Advertisement

ತುಳು ಲಿಪಿಯ ಮುದ್ರಿತ ಪ್ರಥಮ ಪುಸ್ತಕ ‘ಶ್ರೀಹರಿಸ್ತುತಿ’

09:15 AM Mar 29, 2018 | Karthik A |

ಮಂಗಳೂರು: ತಾಳೆಗರಿಯಲ್ಲಷ್ಟೇ ನೋಡುತ್ತಿದ್ದ ತುಳು ಲಿಪಿ ಪ್ರಥಮ ಬಾರಿಗೆ ಸಂಪೂರ್ಣ ಗಣಕೀಕೃತಗೊಂಡು ಅಕ್ಷರ ರೂಪದಲ್ಲಿ ತುಳುವರ ಮನೆಮನ ತಲುಪಲು ಸಿದ್ಧವಾಗುತ್ತಿದೆ. ವಿಶೇಷವೆಂದರೆ ಗಣಕಯಂತ್ರವನ್ನೇ ಬಳಸಿಕೊಂಡು ತುಳುಲಿಪಿಯಲ್ಲಿ ಪುಸ್ತಕ ಹೊರ ತರುತ್ತಿರುವುದು ಒಂಬತ್ತನೇ ತರಗತಿಯ ಪೋರ! ನಗರದ ಕೊಡಿಯಾಲ್‌ಬೈಲ್‌ ಶಾರದಾ ವಿದ್ಯಾಲಯದಲ್ಲಿ 9ನೇ ತರಗತಿ ಕಲಿಯುತ್ತಿರುವ ನಿಷ್ಕಲ್‌ ರಾವ್‌ ಅವರು ಗಣಕೀಕೃತ ತುಳುಲಿಪಿಯಲ್ಲಿ ‘ಶ್ರೀಹರಿಸ್ತುತಿ’ ಗ್ರಂಥವನ್ನು ಸಿದ್ಧಪಡಿಸಿದ್ದು, ಎ. 1ರಂದು ಲೋಕಾರ್ಪಣೆಗೊಳ್ಳಲಿದೆ. ಭಗವದ್ಗೀತೆ, ಮಹಾಭಾರತ ಮುಂತಾದವುಗಳಿಂದ ಆಯ್ದ ಎಂಟು ಸ್ತುತಿಗಳನ್ನು ತುಳುಲಿಪಿಗೆ ಭಾಷಾಂತರಿಸಿ ‘ಶ್ರೀಹರಿಸ್ತುತಿ’ ಗ್ರಂಥವನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಅವರು ಕಳೆದ ಮೂರು ತಿಂಗಳಿನಿಂದ ಶ್ರಮಿಸಿದ್ದು, ಗಣಕೀಕೃತ ತುಳುಲಿಪಿಯಲ್ಲಿ ಸಿದ್ಧಪಡಿಸಿದ ಮೊದಲ ಪುಸ್ತಕವನ್ನು ತುಳುನಾಡಿನ ಜನರ ಕೈಗಿಡಲು ಮುಂದಾಗಿದ್ದಾರೆ.

Advertisement

ಇಲ್ಲಿಯವರೆಗೆ ತುಳುಲಿಪಿಯನ್ನು ತಾಳೆಗರಿಯಲ್ಲಷ್ಟೇ ಕಾಣಬಹುದಿತ್ತು. ತುಳು ಲಿಪಿಯನ್ನು ಬರೆಯುವ ಪ್ರಯತ್ನಗಳು ನಡೆಯುತ್ತಿದ್ದರೂ, ಗಣಕೀಕರಣಗೊಂಡ ತುಳುಲಿಪಿಯಲ್ಲಿ ಪುಸ್ತಕಗಳು ಪ್ರಕಟಗೊಂಡಿಲ್ಲ. ಇದೀಗ ನಿಷ್ಕಲ್‌ ರಾವ್‌ ಅವರು ವೇದಮೂರ್ತಿ ವಿದ್ವಾನ್‌ ಡಾ| ಕದ್ರಿ ಪ್ರಭಾಕರ ಅಡಿಗ ಹಾಗೂ ಲಿಪಿ ತಜ್ಞ ಕೆ.ಪಿ. ರಾವ್‌ ಅವರ ಮಾರ್ಗದರ್ಶನದೊಂದಿಗೆ ಕಂಪ್ಯೂಟರ್‌ನಲ್ಲಿ ತುಳು ಲಿಪಿಯನ್ನು ಬಳಸಿಕೊಂಡು ‘ಶ್ರೀಹರಿಸ್ತುತಿ’ ಗ್ರಂಥವನ್ನು ಸಿದ್ಧಪಡಿಸಿದ್ದಾರೆ. ಸಹೋದರ 6ನೇ ತರಗತಿಯಲ್ಲಿ ಕಲಿಯುತ್ತಿರುವ ನಿಶ್ಚಿತ್‌ ರಾವ್‌ನ ಸಹಕಾರದೊಂದಿಗೆ ನಿಷ್ಕಲ್‌ ಈ ಪುಸ್ತಕ ಬರೆದಿದ್ದಾರೆ.  


