ ಮಹಿಳಾ ವಿಭಾಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತುಳುನಾಡಿನ ಸಂಸ್ಕೃತಿಯನ್ನು ಸಾರುವ ಆಟಿ ತಿಂಗಳ ಮಹತ್ವತೆಯನ್ನು ಬಿತ್ತರಿಸುವ ತುಳುನಾಡ್ದ್ ಪೊರ್ಲು- ಆಟಿದ ನೆಂಪು ಎಂಬ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ವಹಿಸಿ ಮಾತನಾಡಿ, ಇಂದು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿರುವ ಸುಮತಿ ಕೆ. ಶೆಟ್ಟಿ ಮತ್ತು ಅವರ ಸಮಿತಿಯ ಎಲ್ಲಾ ಮಹಿಳಾ ಸದಸ್ಯರು ಸೇರಿ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲದೆ ಆರ್ಥಿಕವಾಗಿ ತೊಂದರೆಯಲ್ಲಿರುವ ಓರ್ವ ಮಹಿಳೆಯನ್ನು ಗುರುತಿಸಿ ಅವರ ಕಷ್ಟಕ್ಕೆ ನೆರವಾಗುವ ಕೆಲಸವನ್ನೂ ಈ ಸಂದರ್ಭದಲ್ಲಿ ಮಾಡಿದ್ದಾರೆ. ನಿಜವಾಗಿಯೂ ಮಹಿಳಾ ವಿಭಾಗದವರು ಹಮ್ಮಿಕೊಂಡ ತುಳುನಾಡಿನ ಸಂಸ್ಕೃತಿ, ವೈಭವವನ್ನು ಆನಾವರಣಗೊಳಿಸಿದ ಕಾರ್ಯವೈಖರಿ ಶ್ಲಾಘನೀಯ. ಸಂಸ್ಥೆಯ ಮಹಿಳಾ ವಿಭಾಗದ ಕಾರ್ಯವೈಖರಿಯನ್ನು ಅಭಿನಂದಿಸಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಮುಲುಂಡ್‌ ಬಂಟ್ಸ್‌ ಇದರ ಉಪಾಧ್ಯಕ್ಷ ಶಾಂತಾರಾಮ್‌ ಬಿ. ಶೆಟ್ಟಿ, ಮುಲುಂಡ್‌ ಬಂಟ್ಸ್‌ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ವಿನುತಾ ಶೇಖರ್‌ ಶೆಟ್ಟಿ, ವಿಲಾಸಿನಿ ಕುಶಲ್ ಭಂಡಾರಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸಮಿತಿ ಕೆ. ಶೆಟ್ಟಿ ಹಾಗೂ ಮಹಿಳಾ ವಿಭಾಗದ ಪದಾಧಿಕಾರಿಗಳಾದ ಕುಶಲಾ ಶೆಟ್ಟಿ, ಶರ್ಮಿಳಾ ಶೆಟ್ಟಿ, ಮೋಹಿನಿ ಶೆಟ್ಟಿ, ತಾರಾ ಶೆಟ್ಟಿ ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಸದಸ್ಯೆ ಜ್ಯೋತಿ ಎನ್‌. ಶೆಟ್ಟಿಯವರು ಪ್ರಾರ್ಥನೆಗೈದರು. ಅತಿಥಿ-ಗಣ್ಯರು, ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳ, ಸ್ಥಾಪಕ ಸದಸ್ಯರು, ಮಹಿಳಾ ವಿಭಾಗದ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ ಸ್ವಾಗತಿಸಿದರು. ಮಹಿಳಾ ವಿಭಾಗದ ಪದಾಧಿಕಾರಿಗಳಾದ ಶರ್ಮಿಳಾ ಶೆಟ್ಟಿ, ತಾರಾ ಶೆಟ್ಟಿ, ಮೋಹಿನಿ ಶೆಟ್ಟಿ ಅವರು ಅತಿಥಿ ಗಣ್ಯರನ್ನು ಪರಿಚಯಿಸಿದರು.

ಅತಿಥಿ ಗಣ್ಯರನ್ನು ಅಧ್ಯಕ್ಷ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮತ್ತು ಪದಾಧಿಕಾರಿಗಳು ಶಾಲು ಹೊದಿಸಿ, ಹೂಗುಚ್ಛ ನೀಡಿ ಗೌರವಿಸಿದರು. ಇದೇ ವೇಳೆ ಮಹಿಳಾ ವಿಭಾಗದ ವತಿಯಿಂದ ಅಧ್ಯಕ್ಷ ಕುಶಲ್ ಸಿ. ಭಂಡಾರಿ ಮತ್ತು ವಿಲಾಸಿನಿ ಕುಶಲ್ ಭಂಡಾರಿ ದಂಪತಿಯನ್ನು ಶಾಲು ಹೊದಿಸಿ, ಪುಷ್ಪಗುಚ್ಛದೊಂದಿಗೆ ಸಮ್ಮಾನಿಸಿ ಅಭಿನಂದಿಸಲಾಯಿತು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಾರಿಜಾ ಶೆಟ್ಟಿ ಅವರಿಗೆ ಮಹಿಳಾ ವಿಭಾಗದ ವತಿಯಿಂದ ಆರ್ಥಿಕ ನೆರವನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ ಮತ್ತು ಪದಾಧಿಕಾರಿಗಳು ನೀಡಿ ಸಹಕರಿಸಿದರು.

