ತುಳು ರಂಗಭೂಮಿ ಮತ್ತು ಸಿನೆಮಾ ಅಂದಾಗ ಪಕ್ಕನೆ ಕೇಳಿಬರುವ ಹೆಸರು ದೇವದಾಸ್ ಕಾಪಿಕಾಡ್. ಸಿನೆಮಾದ ಮೂಲಕ ಅವರು ಕೋಸ್ಟಲ್ವುಡ್‌ಗೆ ಹೊಸ ಚೈತನ್ಯ ನೀಡಿದವರು. ಈಗ ಮತ್ತೂಮ್ಮೆ ‘ಜಬರ್ದಸ್ತ್ ಶಂಕರ’ನ ರೂಪದಲ್ಲಿ ಕಾಪಿಕಾಡ್ ಕೋಸ್ಟಲ್ವುಡ್‌ನಲ್ಲಿ ಹೊಸ ಶಕೆ ಶುರು ಮಾಡಲು ಹೊರಟಿದ್ದಾರೆ.
‘ಏರಾ ಉಲ್ಲೆರ್‌ಗೆ’ ಸಿನೆಮಾದ ಬಳಿಕ ಕಾಪಿಕಾಡ್ ಮುಂದೇನು ಮಾಡಲಿದ್ದಾರೆ ಎಂಬ ಪ್ರಶ್ನೆ ಎದುರಾಗಿತ್ತು. ಕನ್ನಡ ಸಿನೆಮಾ ಮಾಡಲಿದ್ದಾರೆ ಎಂಬ ಮಾತಿತ್ತಾದರೂ, ‘ಜಬರ್ದಸ್ತ್ ಶಂಕರ’ ಮಾಡುವ ಮೂಲಕ ಕಾಪಿಕಾಡ್ ಇದೀಗ ಕೋಸ್ಟಲ್ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದಾರೆ.
ಸದ್ಯ ಶೂಟಿಂಗ್ ಎಲ್ಲ ಪೂರ್ಣಗೊಳಿಸಿದ ಜಬರ್ದಸ್ತ್ ಶಂಕರ್ ಸಿನೆಮಾದ ಕೊನೆಯ ಹಂತದ ಸಿದ್ಧತೆ ನಡೆಯುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಹಾಡುಗಳ ರೆಕಾರ್ಡಿಂಗ್ ನಡೆದಿದ್ದು, ಕಾಪಿಕಾಡ್ ಬೆಂಗಳೂರು ಸ್ಟುಡಿಯೋದಲ್ಲಿ ಹಾಡು ಹಾಡಿದ್ದಾರೆ. ದೇವದಾಸ್ ಕಾಪಿಕಾಡ್ ಅವರೇ ಬರೆದ ‘ಶಿವನಾಮದಾ.. ಮೈಮೆನೇ..’ ಹಾಡನ್ನು ಅವರೇ ಹಾಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.
ಅರ್ಜುನ್ ಈ ಹಾಡಿನ ಮೂಲಕವೇ ಎಂಟ್ರಿ ಸೀನ್ ಇರಲಿದೆ. ಹೀಗಾಗಿಯೇ ಈ ಹಾಡಿಗೆ ವಿಶೇಷ ಆದ್ಯತೆ ನೀಡಲಾಗಿತ್ತು. ಮಣಿಕಾಂತ್ ಮತ್ತು ಸುಪ್ರಿಯಾ ಅವರು ಹಾಡಿದ ‘ವಾವ್.. ವಾವ್..’ ಎಂಬ ಹಾಡು ಕೂಡ ರೆಕಾರ್ಡಿಂಗ್ ಮುಗಿಸಲಾಗಿದೆ.
ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್, ರಾಜೇಶ್ ಕುಡ್ಲ ನಿರ್ಮಾಣದ ಈ ಸಿನೆಮಾದಲ್ಲಿ ಅರ್ಜುನ್ ಕಾಪಿಕಾಡ್ ನಾಯಕನಟ. ಸಿನೆಮಾ ನಾಯಕ ಕೇಂದ್ರೀಕೃತವಾಗಿರುವುದು 5 ಫೈಟ್ ದೃಶ್ಯಗಳು ಇದಕ್ಕಾಗಿ ನಡೆಸಲಾಗಿದೆ. ಏರಾ ಉಲ್ಲೆರ್‌ಗೆ ಸಿನೆಮಾದಲ್ಲಿ ಇರುವ ಎಲ್ಲ ಕಲಾವಿದರು ಇದರಲ್ಲಿದ್ದಾರೆ. ಸಾಯಿಕೃಷ್ಣ, ಸತೀಶ್ ಬಂದಳೆ, ಸುನೀಲ್ ನೆಲ್ಲಿಗುಡ್ಡೆ, ಲಕ್ಷ್ಮಣ್ ಕುಮಾರ್ ಮಲ್ಲೂರು, ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ಸರೋಜಿನಿ ಶೆಟ್ಟಿ ಸಹಿತ ಹಲವು ಕಲಾವಿದರು ಸಿನೆಮಾದಲ್ಲಿದ್ದಾರೆ. ಕೆಮರಾದಲ್ಲಿ ಸಿದ್ದು, ಸಾಹಸವನ್ನು ಮಾಸ್ ಮಾದ ನಡೆಸಿದ್ದಾರೆ.