Advertisement

ಹಳೆ ನಾಟಕಗಳ ವೈಭವ ಮರುಕಳಿಸಿದ ತುಳು ನಾಟಕ ಪರ್ಬ

06:02 PM Apr 04, 2019 | mahesh |

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ನಾಟಕ ಪರ್ಬದಲ್ಲಿ ಒಂದು ವಾರದಲ್ಲಿ ನಿರಂತರವಾಗಿ ಏಳು ನಾಟಕಗಳು ಮಂಗಳೂರಿನ ಕುದ್ಮಲ್‌ ರಂಗರಾವ್‌ ಪುರಭವನದಲ್ಲಿ ನಡೆಯಿತು. ಹಿರಿಯ ತುಳು ನಾಟಕಕಾರರ ಜನಪ್ರಿಯ ನಾಟಕಗಳನ್ನು ವಿವಿಧ ತಂಡಗಳು ಅಚ್ಚುಕಟ್ಟಾಗಿ ಪ್ರದರ್ಶಿಸಿ ತುಳುವಿನ ಹಳೆ ಕಾಲದ ನಾಟಕ ಪ್ರೇಮಿಗಳನ್ನು ಮತ್ತೂಮ್ಮೆ ಸೆಳೆದವು.

Advertisement

ಮೊದಲ ದಿನ ಗಂಗಾಧರ ಶೆಟ್ಟಿ ಅಳಕೆ ಅವರ ಪೂಮಾಲೆ ನಾಟಕ ಅವರದೇ ನಿರ್ದೇಶನದಲ್ಲಿ ಪ್ರದರ್ಶನವಾಯಿತು. ಚಿತ್ರಕಲಾ ಆರ್ಟ್ಸ್ ತಂಡದವರು ಈ ನಾಟಕವನ್ನು ಪ್ರಸ್ತುತ ಪಡಿಸಿದರು. ಬದುಕಿನಲ್ಲಿ ಹಣ ಐಶ್ವರ್ಯಕ್ಕಿಂತ ಪ್ರೀತಿ ಸ್ನೇಹ ಮುಖ್ಯವಾದುದು ಎಂಬ ಸಂದೇಶ ಸಾರುತ್ತಾ ಹೆಣ್ಣು ಮಗಳೊಬ್ಬಳು ಬದುಕಿನಲ್ಲಿ ಎದುರಿಸುವ ಕಷ್ಟ , ಸೋಲು, ತನ್ನ ಪತಿಗಾಗಿ ಮಾಡುವ ತ್ಯಾಗವನ್ನು ಮನಮುಟ್ಟುವಂತೆ ಬಿಂಬಿಸಿತ್ತು ಪೂಮಾಲೆ ನಾಟಕ .

ಎರಡನೇ ದಿನ ಹಿರಿಯ ನಾಟಕಗಾರ ರತ್ನಾಕರ ರಾವ್‌ ಕಾವೂರು ಅವರ ತಬುರನ ತೆಲಿಕೆ ನಾಟಕವನ್ನು ರಂಗಚಲನ ತಂಡದವರು ಪ್ರಸ್ತುತ ಪಡಿಸಿದರು. ದಿನೇಶ್‌ ಅತ್ತಾವರ ಅವರ ನಿರ್ದೇಶನದಲ್ಲಿ ಈ ನಾಟಕವು ಮನೋಜ್ಞವಾಗಿ ಮೂಡಿಬಂತು. ತಬುರ ತನ್ನ ನೋವನ್ನು ನುಂಗಿಕೊಂಡು ತನ್ನದು ಸಂತೃಪ್ತಿಯ ಬದುಕು ಎಂಬುದನ್ನು ಸಮಾಜದ ಎದರು ಬಿಂಬಿಸಲು ಪಡುವ ಪಾಡು , ಕೌಟುಂಬಿಕ ಬದುಕಿನಲ್ಲಿ ಯಜಮಾನ ಎಚ್ಚರ ತಪ್ಪಿದರೆ ಎದುರಾಗುವ ಕಷ್ಟ, ದುಖಗಳ ತಿರುಳನ್ನು ನಾಟಕ ಬಿಂಬಿಸಿತ್ತು.

