Advertisement

Tulu theater: ತಂತ್ರಜ್ಞಾನ ಬಳಕೆಯಿಂದ ಹೊಸತನಕ್ಕೆ ತೆರೆದುಕೊಂಡ ತುಳು ನಾಟಕ ರಂಗ

11:38 AM Oct 24, 2024 | ಕೀರ್ತನ್ ಶೆಟ್ಟಿ ಬೋಳ |

ಸುಮಾರು 90 ವರ್ಷಗಳ ಇತಿಹಾಸವಿರುವ ತುಳು ರಂಗ ಭೂಮಿ ಹಲವು ಮಜಲುಗಳನ್ನು ದಾಟಿ ಬಂದಿದೆ. ಆಯಾ ಕಾಲಮಾನಗಳಲ್ಲಿ ಹೊಸತನ್ನು ಅಳವಡಿಸಿಕೊಂಡು, ಹೊಸ ಎಗ್ಗೆಗಳನ್ನು ಚಾಚಿ ತನ್ನದೇ ಆದ ಛಾಪು ಮೂಡಿಸಿಕೊಂಡು ಬಂದಿದೆ.

Advertisement

ಕಳೆದೊಂದು ದಶಕದಿಂದ ತುಳು ಚಿತ್ರರಂಗ ಏರುಮುಖವಾಗುತ್ತಿದ್ದಂತೆ ರಂಗಭೂಮಿಯ ಚಟುವಟಿಕೆಯಲ್ಲಿ ಸಣ್ಣ ಮಟ್ಟದ ಇಳಿಕೆ ಕಂಡುಬಂದಿತ್ತು. ನಾಟಕ ರಂಗದ ದಿಗ್ಗಜರು ಸಿನಿಮಾ ಕ್ಷೇತ್ರದಲ್ಲಿ ಬ್ಯೂಸಿಯಾಗುತ್ತಿದ್ದಂತೆ ಸಹಜವಾಗಿಯೇ ಅದರ ಪರಿಣಾಮ ನಾಟಕರಂಗದ ಮೇಲಾಗಿತ್ತು. ಆದರೆ ಇದೀಗ ಮತ್ತೆ ಮೈಕೊಡವಿ ನಿಂತಿರುವ ರಂಗಭೂಮಿ ಹೊಸತನದ ನಾಟಕಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ.

ತುಳು ನಾಟಕ ರಂಗದ ಹೊಸ ಶಕೆಗೆ ಕಾರಣವಾಗಿದ್ದು ತಂತ್ರಜ್ಞಾನದ ಬಳಕೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿ ರಂಗಸಜ್ಜಿಕೆಯಲ್ಲಿ ಹೊಸತನವನ್ನು ತಂದ ʼಶಿವದೂತೆ ಗುಳಿಗೆʼ ನಾಟಕದೊಂದಿಗೆ ಮತ್ತೆ ನಾಟಕಕ್ಕೆ ಜನ ಸೇರುವಂತೆ ಮಾಡಿದವರು ವಿಜಯ್‌ ಕುಮಾರ್‌ ಕೊಡಿಯಾಲ್‌ ಬೈಲ್‌ ಅವರು.

ಹಿಂದಿನ ನಾಟಕಗಳಲ್ಲಿ ಗಾರ್ಡನ್‌, ರಸ್ತೆ, ಮನೆ ಮುಂತಾದ ಪರದೆಯ ಬಳಕೆ ಸಾಮಾನ್ಯವಿತ್ತು. ಬಳಿಕ ಸೆಟ್ಟಿಂಗ್‌ ಗಳು ಬಂದವು. ಮಧ್ಯದಲ್ಲಿ ದೊಡ್ಡ ಮನೆ, ಇಕ್ಕೆಲಗಳಲ್ಲಿ ಸಣ್ಣ ಮನೆಯಂತಹ ಸೆಟ್ಟಿಂಗ್‌ ಗಳು ಹೆಚ್ಚಾಗಿ ನಾಟಕಗಳಲ್ಲಿ ಬಳಸಲಾಗುತ್ತಿತ್ತು. ಈಗಲೂ ಇಂತಹ ಸೆಟ್ಟಿಂಗ್‌ ನಾಟಕಗಳು ನಡೆಯುತ್ತಿದೆ. ಆದರೆ ಈಗ ಆಧುನಿಕ ವ್ಯವಸ್ಥೆಗಳು ನಾಟಕಕ್ಕೆ ಹೊಸ ರೂಪವನ್ನು ತಂದುಕೊಟ್ಟಿವೆ. ಪರದೆ ನಾಟಕಗಳು ಇಲ್ಲವೇ ಇಲ್ಲ ಎನ್ನುವಂತಾಗಿದೆ. ಹಲವು ನಾಟಕಗಳು ಧ್ವನಿಮುದ್ರಿತ ವ್ಯವಸ್ಥೆಗಳಿಂದಲೂ ಗಮನ ಸೆಳೆಯುತ್ತಿದೆ.

