Advertisement

“ತುಳು ಭಾಷೆ, ಸಂಸ್ಕೃತಿ ಉಳಿವಿಗೆ ನಾಟಕೋತ್ಸವ ಸಹಕಾರಿ’

01:00 AM Jan 20, 2019 | Team Udayavani |

ಕಟಪಾಡಿ: ತುಳು ಭಾಷೆ,  ಸಂಸ್ಕೃತಿಯ ಉಳಿವಿಗೆ ಈ ತುಳು ನಾಟಕೋತ್ಸವ ಸಹಕಾರಿ. ಉತ್ತಮ ನಾಟಕಗಳಿಗೆ ಪ್ರೇಕ್ಷಕ ವರ್ಗ ಹೆಚ್ಚು ಪ್ರೋತ್ಸಾಹ ನೀಡುತ್ತದೆ.  ಮೌಲ್ಯಯುತ ನಾಟಕಗಳು ಹೆಚ್ಚು ಪ್ರದರ್ಶನಗೊಳ್ಳಬೇಕಿದೆ ಎಂದು ಸಮಾಜ ಸೇವಕ ಯು. ವಿಶ್ವನಾಥ ಶೆಣೈ ಉಡುಪಿ ಹೇಳಿದರು.
ಶುಕ್ರವಾರ ಕಟಪಾಡಿಯ ಎಸ್‌.ವಿ.ಎಸ್‌.  ಪ್ರೌಢಶಾಲೆಯ  ಬಯಲು ರಂಗಮಂಟಪದಲ್ಲಿ  ಪ್ರೇರಣಾ ಟ್ರಸ್ಟ್‌ ಕಟಪಾಡಿ ಇದರ ನೇತೃತ್ವದಲ್ಲಿ ಜ.18ರಿಂದ ಜ.20ರ ಪರ್ಯಂತ ಮೂರು ದಿನಗಳ ಕಾಲ ಪ್ರದರ್ಶನಗೊಳ್ಳಲಿರುವ  ತುಳುನಾಟಕ ಪ್ರದರ್ಶನ, ರಂಜನೋತ್ಸವ-2019ಕ್ಕೆ ಚಾಲನೆ ನೀಡಿ  ಅವರು ಮಾತನಾಡಿದರು.

Advertisement

ಕಾಲಘಟ್ಟಕ್ಕನುಗುಣವಾಗಿ ಬದಲಾವಣೆ ಗಳು ಕಂಡು ಬಂದರೂ, ನಾಟಕ ಎಂಬುದು ಶೂನ್ಯ ಸೃಷ್ಟಿಯಲ್ಲ. ನಮ್ಮ ನಡುವೆ ನಡೆಯುವ ಘಟನೆಗಳನ್ನಾಧರಿಸಿ ಪ್ರಸ್ತುತಪಡಿಸುವ ನಾಟಕ ಮಾಧ್ಯಮದ ಮೂಲಕ  ಮನುಷ್ಯನ ಅಂತರಂಗ ವನ್ನು ಬೆಳಗುವ ಕಾರ್ಯ ರಂಗಭೂಮಿಯಿಂದಾಗುತ್ತದೆ ಎಂದರು.