ಮೂರನೇ ದಿನ ಬಿ.ಪದ್ಮರಾಜ್‌ ರಾವ್‌ ಪೆರ್ಡೂರ್‌ ಅವರ ಕಾಲಕೂಡುª ಬನ್ನಗ ನಾಟಕವನ್ನು ಕೂಡಿª ಕಲಾವಿದೆರ್‌ ತಂಡದವರು ಪಿ.ಪ್ರಭಾಕರ ಕಲ್ಯಾಣಿ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದರು. ಬಡ ಕುಟುಂಬದಲ್ಲಿನ ಸಾಹಿತಿಯೊಬ್ಬ ವಾಸ್ತವ ಬದುಕಿನ ಕಷ್ಟನಷ್ಟಗಳನ್ನು ಎದುರಿಸಲಾಗದೆ ಪಡುವ ಪಾಡು , ಮುಂದೊಂದು ದಿನ ಎಲ್ಲಾ ಕಷ್ಟಗಳ ಸರಮಾಲೆಯನ್ನು ದಾಟಿ ಸಾಗುವಾಗ ಪುರಸ್ಕಾರ , ಗೌರವ ಸಾಹಿತಿಯ ಮನೆಬಾಗಿಲಿಗೆ ಬರುವಂತಹ ತಿರುಳು ಈ ನಾಟಕದ ಜೀವಾಳವಾಗಿತ್ತು.

ನಾಲ್ಕನೇ ದಿನ ಹಿರಿಯ ನಾಟಕಗಾರ ಎಂ.ಸೀತಾರಾಮ ಕುಲಾಲ್‌ ಅವರ ಮಣ್‌¡ದ ಮಗಲ್‌ ಅಬ್ಬಕ್ಕ ನಾಟಕವನ್ನು ಕಡಲನಾಡ ಕಲಾವಿದೆರ್‌ ತಂಡದವರು ಕಿಶೋರ್‌ ಡಿ.ಶೆಟ್ಟಿ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದರು. ರಾಣಿ ಅಬ್ಬಕ್ಕನ ಚರಿತ್ರೆಯನ್ನು ಸಾರುವ ಈ ನಾಟಕವು ಅದ್ದೂರಿಯಾಗಿ , ಅಷ್ಟೇ ಅಚ್ಚುಕಟ್ಟಾಗಿ ಮೂಡಿಬಂತು. ಅಬ್ಬಕ್ಕನ ಪಾತ್ರ ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಮೂಡಿಬಂತು.

Advertisement

ಐದನೇ ದಿನ ಸಂಜೀವ ಎಸ್‌.ಕೆ ಅವರ ಪೊರ್ಲು ನಾಟಕ ಅವರದೇ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು. ಕಲಾ ಶಿಲ್ಪ ತಂಡದವರು ಈ ನಾಟಕವನ್ನು ಪ್ರಸ್ತುತಪಡಿಸಿದರು. ಪ್ರೀತಿಯ ಸುತ್ತ ಬೆಸೆಯುವ ಕಥೆಯು ಸಸ್ಪೆನ್ಸ್‌ , ಥ್ರಿಲ್ಲರ್‌ ಸ್ವರೂಪದಲ್ಲಿ ಸಾಗುತ್ತಾ ಸಾಲು ಸಾಲು ಮಂದಿಯ ಕೊಲೆಯಲ್ಲಿ ಮುಕ್ತಾಯ ಕಾಣುತ್ತದೆ. ಒಂದಷ್ಟು ಶ್ರಮ ವಹಿಸಿದ್ದರೆ ನಾಟಕವನ್ನು ಇನ್ನಷ್ಟು ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಬಹುದಿತ್ತು ಎಂಬ ಮಾತು ಪ್ರೇಕ್ಷಕರದಾಗಿತ್ತು.