Advertisement

ಲತಾ ಶೆಟ್ಟಿ ಮತ್ತು ತನಿಷ್‌ ಅವರಿಂದ ಆಟಿ ಕಳೆಂಜಾದ ಪ್ರಾತ್ಯಕ್ಷಿತೆ ನಡೆಯಿತು. ಸಂಘದ ಸದಸ್ಯರ ಮಕ್ಕಳಿಂದ ಹುಲಿವೇಷ ನೃತ್ಯದ ಪ್ರಾತ್ಯಕ್ಷಿಕೆ , ಕೋಳಿಕಟ್ಟ, ತೆಂಗಿನಕಾಯಿ ಒಡೆಯುವ ಆಟ, ತುಳುನಾಡಿನ ಸೊಗಸನ್ನು ಬಣ್ಣಿಸುವ ಮಹಿಳಾ ವಿಭಾಗದ ಸದಸ್ಯೆಯರಿಂದ ಸಮೂಹಗೀತೆ, ತುಳುನಾಡಿನ ವೈಭವವನ್ನು ಸಾರುವ ಮನೋರಂಜನಾ ಕಾರ್ಯಕ್ರಮಗಳು ಜರಗಿತು. ಕಾರ್ಯಕ್ರಮವನ್ನು ಗೌರವ ಪ್ರಧಾನ ಕಾರ್ಯದರ್ಶಿ ಸುನಿಲ್ ಜೆ. ಶೆಟ್ಟಿಯವರು ನಡೆಸಿಕೊಟ್ಟರು.

ತುಳುನಾಡಿನ ವಿಶೇಷತೆಯಿಂದ ಕೂಡಿದ ಕೆಲವು ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ಆಡ್ವಕೇಟ್ ಪದ್ಮನಾಭ ಶೆಟ್ಟಿ, ಸುಲೋಚನ ಬಿ, ಶೆಟ್ಟಿ, ಸುಪ್ರಿತಾ ಶೆಟ್ಟಿ, ವಿದ್ಯಾ ಶೆಟ್ಟಿ, ಉಮೇಶ್‌ ಶೆಟ್ಟಿ ಮೊದಲಾದವರಿಗೆ ಅತಿಥಿ ಗಣ್ಯರು, ಸಂಘದ ಪದಾಧಿಕಾರಿಗಳು ಬಹುಮಾನವನ್ನು ನೀಡಿ ಅಭಿನಂದಿಸಿದರು. ಸುಲೋಚನಾ ಬಿ. ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ರೇವತಿ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಮೋದಾ ಮಾಡ ಕ್ರಮವಾಗಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಮುಂದಿನ ಕಾರ್ಯಕ್ರಮಗಳ ಮಾಹಿತಿಯನ್ನು ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈಯವರು ತಿಳಿಸಿದರು. ಶರ್ಮಿಳಾ ಶೆಟ್ಟಿ ವಂದಿಸಿದರು. ಸಂಘದ ಸ್ಥಾಪಕ ಸದಸ್ಯ ಕೇಶವ ಎಂ. ಆಳ್ವರವರ ಮುಂದಾಳತ್ವದಲ್ಲಿ ನಿರ್ಮಿತ ತುಳುನಾಡಿನ ವೈಭವವನ್ನು ಬಿತ್ತರಿಸುವ ಸುಂದರ ವೇದಿಕೆ ಮತ್ತು ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ ಕೆಲವು ವಸ್ತುಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗನ್ನು ನೀಡಿತ್ತು. ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಶೆಟ್ಟಿ , ಮಾಜಿ ಅಧ್ಯಕ್ಷರುಗಳಾದ ಪ್ರೊ. ಸೀತಾರಾಮ್‌ ಆರ್‌. ಶೆಟ್ಟಿ, ಸಂಜೀವ ಶೆಟ್ಟಿ, ಜ್ಯೋತಿ ಶೆಟ್ಟಿ ಮತ್ತು ಜೆ. ಕೆ. ಪೈಲ್ಸ್ನ ಸಂಜೀವ ಶೆಟ್ಟಿ ಅವರ ಪತ್ನಿ ಕುಮಾರಿ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next