Advertisement

ತುಳುಸಂಸ್ಕೃತಿ- ಭಾಷಾ ಜಾಗೃತಿ: ಜಾರ್ಜಿಯಾದಲ್ಲಿ ಅಧಿಕೃತ ಸರಕಾರಿ ಘೋಷಣೆ

08:55 AM Mar 30, 2018 | Karthik A |

ಮಂಗಳೂರು: ಎತ್ತಣ ಅಮೆರಿಕ… ಎತ್ತಣ ತುಳು ಭಾಷೆ… ಏನೀ ಸ್ನೇಹ- ಸಂಬಂಧ! ತುಳುನಾಡಿನ ಭಾಷೆ ಮತ್ತು ಸಂಸ್ಕೃತಿಯ ಸಹಸ್ರಮಾನಗಳ ಇತಿಹಾಸ, ಮಹತ್ವ, ಚಾರಿತ್ರಿಕ ಹಿನ್ನೆಲೆಗಳ ಬಗ್ಗೆ ಅಮೆರಿಕದಲ್ಲಿ ನೆಲೆಸಿರುವ ಓರ್ವ ತುಳುವ ನೀಡಿದ ದಾಖಲೆಗಳಿಂದ ಪ್ರಭಾವಿತವಾದ ಅಮೆರಿಕದ ಜಾರ್ಜಿಯಾ ರಾಜ್ಯ ಸರಕಾರವು ತುಳು ಭಾಷಾ ಜಾಗೃತಿ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಾರ್ಜಿಯಾ ರಾಜ್ಯಪಾಲರಾಗಿರುವ ರಿಪಬ್ಲಿಕನ್‌ ಪಕ್ಷದ ನ್ಯಾಥನ್‌ ಡೀಲ್‌ ಅವರು ಮಾ. 25-31ರ ವಾರವನ್ನು ‘ತುಳು ಭಾಷೆ ಮತ್ತು ಸಂಸ್ಕೃತಿ ಸಪ್ತಾಹ’ವೆಂದು ಜಾರ್ಜಿಯಾ ರಾಜ್ಯಾದ್ಯಂತ ಅಧಿಕೃತವಾಗಿ ಘೋಷಿಸಿದ್ದಾರೆ.

Advertisement


ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ತುಳುವ ಪ್ರಶಾಂತ್‌ರಾಮ್‌ ಕೊಟ್ಟಾರಿ ಇದರ ರೂವಾರಿ. ತುಳು ಭಾಷೆ, ತುಳುನಾಡಿನ ಇತಿಹಾಸದ ಬಗ್ಗೆ ಲಭ್ಯವಿರುವ ಮಾಹಿತಿ ಕ್ರೋಡೀಕರಿಸಿ ಕಳೆದ ವರ್ಷ ಜಾರ್ಜಿಯಾ ರಾಜ್ಯದ ಸೆನೆಟ್‌ ಹೌಸ್‌ ಆಫ್‌ ರೆಪ್ರಸೆಂಟೇಟಿವ್ಸ್‌ (ವಿಧಾನ ಸಭೆ) ಮುಂದೆ ಅವರು ತಮ್ಮ ಅಧ್ಯಯನದ ಫಲಿತಾಂಶಗಳನ್ನು ಪ್ರಸ್ತುತ ಪಡಿಸಿದ್ದರು. ವಿಶ್ವದಲ್ಲಿ ವಿಶೇಷವಾದ ಭಾಷೆಗಳ ಬೆಳವಣಿಗೆಗೆ ಒತ್ತು ಕೊಡುತ್ತಿರುವ ಅಮೆರಿಕ ಸರಕಾರದ ಉದ್ದೇಶಕ್ಕನುಗುಣವಾಗಿ ಜಾರ್ಜಿಯಾ ರಾಜ್ಯದ ಸೆನೆಟ್‌ ಇವರ ಅಧ್ಯಯನ ಫಲಿತಾಂಶಕ್ಕೆ ಅನುಮೋದನೆ ನೀಡಿ ತುಳು ಭಾಷೆಗೆ ಈ ರೀತಿಯಾಗಿ ಪ್ರೋತ್ಸಾಹ ಕೊಟ್ಟಿದೆ.

