ಮಂಗಳೂರು: ತುಳು ಲಿಪಿಯನ್ನು ಯುನಿಕೋಡ್‌ಗೆ ಸೇರ್ಪಡಿಸುವ ಕಾರ್ಯ ಸದ್ಯ ಸುಮಾರು ಶೇ.80 ರಷ್ಟು ಪೂರ್ಣಗೊಂಡಿದೆ. ತುಳು ಭಾಷೆ ಅಧಿಕೃತ ರಾಜ್ಯ ಭಾಷೆಯಾಗಬೇಕಾದರೆ, ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಬೇಕಾದರೆ ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ಸಿಗುವುದೂ ಒಂದು ಮಾನದಂಡವಾಗಿದೆ. ಈ ಕಾರ್ಯ ಈಗಿಂದಲೇ ನಡೆಯಬೇಕು ಎಂದು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಸದ್ಯ ಯುನಿಕೋಡ್ ಅನುಮೋದನೆ ದೊರಕಿರುವುದು ತುಳು ತಿಗಳಾರಿ ಲಿಪಿಗೆಯೇ ಹೊರತು ತುಳು ಲಿಪಿಗೆ ಅಲ್ಲ. ತುಳು ಲಿಪಿಗೂ ತುಳು ತಿಗಳಾರಿ ಲಿಪಿಗೂ ಶೇ.25 ವ್ಯತ್ಯಾಸವಿದೆ. ಕನ್ನಡ ಮತ್ತು ತೆಲುಗು ಲಿಪಿಗಳಿಗೆ ಸಾಮ್ಯತೆಗಳಿರುವಂತೆ, ಈ ಎರಡು ಲಿಪಿಗಳಿಗೂ ಸಾಮ್ಯತೆಗಳಿವೆ. ಬ್ರಾಹ್ಮಿಲಿಪಿ ಮೂಲದಿಂದ ಉತ್ತರ ಕನ್ನಡ ಭಾಗದಲ್ಲಿ ಪ್ರಚಲಿತವಿದ್ದ ತಿಗಳಾರಿ ಲಿಪಿ ಯನ್ನು ಯುನಿಕೋಡಿಗೆ ಸೇರಿಸಲು ವೈಷ್ಣವಿ ಮೂರ್ತಿ, ವಿನೋದ್ ರಾಜ್ ಅವರು ಇಟ್ಟ ಬೇಡಿಕೆಯ ಪ್ರಯತ್ನಕ್ಕೆ ಯೂನಿಕೋಡ್ ಕನ್ಸೋರ್ಟಿಯಂ ಕ್ಯಾಲಿರ್ನಿಯಾದಿಂದ ತುಳು ತಿಗಳಾರಿ ಲಿಪಿ ಎಂದು ಅನುಮೋದನೆ ಈಗ ನೀಡಲಾಗಿದೆ ಎಂದು ಹೇಳಿದರು.
