Advertisement

ಉತ್ತರ ಕರ್ನಾಟಕ ಕಾರ್ಮಿಕರ ಮಕ್ಕಳ ತುಳು ಪ್ರೇಮ; ಲಿಪಿ ಕಲಿಕೆಯ ಸರ್ಟಿಫಿಕೆಟ್‌ ಗರಿ!

02:56 PM Feb 13, 2023 | Team Udayavani |

ಕಾವೂರು: ತುಳು ಭಾಷೆಗೆ ಸ್ಥಾನ ಮಾನ ನೀಡುವ ನಿಟ್ಟಿನಲ್ಲಿ ಸತತ ಹೋರಾಟ ನಡೆಯುತ್ತಿದ್ದರೆ, ಇತ್ತ ನಮ್ಮ ತುಳುವರಲ್ಲದ ಕರ್ನಾಟಕದ ಹೊರ ಜಿಲ್ಲೆಯ ವಿದ್ಯಾರ್ಥಿಗಳು ಇಂದು ತುಳು ಪ್ರೇಮವನ್ನು ತುಳು ಲಿಪಿ ಕಲಿಯುವ ಮೂಲಕ ತೋರಿಸಿ ಇತರರಿಗೆ ಮಾದರಿಯಾಗಿದ್ದಾರೆ.

Advertisement

ಕಾವೂರಿನ ಮುಲ್ಲಕಾಡು ಶಾಲೆಯ ಬರೋಬ್ಬರಿ 20 ಮಕ್ಕಳು ತುಳು ಲಿಪಿ ಕಲಿತಿದ್ದಾರೆ. ಅನ್ಯ ಜಿಲ್ಲೆಯ ಕಾರ್ಮಿಕರು ಹೊಟ್ಟೆಪಾಡಿಗಾಗಿ ಜಿಲ್ಲೆಗೆ ಬಂದು ಕೂಲಿ ಕೆಲಸದಲ್ಲಿ ನಿರತರಾದರೆ ಇಲ್ಲಿನ ಶಾಲಾ ಶಿಕ್ಷಕರು, ಶಿಕ್ಷಣ ಆಧಿಕಾರಿಗಳ ಸತತ ಮನವೊಲಿಕೆಗೆ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡುತ್ತಿದ್ದಾರೆ. ಇದೀಗ ಶಿಕ್ಷಣದ ಪ್ರಾಮುಖ್ಯತೆಯನ್ನೂ ಅರಿತಿದ್ದಾರೆ. ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಜತೆ ಜತೆಗೆ ತಮ್ಮ ಬಿಡುವಿನ ಅವಧಿಯಲ್ಲಿ ತುಳು ಸಾಹಿತ್ಯ ಅಕಾಡೆಮಿ, ಮುಲ್ಲಕಾಡು ಫ್ರೆಂಡ್ಸ್‌ ಸರ್ಕಲ್‌, ಸ್ಥಳೀಯ ತುಳು ಸಂಘಟನೆಗಳು ಆಯೋಜಿಸಿದ ತುಳು ಕಲ್ಪುಲೆ ಶಿಬಿರದಲ್ಲಿ ಆಸಕ್ತಿಯಿಂದ ಭಾಗವಹಿಸಿ ಅಕಾಡೆಮಿಯ ಪ್ರಮಾಣ ಪತ್ರ ಪಡೆದು ಸೈ ಎನಿಸಿಕೊಂಡಿದ್ದಾರೆ.

ಇದರಲ್ಲಿ ವಿದ್ಯಾರ್ಥಿನಿಯರೂ ಹಿಂದೆ ಬಿದ್ದಿಲ್ಲ. ಶಿಬಿರಕ್ಕೆ ಆಸಕ್ತಿಯಿಂದ ಬಂದು ಕಲಿತು ತಮ್ಮ ತುಳು ಪ್ರೇಮದ ಜತೆಗೆ ಹೆಚ್ಚುವರಿ ಒಂದು ಭಾಷೆಯನ್ನು ಕಲಿತ ಕೀರ್ತಿಗೆ ಪಾತ್ರರಾಗಿದ್ದರೆ.ಈ ಶಾಲೆಯಲ್ಲಿ 1ರಿಂದ 10ನೇ ತರಗತಿ ವರೆಗೆ 310 ವಿದ್ಯಾರ್ಥಿಗಳಲ್ಲಿ 210 ಮಂದಿ ಅನ್ಯ ಜಿಲ್ಲೆಯ ಮಕ್ಕಳು. ಒಟ್ಟು 20 ಮಂದಿ ಶಿಬಿರದಲ್ಲಿ ಭಾಗವಹಿಸಿ ತುಳು ಭಾಷೆಯ, ಲಿಪಿಯ ಮಹತ್ವ ಅರಿತು ಕಲಿತು ಸೈ ಎನಿಸಿಕೊಂಡಿದ್ದಾರೆ. ತುಳುವಲ್ಲಿ ಸಂಹವನ ನಡೆಸುತ್ತಿದ್ದ ಮಕ್ಕಳಿಗೆ ಕಲಿಕೆಯ ವೇಳೆ ಹೆಚ್ಚಿನ ಕಷ್ಟವಾಗದೆ ಸುಲಭವಾಗಿ ಕಲಿಯಬಹುದು ಎಂಬುದನ್ನು ತೋರಿಸಿದ್ದಾರೆ.