ಪ್ರಶಸ್ತಿ ಪುರಸ್ಕೃತ
ಜಾನಪದ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪ್ರಖ್ಯಾತ ಅಮೆರಿಕನ್‌ ಫೋಕ್‌ಲೋರ್‌ ಸೊಸೈಟಿಯ ಗೌರವ ಸದಸ್ಯರಾಗಿರುವ ಪ್ರಶಾಂತ್‌ರಾಮ್‌ ಕೊಟ್ಟಾರಿ ಅವರು 2015ನೇ ಸಾಲಿನ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರೂ ಹೌದು. ಕಂಪ್ಯೂಟರ್‌ ಎಂಜಿನಿಯರಿಂಗ್‌ (ಬಿ.ಇ.) ಪದವಿ ಪಡೆದಿರುವ ಅವರು ಮಂಗಳೂರು ಇನ್ಫೋಸಿಸ್‌ ಉದ್ಯೋಗಿಯಾಗಿದ್ದು ಕಳೆದ ಐದು ವರ್ಷಗಳಿಂದ ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸ್ವದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ತುಳುನಾಡಿನ ಅಣ್ಣ-ತಮ್ಮ ಅರಸು (ದೆಯ್ಯೊಂಗುಳು) ದೈವಗಳ ಬಗ್ಗೆ ಜಾನಪದೀಯ ಅಧ್ಯಯನ ನಡೆಸಿ, ನಾಡಿನ ಹಿರಿಯ ಜಾನಪದ ವಿದ್ವಾಂಸರ, ಸಂಶೋಧಕರ ಮಾರ್ಗದರ್ಶನದಲ್ಲಿ ‘ಅತ್ತಾವರ ದೆಯ್ಯೊಂಗುಳು’ ಎಂಬ ಪುಸ್ತಕ ರಚಿಸಿದ್ದಾರೆ. ವೃತ್ತಿ ನಿಮಿತ್ತ ವಿದೇಶದಲ್ಲಿದ್ದರೂ ಅಮೆರಿಕದ (ಮೂಲನಿವಾಸಿ ರೆಡ್‌ ಇಂಡಿಯನ್ಸ್‌) ಜಾನಪದದ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಹವ್ಯಾಸಿ ಅಧ್ಯಯನ ನಿರತರಾಗಿದ್ದಾರೆ. ಅಮೆರಿಕನ್ನರೂ ಸೇರಿದಂತೆ ಇತರ ವಿದೇಶೀಯರಿಗಾಗಿ ಕ್ಯಾಲಿಫೋರ್ನಿಯಾ, ಜಾರ್ಜಿಯಾ, ಟೆಕ್ಸಾಸ್‌, ಫ್ಲೋರಿಡಾ, ಸೌತ್‌ಕೆರೋಲಿನಾ, ವರ್ಜೀನಿಯಾಗಳಲ್ಲಿ ಅವರು ಈಗಾಗಲೇ 30ಕ್ಕೂ ಹೆಚ್ಚಿನ ತುಳು ಭಾಷಾ ಪರಿಚಯ- ಕಲಿಕೆ ಶಿಬಿರಗಳನ್ನು ನಡೆಸಿದ್ದಾರೆ.

ವಿಶೇಷವೇನೆಂದರೆ ಜಾರ್ಜಿಯಾದಲ್ಲಿ ಈ ಮೊದಲು ಯಾವುದೇ ದ್ರಾವಿಡ ಭಾಷೆಗಳಿಗೆ ಈ ರೀತಿಯ ಸ್ಥಾನಮಾನ ಸಿಕ್ಕಿಲ್ಲ. ತುಳುನಾಡಿನ ಮೂಲಭಾಷೆ ಪ್ರಪ್ರಥಮವಾಗಿ ಈ ಹೆಗ್ಗಳಿಕೆಗೆ ಪಾತ್ರವಾಗಿರುವುದು ಹೆಮ್ಮೆಯ ವಿಚಾರ. ಭಾರತದ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸಬೇಕೆಂದು ನಮ್ಮಲ್ಲಿ ನಡೆಯುತ್ತಿರುವ ಅವಿರತ ಪ್ರಯತ್ನದ ಸಂದರ್ಭದಲ್ಲಿ ದೂರದ ಅಮೆರಿಕದಲ್ಲಿ ನಡೆಯುತ್ತಿರುವ ಈ ಸಂಗತಿ ಧನಾತ್ಮಕ ಬೆಳವಣಿಗೆಯಂತೂ ಹೌದು.

Advertisement

— ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next