ತುಳು ಲಿಪಿಯನ್ನು ಯುನಿಕೋಡಿಗೆ ಸೇರಿಸುವ ಪ್ರಯತ್ನದ ಬಗ್ಗೆ ಚರ್ಚಿಸಿ ಸೇರ್ಪಡೆ ಕಾರ್ಯ 2017ರಲ್ಲಿ ಆರಂಭಗೊಂಡಿದೆ. ಯು.ಬಿ. ಪವನಜ ಅವರು ಯುನಿಕೋಡಿಗೆ ಕೇವಲ ಪ್ರಸ್ತಾವನೆಯನ್ನು ಮಾತ್ರ ಕಳುಹಿಸಿರುತ್ತಾರೆ. ಯಾವುದೇ ಕಾರ್ಯವನ್ನು ಮಾಡಿರುವುದಿಲ್ಲ. 2017 ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪರವರ ಇ ಗರ್ವನನ್ಸ್ ಕಾರ್ಯದರ್ಶಿಯಾಗಿದ್ದ ಬೇಲೂರು ಸುದರ್ಶನರವರ ಸಹಕಾರವನ್ನು ಪಡೆದು ತುಳುಲಿಪಿ ರಾಜ್ಯ ಮತ್ತು ರಾಷ್ಟ್ರ ಮಾನ್ಯತೆ ಪಡೆಯುವಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಗ ಅಧ್ಯಕ್ಷನಾಗಿದ್ದ ನಾನು ಹಾಗೂ ರಿಜಿಸ್ಟ್ರಾರ್, ಸರ್ವ ಸದಸ್ಯರ ಪರಿಪೂರ್ಣ ಬೆಂಬಲದಿಂದ ಡಾ. ಆಕಾಶ್ ರಾಜ ಜೈನ್ ರವರ ಪರಿಶ್ರಮದಿಂದ ಯುನಿಕೋಡ್ ಕಾರ್ಯ ಮುಂದುವರಿಸಲಾಯಿತು.
ಜೈ ತುಳುನಾಡು ಸಂಘಟನೆಯ ಯುವಕರೂ ಸಹಕರಿಸಿದ್ದಾರೆ. ಈ ಹಿಂದಿನ ಅಧ್ಯಕ್ಷರಾದ ಪ್ರೊ. ವಿವೇಕ್ ರೈ ಅವರಿಂದ ಹಿಡಿದು ನಮ್ಮ ಸಮಿತಿಯವರೆಗೆ ನಿರಂತರ ಪ್ರಯತ್ನದ ನಡೆಸಲಾಗಿದೆ.
ಪ್ರಸಕ್ತ ತುಳು ಲಿಪಿ ಯುನಿಕೋಡ್ ಸೇರ್ಪಡೆ ಕಾರ್ಯ ಸಂಪೂರ್ಣಗೊಳ್ಳಲು ಇನ್ನೂ ಸ್ವಲ್ಪ ಕೆಲಸ ಬಾಕಿ ಇದೆ. ಅದಕ್ಕೆ ಈಗಿನ ಅಕಾಡೆಮಿ ಅಧ್ಯಕ್ಷ ರು ಹಾಗೂ ಸದಸ್ಯರು ಪ್ರಯತ್ನಿಸಬೇಕು ಎಂದರು.
ಡಾ. ಪವನಜರು ತನ್ನ ವೈಯುಕ್ತಿಕ ಕಾರಣದಿಂದ ಯುನಿಕೋಡ್‌ಗೆ ಕಾರ್ಯವನ್ನು ವಿಳಂಬಿಸಿದಾಗ ಅಕಾಡೆಮಿ ಒತ್ತಾಯಿಸಿದರೂ ಅವರು ಜವಾಬ್ದಾರಿಯನ್ನು ಕೈ ಬಿಟ್ಟಾಗ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯಿಂದಲೇ ಅಕಾಡೆಮಿ ಅಧ್ಯಕ್ಷನಾದ ನನ್ನ ಅಧ್ಯಕ್ಷತೆಯಲ್ಲಿ ಸದಸ್ಯ ಸಂಚಾಲಕರಾಗಿರುವ ಡಾ. ಆಕಾಶ್ ರಾಜ್ ಜೈನ್ ಯುನಿಕೋಡ್‌ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಒಟ್ಟಿನಲ್ಲಿ ಇದೀಗ ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ಸಿಕ್ಕಿದೆ ಎಂಬುದು ತಪ್ಪು ಮಾಹಿತಿ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಮಾಜಿ ಸದಸ್ಯ ನಾಗೇಶ್ ಕುಲಾಲ್, ಜೈ ತುಳುನಾಡು ಅಧ್ಯಕ್ಷ ಉದಯ ಪೂಂಜ, ಸದಸ್ಯ ಕಿರಣ್ ಉಪಸ್ಥಿತರಿದ್ದರು.