ನಂದೀಶ್‌, ಶರತ್‌, ವಿನಾಯಕ, ನಿತೇಶ್‌, ಸ್ವಪ್ನಾ, ಸುನೀಲ್‌, ಪರುಶರಾಮ್‌, ಧನುಷ್‌, ಗಣೇಶ್‌, ಸುಜಾತಾ,ಪ್ರವೀಣ್‌, ಅರ್ಪಿತಾ, ಅರ್ಚನಾ, ಶ್ರೀದೇವಿ, ಕಾಂಚನ, ಕಾರ್ತಿಕ್‌, ವಿದ್ಯಾ, ಸಂಗಮೇಶ ತುಳು ಲಿಪಿ ಕಲಿತ ಹೆಮ್ಮೆಯ ವಿದ್ಯಾರ್ಥಿಗಳು. ತುಳು ಲಿಪಿ ಕಲಿತು ತುಳುವಿನ ಕಂಪನ್ನು ಅವಿಭಜಿತ ದ.ಕ. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಲ್ಲೂ ಹರಡಲು ಹಲವಾರು ಮಂದಿ ಕಾರಣಕರ್ತರಾಗಿದ್ದಾರೆ.

ತುಳು ಸಾಹಿತ್ಯ ಅಕಾಡೆಮಿಯ ಪ್ರೋತ್ಸಾಹದಲ್ಲಿ, ಜೈ ತುಳುನಾಡು ಸಂಘಟನೆಯ ಶ್ರಮ, ಶಾಲೆಯ ಮುಖ್ಯೋಪಾಧ್ಯಾಯರಾದ ಉಸ್ಮಾನ್‌, ವೇಣುಗೋಪಾಲ್‌, ಸಹಕಾರ ನೀಡಿ ಗಣೇಶ್‌ ಆಳ್ವ, ಮ್ಯಾಪ್‌, ತುಳು ಲಿಪಿ ಅಕ್ಷರ ಟೇಬಲ್‌ ಒದಗಿಸಿದ ತುಳುವೆರ ಕುಡ್ಲದ ಪ್ರತೀಕ್‌ ಬಂಗೇರ ಈ ಸಾಧ ನೆಯ ಹಿಂದಿನ ಪ್ರಮುಖರು.

Advertisement

ಹೆಚ್ಚುತ್ತಿದೆ ತುಳು ಕಲಿಕೆಯ ಆಸಕ್ತಿ
ರಾಜ್ಯ ಸರಕಾರ ತುಳುವಿಗೆ ಮಾನ್ಯತೆ ನೀಡಲು ಸಮಿತಿ ರಚಿಸುವ ಮೊದಲೇ ತುಳು ಹೋರಾಟದ ಜತೆಗೆ ಜತೆಗೆ ತುಳು ಲಿಪಿ ಕಲಿತು ಹೊರ ಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಾ ಬಂದಿದ್ದು, ತುಳು ಲಿಪಿ ಕಲಿಕೆ ಕಡ್ಡಾಯವಾದಲ್ಲಿ ಸರಕಾರಿ ಶಾಲೆಯ ಮಕ್ಕಳ ಸಹಿತ ಲಕ್ಷಾಂತರ ಮಕ್ಕಳು ತುಳು ಲಿಪಿಯಲ್ಲಿ ಸಾಧನೆ ಮಾಡುವುದರಲ್ಲಿ ಸಂಶಯವಿಲ್ಲ.

ಶ್ರಮಕ್ಕೆ ಸಿಕ್ಕಿದ ಉಡುಗೊರೆ ತುಳು ಕಲಿಕೆಗೆ ಭಾಷಾ ಚೌಕಟ್ಟು ಇಲ್ಲ. ತುಳುವರು ಮಾತ್ರವಲ್ಲದೆ ಇಲ್ಲಿ ಕೆಲಸಕ್ಕಾಗಿ ಬಂದ ಕಾರ್ಮಿಕ ಶಕ್ತಿಯ ಮಕ್ಕಳೂ ಕೂಡ ಕಲಿತು ತುಳುವನ್ನು ಹೊರ ಜಿಲ್ಲೆಗೆ ಪಸರಿಸುವ ರಾಯಭಾರಿ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮಅಕಾಡೆಮಿ, ತುಳು ಸಂಘಟನೆಗಳ ಶ್ರಮಕ್ಕೆ ಸಿಕ್ಕಿದ ಉಡುಗೋರೆ ಎಂದು ಹೇಳ ಬಹುದು. ಜೈ ತುಳು ನಾಡು ಸಂಘಟನೆ ಸಹಿತ ವಿವಿಧ ನಮ್ಮ ನೆಲದ ಸಂಘಗಳ ಕೊಡುಗೆ ಅಪಾರವಾಗಿದೆ. ಇದೀಗ ಸರಕಾರವೂ ತುಳುವಿಗೆ ಮಾನ್ಯತೆ ನೀಡುವಂತೆ ಕ್ರಮ ಜರಗಿಸುತ್ತಿರುವುದು ತುಳು ಭಾಷೆಯ ಪ್ರಾಮುಖ್ಯವನ್ನು ತೋರಿಸುತ್ತಿದೆ.
ದಯಾನಂದ ಕತ್ತಲಸಾರ್‌, ನಿಕಟಪೂರ್ವ ಅಧ್ಯಕ್ಷರು, ರಾಜ್ಯ ತುಳು ಸಾಹಿತ್ಯ ಅಕಾಡೆಮಿ

Advertisement

Udayavani is now on Telegram. Click here to join our channel and stay updated with the latest news.

Next