Advertisement

ದೇವದಾಸ್‌ ಕಾಪಿಕಾಡ್‌ ಅವರ ಚಾ ಪರ್ಕ ತಂಡ, ಕಿಶೋರ್‌ ಡಿ ಶೆಟ್ಟಿಯವರ ಲಕುಮಿ ತಂಡ ಮತ್ತು ವಿಜಯ್‌ ಕುಮಾರ್‌ ಕೋಡಿಯಾಲ್‌ ಬೈಲ್‌ ಅವರ ಕಲಾಸಂಗಮ ತಂಡಗಳು ದಶಕಗಳ ಕಾಲ ತುಳು ಪ್ರೇಕ್ಷಕರನ್ನು ರಂಜಿಸಿವೆ. ಅದರೊಂದಿಗೆ ಶಾರದಾ ಆರ್ಟ್ಸ್ ಮಂಜೇಶ್ವರ, ಕಾಪು ರಂಗ ತರಂಗ, ವಿಜಯ ಕಲಾವಿದೆರ್‌, ಅಮ್ಮ ಕಲಾವಿದೆರ್‌, ನಮ್ಮ ಕಲಾವಿದೆರ್‌, ಅಭಿನಯ ಕಲಾವಿದೆರ್‌, ವಿಧಾತ್ರಿ ಕಲಾವಿದೆರ್‌, ವೈಷ್ಣವಿ ಕಲಾವಿದೆರ್‌, ಚೈತನ್ಯ ಕಲಾವಿದೆರ್‌ ಮುಂತಾದ ತಂಡಗಳು ಹೊಸಹೊಸ ನಾಟಕಗಳೊಂದಿಗೆ ಕಲಾರಸಿಕರನ್ನು ರಂಜಿಸುವ ಕೆಲಸ ಮಾಡುತ್ತಿವೆ.

ಖ್ಯಾತ ಕಲಾವಿದ, ಬರಹಗಾರ ಪ್ರಸನ್ನ ಶೆಟ್ಟಿ ಬೈಲೂರು ರಚನೆಯ ಚೈತನ್ಯ ಕಲಾವಿದೆರ್‌ ನಟನೆಯ ʼಅಷ್ಟೆಮಿʼ ನಾಟಕ ತನ್ನ ನಾವೀನ್ಯತೆಯ ಕಾರಣದಿಂದ ಗಮನ ಸೆಳೆಯುತ್ತಿದೆ. ಹುಲಿವೇಷದ ತಂಡವೊಂದರ ಸುತ್ತ ನಡೆಯುವ ಕಥಾನಕದಲ್ಲಿ ಅದರ ರಂಗಸಜ್ಜಿಕೆಯ ಕಾರಣದಿಂದ ಹೊಸ ಪ್ರೇಕ್ಷಕರನ್ನು ಸೆಳೆಯುತ್ತಿದೆ. 2 ಗಂಟೆ 20 ನಿಮಿಷಗಳ ನಾಟಕವು ನೋಡುಗರಿಗೆ ಸಿನಿಮಾ ಅನುಭವ ನೀಡುತ್ತಿದೆ. ಒಂದೇ ವೇದಿಕೆಯಲ್ಲಿ ನಾಲ್ಕೈದು ಬಾರಿ ಬದಲಾಗುವ ಸೆಟ್ಟಿಂಗ್‌, ಆಗಾಗ ಬರುವ ವಿಡಿಯೋ ತುಣುಕು, ವಿಡಿಯೋ ಮುಗಿದಾಕ್ಷಣ ಅಲ್ಲಿಂದಲೇ ವೇದಿಕೆಯಲ್ಲಿ ಮುಂದುವರಿಯುವ ಅಭಿನಯ.. ಹೀಗೆ ಹಲವು ರೀತಿಯಲ್ಲಿ ಹೊಸತನದ ಅನುಭವ ನೀಡುತ್ತಿದೆ.

ತುಳು ನಾಟಕರಂಗವು ಶತಮಾನ ಸಂಭ್ರಮದ ಹೊಸ್ತಿಲಲ್ಲಿದೆ. 1933ರಲ್ಲಿ ಮಂಗಳೂರಿನ ಮಾಧವ ತಿಂಗಳಾಯರು ಬರೆದ “ಜನ ಮರ್ಲ್ʼ ತುಳುವಿನ ಮೊದಲ ನಾಟಕ ಎಂಬ ಲೆಕ್ಕಾಚಾರವಿದೆ. 1936ರಲ್ಲಿ ಪಡುಬಿದ್ರಿ ಶಿವಣ್ಣ ಹೆಗ್ಡೆ ಅವರು “ವಿದ್ಯೆದ ತಾದಿʼ ಎಂಬ ನಾಟಕ ಬರೆದಿದ್ದರು. 90ಕ್ಕೂ ಹೆಚ್ಚು ವರ್ಷಗಳ ಕಾಲ ವೈಭವದಿಂದ ಮೆರೆದುಕೊಂಡು ಬರುತ್ತಿರುವ ತುಳು ರಂಗಭೂಮಿ ಇಂಟರ್ನೆಟ್‌ ಕಾಲದಲ್ಲಿಯೂ ಪ್ರೇಕ್ಷಕರನ್ನು ರಂಜಿಸುತ್ತಿದೆ.

ಕೀರ್ತನ್‌ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next