Advertisement
ಮೋಕೆದ ಸಿಂಗಾರಿ ಉಂತುದೇ ವಯ್ನಾರಿ ಎಂದು ಪ್ರೀತಿಯಿಂದ ಬರೆಯುವ ಇವರು, ಪಗೆತ ಪುಗೆನಾ, ವಿಧಿತ ಧಗೆನಾ… ಎಂದು ದುಃಖದ ಸಾಲನ್ನೂ ಬರೆಯುತ್ತಾರೆ. ಪಕ್ಕಿಲು ಮೂಜಿ ಒಂಜೇ ಗೂಡುಡು ಬದ್ಕೊಂದಲ್ಲಗೆ… ಎಂದು ಕೌಟುಂಬಿಕ ಜೀವನವನ್ನು ವರ್ಣಿಸುತ್ತಾ, ಡಿಂಗಿರಿ ಮಾಮ ಡಿಂಗಿರಿ ಮಾಮ ಪೋಡಿದ್ ಪಾರಡ… ಎಂದು ತಮಾಷೆಯಾಗಿಯೇ ಬರೆಯುತ್ತಾರೆ. ಹೀಗೆ ಅರ್ಥಪೂರ್ಣ ಚಿತ್ರ ಗೀತೆಗಳು, ನಾಟಕಗಳಿಂದ ತುಳು ಸಾಹಿತ್ಯ ಕ್ಷೇತ್ರದ ಮೇರು ನಕ್ಷತ್ರವಾಗಿ ಮೆರೆದ ಸೀತಾರಾಮ ಕುಲಾಲ್ ಈಗ ನೆನಪು ಮಾತ್ರ.
Related Articles
Advertisement
1972ರಲ್ಲಿ ತೆರೆಕಂಡ ಆರೂರು ಪಟ್ಟಾಬಿ ನಿರ್ದೇಶನದ ಪಗೆತ ಪುಗೆ ಚಿತ್ರಕ್ಕಾಗಿ ಇವರು ಬರೆದ ಮೋಕೆದ ಸಿಂಗಾರಿ, ಪಕ್ಕಿಲು ಮೂಜಿ, ಪಗೆತ ಪುಗೆನಾ ಹಾಡುಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತದ್ದು. ಎಪ್ಪತ್ತರ ದಶಕದ ತುಳು ಚಿತ್ರ ರಂಗವನ್ನು ಮರೆತಿರುವ ಯುವ ಜನಾಂಗ ಇಂದು ಕೂಡಾ ಸೀತರಾಮ ಕುಲಾಲರನ್ನು ನೆನೆಯುವುದು ಮೋಕೆದ ಸಿಂಗಾರಿ ಉಂತುದೆ ವಯ್ನಾರಿ ಹಾಡಿನಿಂದಲೇ. ಆ ಕಾಲದಲ್ಲಿ ಯುವ ಗಾಯಕರಾಗಿ ಪ್ರಸಿದ್ದರಾಗಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯ ಅವರು ಮೊದಲ ಬಾರಿಗೆ ತುಳು ಚಿತ್ರರಂಗದಲ್ಲಿ ಹಾಡಿದ್ದು ಇದೇ ಮೋಕೆದ ಸಿಂಗಾರಿ ಹಾಡನ್ನೇ.
ಬಯ್ಯ ಮಲ್ಲಿಗೆ ಚಿತ್ರಕ್ಕೆ ಬರೆದ ಬ್ರಹ್ಮನ ಬರುವು ಮಾಜಂದೆ ಪೋಂಡಾ, ಡಿಂಗಿರಿ ಮಾಮ, ಅಪ್ಪೆ ಮನಸ್ ಬಂಗಾರ ಹಾಡುಗಳು, ಬೆಳ್ಳಿದೋಟ ಚಿತ್ರದ ಪರಶುರಾಮನ ಕುಡರಿಗ್ ಹಾಡು ಹೀಗೆ ಕುಲಾಲರು ಬರೆದ ಒಂದೊಂದು ಹಾಡುಗಳೂ ಸಹ ತುಳುವರು ಸದಾ ನೆನಪಿಸಿಕೊಳ್ಳುವಂತಹದ್ದು. ಉಡಲ್ದ ತುಡರ್ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದ ಕುಲಾಲರು, ಅದಕ್ಕಾಗಿ ನವಭಾರತ ತುಳು ಕೂಟ ಪ್ರಶಸ್ತಿ ಪಡೆದಿದ್ದರು.
ಕನ್ನಡ, ತುಳು ಸಾಹಿತ್ಯ, ರಂಗಭೂಮಿಗೆ ವಿಶಿಷ್ಟ ಸೇವೆ ಸಲ್ಲಿಸಿದ ಅಪ್ರತಿಮ ಸಾಹಿತಿ ಇಂದು ಇಹದಿಂದ ಮರೆಯಾದರೂ, ಅವರು ರಚಿಸಿದ ಎವರ್ ಗ್ರೀನ್ ಹಾಡುಗಳು ಮತ್ತು ರಂಗ ಕೃತಿಗಳು ಮುಂದಿನ ತಲೆ ತಲೆಮಾರಿಗೆ ಅತ್ಯಮೂಲ್ಯ ಕಲಾ ಆಸ್ತಿ.
ಕೀರ್ತನ್ ಶೆಟ್ಟಿ ಬೋಳ