ಆಟಿ ತಿಂಗಳು ಮೊನ್ನೆಯಷ್ಟೇ ಮುಗಿದಿದೆ. ಆಟಿಕೂಟಗಳೆಲ್ಲ ಮುಗಿದು ಈಗ ಸೋಣ ಬಂದಿದೆ. ಆದರೆ, ‘ಆಟಿಡೊಂಜಿ ದಿನ’ ಇನ್ನು ಸ್ವಲ್ಪ ದಿನದೊಳಗೆ ಮತ್ತೂಮ್ಮೆ ಬರಲಿದೆ. ಈ ಸಿನೆಮಾದ ಚಿತ್ರೀಕರಣವು ಚುರುಕಿನಿಂದ ನಡೆಯುತ್ತಿದ್ದ ಸಮಯದಲ್ಲಿ ನಿರ್ದೇಶಕ ಹಾರಿಸ್ ಕೊಣಾಜೆಕಲ್ಲು ಅವರು ಅಪಘಾತದಲ್ಲಿ ಮೃತರಾದರು. ಎಳೆಯ ಪ್ರಾಯದಲ್ಲಿ ನಿರ್ದೇಶಕನಾಗುವ ಉತ್ಸಾಹದಲ್ಲಿ ಅವರು ವಿರಾಮವಿಲ್ಲದೆ ದುಡಿಯುತ್ತಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದರು. ಅಂಥ ಒಂದು ಓಡಾಟದಲ್ಲಿರುವಾಗಲೇ ಅವರು ಪ್ರಯಾಣಿಸುತ್ತಿದ್ದ ಆಮ್ನಿ ಕಾರು ಮೂಡುಬಿದಿರೆ ಸಮೀಪ ಅಪಘಾತಕ್ಕೀಡಾಗಿ ಹಾರಿಸ್ ಕೊನೆಯುಸಿರೆಳೆದಿದ್ದರು.
ಇವರ ಸಾವಿನ ಸುದ್ದಿಯಿಂದಾಗಿ ಮುಂದೇನು? ಎಂಬ ಪ್ರಶ್ನೆ ಚಿತ್ರತಂಡಕ್ಕೆ ಮೂಡಿತ್ತು. ಆ ಹೊತ್ತಿಗೆ ಆಟಿಡೊಂಜಿ ದಿನ ಸಿನೆಮಾದ ಶೇ.80ರಷ್ಟು ಶೂಟಿಂಗ್ ಮುಗಿದಿತ್ತು. ಬಳಿಕ ಇಡೀ ಚಿತ್ರತಂಡವೇ ಜವಾಬ್ದಾರಿ ವಹಿಸಿಕೊಂಡು ಸಿನೆಮಾ ಶೂಟಿಂಗ್ ಮಾಡಲು ನಿರ್ಧರಿಸಲಾಯಿತು.
ಬಳಿಕ ಚಿತ್ರತಂಡ ಶೂಟಿಂಗ್ ಮರು ಆರಂಭಿಸಲಾಗಿತ್ತು. ಎರಡು ಹಾಡು, ಮೂರು ಫೈಟ್ ದೃಶ್ಯಗಳ ಚಿತ್ರೀಕರಣ ಬಾಕಿಯಿತ್ತು. ಇತ್ತೀಚೆಗೆ ಸಿನೆಮಾದ ಎರಡನೇ ಹಂತದ ಶೂಟಿಂಗ್ ಪೂರ್ಣಗೊಳಿಸಿದೆ. ಆಕಾಶ್ ಹಾಸನ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಹಾಗೂ ಸಹನಿರ್ದೇಶಕರಾಗಿರುವ ಈ ಸಿನೆಮಾದಲ್ಲಿ ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಪೃಥ್ವಿ ಅಂಬರ್, ಸತೀಶ್ ಬಂದಲೆ, ನಿರೀಕ್ಷಾ ಶೆಟ್ಟಿ, ಸೂರಜ್ ಸಾಲ್ಯಾನ್, ಪೃಥ್ವಿರಾಜ್ ಮೂಡುಬಿದಿರೆ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.