ತುಳು ಉಳಿವಿಗೆ  ನಾಟಕ ಕಾರಣ
ಮುಖ್ಯ ಅತಿಥಿಯಾಗಿದ್ದ ಸುರೇಶ್‌ ಶೆಟ್ಟಿ ಗುರ್ಮೆ ಮಾತನಾಡಿ, ನಾಟಕ ಎಂಬುದು ಕಲಾವಿದರ ತಪಸ್ಸು. ನಿರಂತರ ಸಿದ್ಧಿ ಸಾಧನೆಯ ಮೂಲಕ ಲಕ್ಷಾಂತರ ಪ್ರೇಕ್ಷಕರಿಗೆ ಮುದ ನೀಡುವ ಮಾಧ್ಯಮ. ತುಳುವಿನ ಉಳಿವಿಗೂ ನಾಟಕ ಕಾರಣವಾಗಿದೆ. ಪರಿವರ್ತನೆಯ ಕಾಲ ಘಟ್ಟದಲ್ಲಿ ಮಾನಸಿಕ ಪರಿವರ್ತನೆಗಾಗಿ ಮಕ್ಕಳನ್ನು  ನಾವು ಮೌಲ್ಯಯುತ ನಾಟಕ ಪ್ರದರ್ಶನಗಳಿಗೆ ಕರೆ ತರಬೇಕಾದ ತೀರಾ ಅವಶ್ಯಕತೆ ಇದೆ. ನಮ್ಮ ಮಕ್ಕಳಿಗೆ ನಾವು ಸಂಸ್ಕಾರ, ಸಂಸ್ಕೃತಿ ಕಲಿಸಿ ಅದನ್ನು ಅಳವಡಿಸಿಕೊಂಡಲ್ಲಿ ಮಾತ್ರ ಅವರು ಶ್ರೇಷ್ಠ ವ್ಯಕ್ತಿಯಾಗಬಲ್ಲರು ಎಂದರು.

ಕಲಾತ್ಮಕ ನಾಟಕಕ್ಕೆ ಹೆಚ್ಚು  ಪ್ರೋತ್ಸಾಹ
ಅಧ್ಯಕ್ಷತೆ ವಹಿಸಿದ್ದ ಕಟಪಾಡಿ ರೋಟರಿ ಕ್ಲಬ್‌ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಮಾತನಾಡಿ, ಬದಲಾವಣೆ ಜಗದ ನಿಯಮ. ಅದಕ್ಕೆ ಹೊಂದಿಕೊಂಡು ಜನರ ಅಭಿಲಾಷೆ, ಅಭಿರುಚಿ ಸಹಜವಾಗಿ ಬದಲಾಗುತ್ತದೆ. ಆದರೂ ವಿವಿಧ ಆಯಾಮಗಳ ನಾಟಕಗಳು ಇದ್ದರೂ ಸದಭಿರುಚಿಯ ಕಲಾತ್ಮಕ ನಾಟಕ ವೀಕ್ಷಣೆಯ ಮೂಲಕ ಪ್ರೋತ್ಸಾಹ ನೀಡಬಲ್ಲರು ಎಂದರು.

ತುಳು ಕೂಟದ ಅಧ್ಯಕ್ಷ ವಿ.ಜಿ. ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ತಂತ್ರಿ ಶುಭ ಹಾರೈಸಿದರು. ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ನಿರ್ಗತಿಕ ವಯೋವೃದ್ಧರ ಆಶ್ರಯತಾಣವಾದ ಕಾರುಣ್ಯ ಆಶ್ರಯಧಾಮಕ್ಕೆ ಒಂದು ತಿಂಗಳಿಗೆ ಬೇಕಾಗುವ ದಿನಸಿ ಸಾಮಾನುಗಳನ್ನು ಕುಮಾರ್‌ ಅವರಿಗೆ ಹಸ್ತಾಂತರಿಸಲಾಯಿತು.ಪ್ರೇರಣಾ ಟ್ರಸ್ಟ್‌ ಕಟಪಾಡಿ ಇದರ ನಿರ್ದೇಶಕ ರಾಘವೇಂದ್ರ ರಾವ್‌ ಕಟಪಾಡಿ, ಕೃಷ್ಣ  ಕುಮಾರ್‌ ಮಟ್ಟು ಉಪಸ್ಥಿತರಿದ್ದರು. ಕಟಪಾಡಿ ಶಂಕರ ಪೂಜಾರಿ ಸ್ವಾಗತಿಸಿದರು. ಶ್ರೀಕರ ಅಂಚನ್‌ ವಂದಿಸಿದರು. ಅಪ್ಪು ಪೂಜಾರಿ  ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next