ವಿಟ್ಲಾ: ಸಮಾಜ ಕಟ್ಟುವ ಸಾಹಿತ್ಯ ನಿರ್ಮಾಣವಾಗಬೇಕು. ಧರ್ಮ ಗ್ರಂಥಗಳನ್ನು ಸುಡಬೇಕು ಎನ್ನುತ್ತ ಸಮಾಜವನ್ನು ವಿಘಟನೆ ಮಾಡುವ ಕೆಲವು ಸಾಹಿತಿಗಳ ನಡೆ ಸರಿಯಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಶ್ರೀ ಒಡಿಯೂರು ರಥೋತ್ಸವ- ತುಳುನಾಡ ಜಾತ್ರೆ 2019ರ ಅಂಗವಾಗಿ ಗುರುವಾರ ಒಡಿಯೂರಿ ನಲ್ಲಿ ತುಳು ಭಾಷೆ-ಸಂಸ್ಕೃತಿ ಜಾಗೃತಿ ಗಾಗಿ “ತುಳು ಬದ್‌ದ ನಿಲೆ-ಬಿಲೆ’ ಹೆಸರಿನ 19ನೇ ತುಳು ಸಾಹಿತ್ಯ ಸಮ್ಮೇ ಳನವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ತುಳುನಾಡಿನಲ್ಲಿ ತುಳುಭಾಷೆಯನ್ನು ಹುಡುಕುವ ಪರಿಸ್ಥಿತಿ ಸೃಷ್ಟಿಯಾಗಬಾರದು. ತುಳು ಭಾಷೆಯಲ್ಲಿ ಎಂ.ಎ. ಪರೀಕ್ಷೆ ಬರೆಯುತ್ತಿರುವುದು, ತುಳುವಿನಲ್ಲೇ ಸಂಶೋಧನೆ ನಡೆಸುತ್ತಿರುವುದು ಶ್ಲಾಘನೀಯ. ತುಳು ಭಾಷೆಯ ಸಂಪತ್ತನ್ನು ಅರ್ಥೈಸಿ, ಉಳಿಸಿ, ಬೆಳೆಸುವ ಪ್ರಯತ್ನ ನಡೆಯಬೇಕು ಎಂದರು. ಸಾಧ್ವಿ ಶ್ರೀ ಮಾತಾನಂದಮಯೀ ಸಾನ್ನಿಧ್ಯ ವಹಿಸಿದ್ದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ, ತುಳು ಭಾಷೆಯಲ್ಲಿ 20 ಮಂದಿ ಸ್ನಾತಕೋತ್ತರ ಪದವಿ ಅಭ್ಯಸಿಸುತ್ತಿದ್ದಾರೆ. 45 ಶಾಲೆಗಳಲ್ಲಿ ತುಳು ಕಲಿಸ ಲಾಗುತ್ತದೆ. 660 ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ಎಸೆಸೆಲ್ಸಿ ಬರೆಯು ತ್ತಿದ್ದಾರೆ. ಮುಂದಿನ ಸಾಲಿನಲ್ಲಿ ತುಳು ಭಾಷೆಯಲ್ಲಿ ಪದವಿ ಪಡೆಯುವುದಕ್ಕೆ ತುಳು ಅಕಾಡೆಮಿ ಅವಕಾಶ ನೀಡಲಿದೆ. ತುಳು ಭಾಷೆಯ ಅಭಿವೃದ್ಧಿಯ ಚಿಂತನೆ, ಅಭಿಮಾನ ಇಟ್ಟುಕೊಂಡು ನಿರಂತರ ಚಟುವಟಿಕೆಗಳನ್ನು ಧರ್ಮಸ್ಥಳ ಮತ್ತು ಒಡಿಯೂರಿನಲ್ಲಿ ನಡೆಸಲಾಗುತ್ತದೆ. ಇದು ಅಭಿನಂದನೀಯ ಎಂದರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆ ಸಂಚಾಲಕ ಸೀತಾರಾಮ ರೈ ಸವಣೂರು ಮಾತನಾಡಿದರು. ಉಗ್ಗಪ್ಪ ಪೂಜಾರಿ ಬರೆದ ಅಜ್ಜಿ ನಡ್ತಿನ ಗೋಳಿಮರ ಎಂಬ ಕೃತಿ, ತುಳು ಪತ್ರಿಕೆ ಪೂವರಿಯ 50ನೇ ಸಂಚಿಕೆ ಬಿಡುಗಡೆಗೊಂಡಿತು.
ಸಂಚಾಲಕ ಡಾ| ವಸಂತ ಕುಮಾರ್ ಪೆರ್ಲ ಪ್ರಸ್ತಾವನೆಗೈದರು. ತುಳುಕೂಟದ ಸ್ಥಾಪಕಾಧ್ಯಕ್ಷ ಮಲಾರು ಜಯರಾಮ ರೈ ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಂಪನ್ಮೂಲ ವ್ಯಕ್ತಿ ವಿಶ್ವನಾಥ ಶೆಟ್ಟಿ ವಂದಿಸಿದರು. ಪ್ರದೀಪ್ ಆಳ್ವ ಕುಡ್ಲ ನಿರೂಪಿಸಿದರು.
ದೈವಾರಾಧನೆ ಚಿತ್ರೀಕರಣ ಸರಿಯಲ್ಲ
ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ಸಂಶೋಧಕಿ ಬೆಂಗಳೂರಿನ ಡಾ| ಇಂದಿರಾ ಹೆಗ್ಡೆ ಅವರು ಮಾತನಾಡಿ, ಮಹಿಳೆಯರು ಓದಬೇಕು, ಬರೆಯಬೇಕು. ದೈವಾರಾಧನೆಯನ್ನು ಚಿತ್ರೀಕರಿಸಿ ಪಸರಿಸುವುದು ಸರಿಯಲ್ಲ. ಇದು ತುಳುನಾಡಿನ ಮಾನಹಾನಿಗೆ ಕಾರಣವಾಗುತ್ತದೆ. ವಿಶೇಷ ಆರ್ಥಿಕ ವಲಯ ತುಳುನಾಡಿನ ವಿನಾಶಕ್ಕೆ ಕಾರಣವಾಗಿದೆ ಎಂದು ಹೇಳಿದರು.