Advertisement

 ತುಳು ವಿಚಾರಗೋಷ್ಠಿ, ಸಂವಾದ

09:57 AM Dec 31, 2017 | Team Udayavani |

ಮಹಾನಗರ: ಧರ್ಮಗಳು ಬೆನ್ನೆಲುಬಾಗಿ ನಿಂತರೆ ತುಳು ಭಾಷೆಯನ್ನು ಎತ್ತರಕ್ಕೆ ಬೆಳೆಸಲು ಸಾಧ್ಯ ಎಂದು
ಮಂಗಳೂರು ವಿಶ್ವವಿದ್ಯಾನಿಲದ ಎಸ್‌ವಿಪಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಪ್ರೊ| ಅಭಯ ಕುಮಾರ್‌ ಹೇಳಿದರು. 

Advertisement

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಶನಿವಾರ ತುಳು ಭವನದಲ್ಲಿ ಆಯೋಜಿಸಲಾದ ಚಾವಡಿ ಕಾರ್ಯಕ್ರಮದ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ‘ತುಳು ತಲೆ ಎತ್ತುವ ಬಗೆ’ ಎಂಬ ವಿಷಯದಲ್ಲಿ ಮಾತನಾಡಿದರು. ಎಲ್ಲ ಧರ್ಮದ ಪ್ರಾರ್ಥನ ಮಂದಿರಗಳಲ್ಲಿ ತುಳು ಭಾಷೆಯ ಕಾರ್ಯಕ್ರಮಗಳಿಗೆ ಪ್ರಾಧಾನ್ಯತೆ ದೊರೆಯಬೇಕು. ಈ ಮೂಲಕ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯ ಪ್ರಚಾರವಾದಾಗ ತುಳು ಭಾಷೆ ಎಲೆ ಎತ್ತಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದರು.

ಮಾತು ರೂಢಿಸಿಕೊಳ್ಳಿ
ದಿನನಿತ್ಯದ ಚಟುವಟಿಕೆಗಳಲ್ಲಿ ನಾವು ತುಳು ಭಾಷೆ ಮಾತನಾಡುವುದನ್ನು ರೂಢಿಸಿ ಕೊಳ್ಳಬೇಕಾಗಿದೆ. ಇದು ಕೂಡ ತುಳು ಭಾಷಾ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ತುಳುವಿಗೆ ಸಂಬಂಧಿಸಿ ಸಾಹಿತ್ಯ ರಚನೆಯ ಮನಸ್ಸು 13ನೆ ಶತಮಾನದಲ್ಲಿಯೇ ಆರಂಭಗೊಂಡಿತ್ತು. ಆ ಮನಸ್ಸೇ ಇಂದು ತುಳುವಿಗೆ ಗಟ್ಟಿ ಬುನಾದಿಯನ್ನು ಹಾಕಿಕೊಟ್ಟಿದೆ. ಹಾಗಿದ್ದರೂ ತುಳುವಿಗೆ ಅಧಿಕೃತ ಮಾನ್ಯತೆ ಇಲ್ಲವಾಗಿದ್ದು, ಇನ್ನೂ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರದಿರುವುದು ಕೂಡ ತುಳು ಭಾಷೆ ನಿರೀಕ್ಷಿತ ಮಟ್ಟದಲ್ಲಿ ತಲೆ ಎತ್ತದಿರಲು ಕಾರಣ ಎಂದರು.

ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ವಹಿಸಿದ್ದರು. ತುಳು ಸಂಸ್ಕೃತಿ
ಆಚರಣೆಯ ಸ್ವರೂಪ ವಿಷಯದಲ್ಲಿ ಸುಳ್ಯ ನೆಹರೂ ಮೆಮೋರಿಯಲ್‌ ಕಾಲೇಜಿನ ಪ್ರಾಧ್ಯಾಪಕ ಡಾ| ಪೂವಪ್ಪ ಗಣಿಯೂರು ಮಾತನಾಡಿದರು. ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಮೊದಲು ಅರಿವು ಪಚ್ಚೆ ಬಳಗ ಬಂಟ್ವಾಳ ತಂಡದಿಂದ ತುಳು ಗೀತಗಾಯನ ಕಾರ್ಯಕ್ರಮ ನಡೆಯಿತು. ರಿಜಿಸ್ಟ್ರಾರ್‌ ಚಂದ್ರಹಾಸ ರೈ ಉಪಸ್ಥಿತರಿದ್ದರು. ಅಕಾಡೆಮಿಯ ಸದಸ್ಯ ಡಾ| ವಾಸುದೇವ ಬೆಳ್ಳೆ ಸ್ವಾಗತಿಸಿದರು. ವಿದ್ಯಾಶ್ರೀ ವಂದಿಸಿ, ನರೇಶ್‌ ಕುಮಾರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next