‘ತುಳುನಾಡಿನ ಭವ್ಯ ಪರಂಪರೆಯ ಕುರಿತು ತಾಳೆಗರಿಯಲ್ಲಿ ತುಳುಲಿಪಿಯಲ್ಲಿ ಅಚ್ಚೊತ್ತಲಾಗಿದೆ. ಆದರೆ ಪ್ರಾಚೀನ ಪರಂಪರೆಯ ಇವು ಕ್ರಮೇಣ ನಾಶವಾಗುವ ಹಂತಕ್ಕೆ ತಲುಪಿರುವುದರಿಂದ ತುಳು ಲಿಪಿಗೂ ತೊಂದರೆಯಾಗುವ ಅಂಚಿಗೆ ತಲುಪಿದೆ. ತುಳು ಲಿಪಿಯನ್ನು ಸಂರಕ್ಷಿಸುವುದರೊಂದಿಗೆ ತುಳು ಸಾಹಿತ್ಯವನ್ನು ಬೆಳೆಸುವ ಉದ್ದೇಶವನ್ನಿಟ್ಟುಕೊಂಡು ಗಣಕೀಕೃತ ತುಳುಲಿಪಿಯನ್ನು ಪರಿಚಯಿಸುವ ಕೆಲಸ ಮಾಡಲಾಗಿದೆ’ ಎನ್ನುತ್ತಾರೆ ನಿಷ್ಕಲ್‌ ರಾವ್‌.

ಪುಸ್ತಕದಲ್ಲೇನಿದೆ?
132 ಪುಟಗಳ ‘ಶ್ರೀಹರಿಸ್ತುತಿ’ಯಲ್ಲಿ ಒಟ್ಟು ಎಂಟು ಸ್ತುತಿಗಳಿವೆ. ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರಮ್‌, ಶ್ರೀ ವಿಷ್ಣು ಸಹಸ್ರನಾಮಾವಳೀ, ಶ್ರೀ ಕೃಷ್ಣಾಷ್ಟೋತ್ತರ ಶತನಾಮ ಸ್ತೋತ್ರಮ್‌, ಶ್ರೀ ಕೃಷ್ಣಾಷ್ಟೋತ್ತರ ಶತನಾಮಾವಳೀ, ಶ್ರೀ ವೆಂಕಟೇಶ ಸ್ತೋತ್ರಮ್‌, ಶ್ರೀ ಮದ್ಭಗವದ್ಗೀತಾ -ಪಂಚದಶೋಧ್ಯಾಯಃ, ಶ್ರೀ ಮದಣುಭಾಷ್ಯಂ, ಮಂಗಲಾಷ್ಟಕಂ ಮುಂತಾದ ಸ್ತುತಿಗಳನ್ನು ಪುಸ್ತಕ ಒಳಗೊಂಡಿದೆ. 

ಕನ್ನಡ-ತುಳು ಲಿಪಿಯಲ್ಲಿ ಪುಸ್ತಕ
ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಎ. 1ರಂದು ಸಂಜೆ 5.30ಕ್ಕೆ ‘ಶ್ರೀಹರಿಸ್ತುತಿ’ ಲೋಕಾರ್ಪಣೆಗೊಳ್ಳಲಿದ್ದು, ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ಒಟ್ಟು 1,000 ಪುಸ್ತಕಗಳನ್ನು ಮುದ್ರಿಸಲಾಗಿದೆ. ಪುಸ್ತಕಕ್ಕೆ 180 ರೂ. ನಿಗದಿಗೊಳಿಸಲಾಗಿದ್ದು, ಪ್ರಥಮ ಆವೃತ್ತಿಯ ಪುಸ್ತಕವನ್ನು ಉಚಿತವಾಗಿ ವಿತರಿಸಲಾಗುತ್ತದೆ. ತುಳು ಲಿಪಿ ತಿಳಿಯದವರಿಗೆ ಸುಲಭವಾಗಲೆಂದು ಪುಸ್ತಕದ ಎಡ ಬದಿಯಲ್ಲಿ ಕನ್ನಡದಲ್ಲಿ ಮತ್ತು ಬಲ ಬದಿಯಲ್ಲಿ ತುಳು ಲಿಪಿಯಲ್ಲಿ ಅಕ್ಷರಗಳನ್ನು ಮುದ್ರಿಸಲಾಗಿದೆ. ಮಂಗಳೂರು ಧರ್ಮಶ್ರೀ ಪ್ರಕಾಶನವು ಪುಸ್ತಕವನ್ನು ಪ್ರಕಟಿಸಿದೆ. ‘ಇ-ಪುಸ್ತಕಗಳನ್ನು ಕೂಡ ಬಿಡುಗಡೆಗೊಳಿಸಲಾಗುವುದು. ಅಲ್ಲದೆ ತುಳು ಲಿಪಿ ಮೊಬೈಲ್‌ನಲ್ಲಿಯೂ ಸಿಗುವಂತಾಗಲು ಶೀಘ್ರ ಆ್ಯಪ್‌ ಅಭಿವೃದ್ಧಿಗೊಳಿಸುವ ಬಗ್ಗೆ ಕಾರ್ಯಯೋಜಿಸಲಾಗಿದೆ’ ಎಂದು ನಿಷ್ಕಲ್‌ ರಾವ್‌ ತಿಳಿಸಿದ್ದಾರೆ.

