ಭಾರೀ ಮಳೆಯ ಕಾರಣದಿಂದ ಕೋಸ್ಟಲ್ವುಡ್ ಕೂಡ ಮರುಗಿದ್ದು, ತುಳು ಸಿನೆಮಾದ ಆಡಿಯೋ ರಿಲೀಸ್ ಅನ್ನು ಮುಂದೂಡಿದೆ. ರಾಜ್ಯದಲ್ಲಿ ಹಾಗೂ ದ.ಕ. ಜಿಲ್ಲೆಯ ವಿವಿಧೆಡೆ ನೆರೆ ನೀರು ವ್ಯಾಪಿಸಿ ನೂರಾರು ಜನರು ಸಂಕಷ್ಟ ಅನುಭವಿಸುವ ದೃಶ್ಯದಿಂದ ಬೇಸರಗೊಂಡ ಸಿನೆಮಾ ತಂಡ ಆಡಿಯೋ ರಿಲೀಸ್ ದಿನಾಂಕವನ್ನೇ ಮುಂದೂಡಿದೆ. ಜಿಲ್ಲೆಯಲ್ಲಿ ಮಳೆ ಹಾನಿಯ ನೋವು ಇರುವಾಗ ನಾವು ಸಂಭ್ರಮಿಸುವುದು ಸರಿಯಲ್ಲ ಎಂಬ ಕಾರಣದಿಂದ ಆಡಿಯೋ ರಿಲೀಸ್ ದಿನಾಂಕವನ್ನು ಆ.26ಕ್ಕೆ ಮುಂದೂಡಿದೆ.ವಿಸ್ಮಯ ವಿನಾಯಕ್ ಚೊಚ್ಚಲ ನಿರ್ದೇಶನದ ಈ ಸಿನೆಮಾ ಕೋಸ್ಟಲ್ವುಡ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ‘ಜಾಗೆ ರಡ್ಡ್ ಎಕ್ರೆ.. ಬೈದೆರ್ ಲಪ್ಪೆರೆ.. ಜಾಗೆದಕುಲು ಬನ್ನಗ ಮಾತ ಒತ್ತರೆ’ ಎಂಬ ಟೈಟಲ್ ಸಾಂಗ್ ಮೂಲಕ ಆರಂಭವಾಗಲಿರುವ ಈ ಸಿನೆಮಾದ ಬಗ್ಗೆ ಕೋಸ್ಟಲ್ವುಡ್ ಅಂಗಳದಲ್ಲಿ ಭಾರೀ ನಿರೀಕ್ಷೆಯೂ ಶುರುವಾಗಿದೆ. ಶಶಿರಾಜ್ ರಾವ್ ಕಾವೂರು ಬರೆದಿರುವ ‘ಪಗೆಲ್ ಕರೀಂಡ್… ಮುಗಲ್ ಕಬೀಂಡ್..’ ಹಾಗೂ ‘ಇನಿ ದಾನೆ ಕುಸ್ಕೊಂದುಂಡು’ ಹಾಡುಗಳ ರಿಲೀಸ್ ನಾಡಿದ್ದು ನಡೆಯಲಿದೆ. ಇದೇ ಮೊದಲ ಬಾರಿಗೆ ಪೃಥ್ವಿ ಅಂಬರ್ ಈ ಸಿನೆಮಾದಲ್ಲಿ ಹಾಡಿದ್ದಾರೆ. ದೀಪಕ್ ಕೋಡಿಕಲ್ ಕೂಡ ಸ್ವರ ನೀಡಿದ್ದಾರೆ. ಕಿಶೋರ್ ಕುಮಾರ್ ಶೆಟ್ಟಿ ಸಂಗೀತ ಒದಗಿಸಿದ್ದಾರೆ. ಅರವಿಂದ ಬೋಳಾರ್, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಮಂಜು ರೈ ಮೂಳೂರು ಸೇರಿದಂತೆ ಹಲವು ಖ್ಯಾತನಾಮರು ಈ ಸಿನೆಮಾದಲ್ಲಿದ್ದಾರೆ. ತುಳುನಾಡಿನ ಇತರ ಕಲಾವಿದರನ್ನು ಇಟ್ಟುಕೊಂಡು ಮಾಡಿರುವ ಈ ಸಿನೆಮಾ ಕೆಲವೇ ದಿನಗಳಲ್ಲಿ ರಿಲೀಸ್ ಕಾಣಲಿದೆ.