ಆರನೇ ದಿನ ಹಿರಿಯ ನಾಟಕಗಾರ ಕೆ.ವಿ.ಶೆಟ್ಟಿ ಅವರ ಗಗ್ಗರ ಪ್ರದರ್ಶನಗೊಂಡಿತು. ಸುರೇಶ್‌ ಶೆಟ್ಟಿ ಜೋಡುಕಲ್ಲು ಅವರ ನಿರ್ದೇಶನದಲ್ಲಿ ತುಳುವೆರೆ ಉಡಲು ತಂಡದವರು ಪ್ರಸ್ತುತ ಪಡಿಸಿದರು. ಕೌಟುಂಬಿಕ ಬದುಕಿನಲ್ಲಿ ಎದುರಾಗುವ ತಕರಾರು , ವ್ಯಾಜ್ಯಗಳು ತುಳುನಾಡಿನ ಭೂತಾರಾಧನೆಯ ನಂಬಿಕೆಯ ನೆರಳಿನಲ್ಲಿ ಪಡೆದುಕೊಳ್ಳುವ ತಿರುವು, ಭಯ ಭಕ್ತಿಯು ಮನೋಜ್ಞವಾಗಿ ಗಗ್ಗರ ನಾಟಕದಲ್ಲಿ ಮಾಡಿಬಂತು.

ಕೊನೆಯ ದಿನದಂದು ಹಿರಿಯ ನಾಟಕಕಾರ ಡಾ| ಸಂಜೀವ ದಂಡಕೇರಿ ಅವರ ಬಯ್ಯಮಲ್ಲಿಗೆ ನಾಟಕ ಪ್ರದರ್ಶನಗೊಂಡಿತು. ರಮೇಶ್‌ ರೈ ಕುಕ್ಕುವಳ್ಳಿ ಅವರ ನಿರ್ದೇಶನದಲ್ಲಿ ವಿಧಾತ್ರಿ ಕಲಾವಿದರು ತಂಡದವರು ಈ ನಾಟಕವನ್ನು ರಂಗಕ್ಕೆ ತಂದಿದ್ದರು. ಐವತ್ತನಾಲ್ಕು ವರ್ಷಗಳ ಹಿಂದೆ ರಚನೆಗೊಂಡ ಈ ಸಾಂಸರಿಕ ನಾಟಕ ಇಂದಿಗೂ ಜನಪ್ರಿಯನ್ನು ಉಳಿಸಿಕೊಂಡಿದೆ. ಚಿಕ್ಕಮ್ಮನ ದುಡ್ಡಿನ ಆಸೆಯಿಂದಾಗಿ ಮಕ್ಕಳು ಪಡುವ ಕಷ್ಟ , ಆ ಕಷ್ಟಕ್ಕೆ ಮುಂದೆ ದುಃಖಾಂತ್ಯವೇ ಪ್ರತಿಫ‌ಲವಾಗಿ ಲಭಿಸುವುದನ್ನು ಬಿಂಬಿಸುವ ಕಥೆಯು ಪ್ರೇಕ್ಷಕರನ್ನು ದುಃಖದ ಸಾಗರದಲ್ಲಿ ಮುಳುಗಿಸುತ್ತದೆ. ನಟರ ಪರಿಶ್ರಮ ನಾಟಕ ಚೆನ್ನಾಗಿ ಮೂಡಿ ಬರಲು ಕಾರಣವಾಗಿತ್ತು.

ಹಳೆ ತಲೆಮಾರಿನ ಕೊಂಡಿಯಾಗಿರುವ ಈ ಏಳು ನಾಟಕಗಾರರನ್ನು ಅವರ ನಾಟಕಗಳ ಪ್ರದರ್ಶನದ ವೇದಿಕೆಯಲ್ಲಿ ಗೌರವಿಸುವ ಮೂಲಕ ತುಳುವಿಗೆ ಅವರು ನೀಡಿದ ಕೊಡುಗೆಯನ್ನು ತುಳು ಅಕಾಡೆಮಿಯು ನೆನಪು ಮಾಡಿಕೊಂಡಿತ್ತು ಅನ್ನುವ ಸಾರ್ಥಕಭಾವ ಒಂದೆಡೆಯಾದರೆ ನಾಟಕಗಾರರ ಮನದಲ್ಲೂ ತೃಪ್ತಿಯ ಭಾವ ಮೂಡಿತ್ತು.

ತಾರಾನಾಥ್‌ ಗಟ್ಟಿ ಕಾಪಿಕಾಡ್‌

Advertisement

Udayavani is now on Telegram. Click here to join our channel and stay updated with the latest news.

Next