Advertisement

ಕಂಪ್ಯೂಟರ್‌ನಲ್ಲಿ ತುಳುಲಿಪಿ ಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯವರು ಕೇಳಿಕೊಂಡ ಹಿನ್ನೆಲೆಯಲ್ಲಿ ಈ ಹಿಂದೆ ತುಳುಲಿಪಿಯನ್ನು ಗಣಕಯಂತ್ರದಲ್ಲಿ ಅಭಿವೃದ್ಧಿಪಡಿಸಿದ್ದೆ. ಬಳಿಕ ಅದರ ಬಳಕೆ ಹೇಗಾಯಿತು ತಿಳಿದಿಲ್ಲ. ಕೆಲ ಸಮಯದ ಹಿಂದೆ ಶಾರದಾ ವಿದ್ಯಾಲಯದ ವಿದ್ಯಾರ್ಥಿಯು ಗಣಕೀಕೃತ ತುಳುಲಿಪಿ ಅಭಿವೃದ್ಧಿಪಡಿಸುವ ಬಗ್ಗೆ ಹೇಳಿದ್ದರು. ನಾನೂ ಮಾಡಿ ಎಂಬುದಾಗಿ ಪ್ರೋತ್ಸಾಹಿಸಿದ್ದೆ.
– ಕೆ.ಪಿ. ರಾವ್‌, ಲಿಪಿ ತಜ್ಞ

ಈವರೆಗೆ ಬಂದಿಲ್ಲ
ಪ್ರಾಚೀನ ಕಾಲದಲ್ಲಿ ತುಳು ಲಿಪಿ ತಾಳೆಗರಿಯಲ್ಲಿ ಬರೆಯಲ್ಪಟ್ಟಿದೆ. ಅವುಗಳನ್ನು ಕನ್ನಡಕ್ಕೆ ಲಿಪ್ಯಂತರ ಮಾಡಲಾಗಿದೆ. ಮುದ್ರಿತ ತುಳು ಲಿಪಿಯಲ್ಲಿ ಪುಸ್ತಕಗಳು ಈವರೆಗೆ ಬಂದಿಲ್ಲ. ಬಹುಶಃ ‘ಶ್ರೀಹರಿಸ್ತುತಿ’ ಪುಸ್ತಕವೇ ಪ್ರಥಮ ತುಳುಲಿಪಿ ಪುಸ್ತಕವಾಗಿರಬಹುದು.
– ಚಂದ್ರಹಾಸ ರೈ, ರಿಜಿಸ್ಟ್ರಾರ್‌, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

ನಿಷ್ಕಲ್‌ ರಾವ್‌ ಅವರಿಗೆ ಕಂಪ್ಯೂಟರ್‌ನಲ್ಲಿ ಹಿಡಿತ ಇತ್ತು. ತುಳು ಲಿಪಿಯ ಬಗ್ಗೆಯೂ ಆಸಕ್ತಿ ತೋರಿಸುತ್ತಿದ್ದ. ಲಿಪಿ ಅಭಿವೃದ್ಧಿ ಸಂಬಂಧ ಸೂಕ್ತ ಮಾರ್ಗದರ್ಶನ ನೀಡಿದೆ. ಲಿಪಿತಜ್ಞ ಕೆ.ಪಿ. ರಾವ್‌ ಅವರ ಸಹಕಾರದೊಂದಿಗೆ ತುಳುಲಿಪಿಯನ್ನು ಗಣಕಯಂತ್ರದಲ್ಲಿ ಅಳವಡಿಸಿ ಇದೀಗ ತುಳುಲಿಪಿಯಲ್ಲೇ ಗ್ರಂಥವನ್ನು ಸಂಪಾದಿಸಿದ್ದಾರೆ.
– ವಿದ್ವಾನ್‌ ಡಾ| ಕದ್ರಿ ಪ್ರಭಾಕರ ಅಡಿಗ, ನಿಷ್ಕಲ್‌ ರಾವ್‌ ಅವರ ವೇದಗುರು

ತಮ್ಮನ ಸಹಕಾರ
ತಾಳೆಗರಿಯಲ್ಲಿ ತುಳುಲಿಪಿ ಲಭ್ಯವಿದ್ದರೂ ಈವರೆಗೆ ಗಣಕೀಕೃತಗೊಂಡು ಮುದ್ರಿತ ರೂಪದಲ್ಲಿ ಪುಸ್ತಕ ಬಂದಿಲ್ಲ. ಈ ನಿಟ್ಟಿನಲ್ಲಿ ನಿಷ್ಕಲ್‌ ಪ್ರಯತ್ನಿಸಿದ್ದಾರೆ. ತಮ್ಮನ ಸಹಕಾರದೊಂದಿಗೆ ಕೃತಿ ಪೂರ್ಣಗೊಂಡಿದೆ.
– ಅತುಲ್‌ ರಾವ್‌, ನಿಷ್ಕಲ್‌ ತಂದೆ

— ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next